ಮಡಿಕೇರಿ, ಸೆ. ೧೮: ಮಡಿಕೇರಿ ನಗರದ ಅಭಿವೃದ್ಧಿ ಕಾರ್ಯಗಳಿಗೆ ನಗರಸಭಾ ಆಡಳಿತದಲ್ಲಿರುವ ಬಿಜೆಪಿಯವರು ತೊಡರುಗಾಲು ಹಾಕುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ತೆನ್ನಿರ ಮಹೀನಾ; ಮಡಿಕೇರಿ ನಗರದ ಅಭಿವೃದ್ಧಿ ಕಾರ್ಯಗಳಿಗೆ ನಗರಸಭಾ ಆಡಳಿತಗಾರರು ತೊಡರುಗಾಲು ಹಾಕುತ್ತಿದ್ದಾರೆ. ನಾಡ ಹಬ್ಬ ದಸರಾ ಆಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಪ್ರಮುಖವಾಗಿ ಕರಗ ದೇವತೆಗಳು, ದಶ ಮಂಟಪಗಳು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲೆಂದು ರಸ್ತೆ ದುರಸ್ತಿ ಕಾರ್ಯ ಕಳೆದ ಎರಡು ದಿನದ ಹಿಂದೆ ಆರಂಭಿಸಲಾಗಿದೆ. ಆದರೆ, ಬಿಜೆಪಿಯರ ಆಪ್ತ ಗುತ್ತಿಗೆದಾರರಿಗೆ ಕಾಮಗಾರಿ ನೀಡಿಲ್ಲವೆಂಬ ಕಾರಣಕ್ಕಾಗಿ ನಗರ ಸಭಾ ಅಧ್ಯಕ್ಷರು, ಉಪಾಧ್ಯಕ್ಷರು ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ. ಎಂದು ಆರೋಪಿಸಿದರು. ಎನ್‌ಡಿಆರ್‌ಎಫ್ ನಿಧಿಯಡಿ ತುರ್ತು ಕೆಲಸಕ್ಕಾಗಿ ೪ಜಿ ನಿಯಮದಡಿ ರೂ.೩೮ಲಕ್ಷ ವೆಚ್ಚದಲ್ಲಿ ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದು, ಗಿರೀಶ್ ಹಾಗೂ ದೇವರಾಜ್ ಎಂಬವರುಗಳಿಗೆ ಗುತ್ತಿಗೆ ನೀಡಲಾಗಿತ್ತು. ಆದರೆ, ಬಿಜೆಪಿಯವರ ನಿರ್ದಿಷ್ಟ ಗುತ್ತಿಗೆದಾರರಿಗೆ ಗುತ್ತಿಗೆ ನೀಡಿಲ್ಲವೆಂಬ ಕಾರಣಕ್ಕಾಗಿ ಕಾಮಗಾರಿಯನ್ನು ತಡೆ ಹಿಡಿಯಲಾಗಿದೆ. ಟೆಂಡರ್ ಆಗಿಲ್ಲವೆಂಬ ಕಾರಣ ನೀಡಲಾಗುತ್ತಿದೆ, ಟೆಂಡರ್ ಕರೆದರೆ ಸಮಯ ಹಿಡಿಯಲಿದ್ದು, ದಸರಾ ಒಳಗಡೆ ಕೆಲಸ ಆಗುವದಿಲ್ಲ. ಈ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿದೆ. ಇಂತಹ ಕೆಟ್ಟ ಪರಿಸ್ಥಿತಿ ಇದುವರೆಗೆ ಆಗಿರಲಿಲ್ಲ. ನಗರ ಸಭೆ ಆಡಳಿತದವರಲ್ಲಿ ಮೂರು ಬಣ ಆಗಿದೆ, ಅಧ್ಯಕ್ಷರು ಉಪಾಧ್ಯಕ್ಷರ ಕೈಗೊಂಬೆಯಾಗಿದ್ದಾರೆ. ಉಪಾಧ್ಯಕ್ಷರು ಇನ್ಯಾರೋ ಮುಖಂಡರ ಕೈಗೊಂಬೆಯಾಗಿದ್ದಾರೆ ಎಂದು ಮಹೀನಾ ಟೀಕಿಸಿದರು. ನಗರ ಸಭೆ ಎರಡನೇ ಅವಧಿಯ ಆಡಳಿತ ಅಧಿಕಾರಕ್ಕೆ ಬಂದು ಆರು ತಿಂಗಳಾದರೂ ಇದುವರೆಗೆ ಯಾವದೇ ಸಭೆ ನಡೆಸಿಲ್ಲ, ಕೆಲಸ ಆಗಿಲ್ಲ. ಶಾಸಕರ ನಿಧಿಯಿಂದ ೨೦೨೩-೨೪ರಲ್ಲಿ ರೂ.೩ಕೋಟಿ, ೨೫-೨೬ರಲ್ಲಿ ೩.೫ ಕೋಟಿ ಅನುದಾನ ಬಂದಿದ್ದು ಆಯ್ದ ಕಡೆಗಳಲ್ಲಿ ರಸ್ತೆ ನಿರ್ಮಾಣ, ದುರಸ್ತಿ ಕಾರ್ಯಗಳಾಗುತ್ತಿವೆ. ಆದರೂ ರಸ್ತೆ ದುರಸ್ತಿ ಕಾರ್ಯವನ್ನು ತಡೆ ಹಿಡಿದಿದ್ದಾರೆ. ಹಾಗಾಗಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವದಾಗಿ ಹೇಳಿದರು.
ಆಡಳಿತದಲ್ಲಿ ಒಳಜಗಳ
ನಗರಸಭಾ ಮಾಜಿ ಸದಸ್ಯ ಹಾಗೂ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ; ಈಗಾಗಲೇ ಸರಕಾರ ನಗರ ಸಭೆಗೆ ನಾಲ್ಕು ಮಂದಿ ಸ್ಥಾಯಿ ಸಮಿತಿ ಅಧ್ಯಕ್ಷರುಗಳನ್ನು ನೇಮಕ ಮಾಡುವಂತೆ ಆದೇಶ ಹೊರಡಿಸಿದೆ. ಆದರೂ ಆಡಳಿತದವರು ಆ ಕೆಲಸವನ್ನು ಮಾಡಿಲ್ಲ. ತಮಗೆ ಬೇಕಾದ ಓರ್ವರಿಗೆ ನೀಡಲು ಮುಂದಾಗಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಗಮನ ಕೊಡುವ ಬದಲಿಗೆ ಆಡಳಿತದವರಲ್ಲಿಯೇ ಒಳಜಗಳ ಆಗುತ್ತಿದೆ ಎಂದು ಹೇಳಿದರು. ಬಿಜೆಪಿ ಸದಸ್ಯರುಗಳ ಪೈಕಿ ಕೆ.ಎಸ್. ರಮೇಶ್ ಹಿರಿಯರಿದ್ದಾರೆ, ಅವರನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಮಾಜಿ ಅಧ್ಯಕ್ಷರಾದ ಪಿ.ಡಿ. ಪೊನ್ನಪ್ಪ, ಪ್ರಕಾಶ್ ಅವರುಗಳಿದ್ದಾರೆ ಅಂತಹವರ ಸಲಹೆ ಪಡೆದು ಅಭಿವೃದ್ಧಿ ಕಾರ್ಯ ಮಾಡಬಹುದು. ಆದರೆ, ಕೆಲವೇ ಮಂದಿಯ ಒಂದು ಬಣ ಮಾತ್ರ ಸೇರಿಕೊಂಡು ವ್ಯವಹಾರ ಮಾಡುವಂತಾಗಿದೆ. ಅಧಿಕಾರ ಹಂಚಿಕೆ ಮಾಡುತ್ತಿಲ್ಲ. ಅಧ್ಯಕ್ಷರು ತಮ್ಮ ಸ್ವಂತ ವಿವೇಚನೆಯಿಂದ ಸಭೆ ಕರೆದು ಅಭಿವೃದ್ಧಿ ಕಾರ್ಯಗಳನ್ನು ಮಾಡಲಿ ಎಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ನಗರ ಸಭಾ ಮಾಜಿ ಅಧ್ಯಕ್ಷೆ ಜುಲೇಕಾಬಿ, ನಾಮ ನಿರ್ದೇಶಿತ ಸದಸ್ಯರುಗಳಾದ ಮಂಡಿರ ಸದಾ ಮುದ್ದಪ್ಪ, ಜಿ.ಸಿ.ಜಗದೀಶ್, ಮುದ್ದುರಾಜು ಇದ್ದರು.