ವೀರಾಜಪೇಟೆ, ಸೆ. ೧೩: ಶ್ರೀ ಕೃಷ್ಣನ ಉಪದೇಶಾಮೃತವಾದ ಭಗವದ್ಗೀತೆ ಸರ್ವಕಾಲಿಕ ಸತ್ಯ. ಸನಾತನ ಧರ್ಮದಲ್ಲಿ ಭಗವದ್ಗೀತೆಯನ್ನು ಪವಿತ್ರ ಗ್ರಂಥವೆAದು ಪರಿಗಣಿಸಲಾಗಿದೆ ಎಂದು ಪೊನ್ನಂಪೇಟೆ ಸಾಯಿಶಂಕರ್ ಬಿ.ಬಿ ಎಡ್ ಕಾಲೇಜಿನ ಪ್ರಾಂಶುಪಾಲರಾದ ಪಿ.ಎ. ನಾರಾಯಣ ಅಭಿಪ್ರಾಯಪಟ್ಟರು.
ಕಾವೇರಿ ಗಣೇಶೋತ್ಸವ ಸಮಿತಿ-ಮೂರ್ನಾಡು ರಸ್ತೆ ಹಾಗೂ ದಕ್ಷಿಣ ಕೊಡಗು ಮಹಿಳಾ ಲೇಖಕಿಯರ ಹಾಗೂ ಕಲಾವಿದರ ವೇದಿಕೆ ವತಿಯಿಂದ ಗಣೇಶೋತ್ಸವ ಸಮಿತಿ ವೇದಿಕೆಯಲ್ಲಿ ನಡೆದ ಭಗವದ್ಗೀತೆ ಶ್ಲೋಕ ಮತ್ತು ಭಾವಾರ್ಥ ಪಠಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿದಿನ ನಾವು ಭಗವದ್ಗೀತೆ ಶ್ಲೋಕವನ್ನು ಪಠಿಸಿದರೆ ಮನಸ್ಸಿನಲ್ಲಿ ಸುಖ ಶಾಂತಿ, ಆತ್ಮಸ್ಥೆöÊರ್ಯ ಮೂಡಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿದ್ದ ಸಾಹಿತಿಗಳಾದ ಕಿಗ್ಗಾಲು ಗಿರೀಶ್ ಮಾತನಾಡಿ, ಶ್ರೀಕೃಷ್ಣನು ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಗೀತೆಯನ್ನು ಉಪದೇಶಿಸಿದ್ದು, ಈ ಮೂಲಕ ಅವರು ಜೀವನದ ಸಾರವನ್ನು ಜನರಿಗೆ ವಿವರಿಸಿದ್ದಾರೆ. ಭಗವದ್ಗೀತೆ ಎಲ್ಲ ಧರ್ಮದವರಿಗೂ ಪ್ರೇರಣೆಯಾಗುವ ಗ್ರಂಥ ಎಂದರು.
ಗೋಣಿಕೊಪ್ಪ ವಿದ್ಯಾನಿಕೇತನ ಕಾಲೇಜಿನ ಉಪನ್ಯಾಸಕ ಎಸ್ ರಘುನಾಥ್ ಅವರು ಮಾತನಾಡಿ, ಶ್ರೀಕೃಷ್ಣ ಹಾಗೂ ಸುಧಾಮನ ಬಾಂಧವ್ಯ, ಗೆಳೆತನಕ್ಕೆ ಮಾದರಿಯಾಗಿದೆ. ದೇಶದಲ್ಲಿ ಆದ್ಯ ದೇವತೆಯಾಗಿ ಪೂಜಿಸಲ್ಪಡುವ ಶ್ರೀಕೃಷ್ಣನ ಸಂದೇಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ದಕ್ಷಿಣ ಕೊಡಗು ಮಹಿಳಾ ಲೇಖಕಿಯರ ಮತ್ತು ಕಲಾವಿದರ ವೇದಿಕೆ ಅಧ್ಯಕ್ಷೆ ಪುಷ್ಪಲತಾ ಶಿವಪ್ಪ ಮಾತನಾಡಿ, ಭಗವದ್ಗೀತೆಯನ್ನು ಜೀವನದ ಮಾರ್ಗದರ್ಶನ ಮತ್ತು ಮೋಕ್ಷ ಸಾಧನೆಗಾಗಿ ಎಂದು ಅರ್ಥ ತಿಳಿದು ಪಠಿಸಬೇಕೆಂಬುದು ಪ್ರಾಜ್ಞರ ಅಭಿಮತವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾವೇರಿ ಗಣೇಶೋತ್ಸವ ಸಮಿತಿಯ ಕೋಶಾಧಿಕಾರಿ ರಾಜೇಶ್ ಆರ್ ಶೇಟ್, ಭಗವದ್ಗೀತೆಯ ಸಂದೇಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸಭಾ ಕಾರ್ಯಕ್ರಮದ ಬಳಿಕ ಶಾಲಾ ಕಾಲೇಜು ಹಾಗೂ ಸಾರ್ವಜನಿಕ ವಿಭಾಗದಲ್ಲಿ ಭಗವದ್ಗೀತೆ ಶ್ಲೋಕ ಮತ್ತು ಭಾವಾರ್ಥ ಪಠಣ ಸ್ಪರ್ಧಾ ಕಾರ್ಯಕ್ರಮ ನಡೆಯಿತು.
ಬಳಿಕ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಫರ್ಧಾಳುಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ನಾಲ್ಕು ವಿಬಾಗಗಳಲ್ಲಿ ನಡೆದ ಸ್ಫರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದುಕೊಂಡವರಿಗೆ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಲಾಯಿತು. ತೀರ್ಪುಗಾರರಾಗಿ ಗಿರೀಶ್ ಕಿಗ್ಗಾಲು, ಎಸ್ ರಘುನಾಥ್ ಕಾರ್ಯ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಮುಕ್ತ, ಕಾವೇರಿ ಗಣೇಶೋತ್ಸವ ಸಮಿತಿಯ ಸದಸ್ಯ ಸೋಮಣ್ಣ, ಸಮಿತಿಯ ಆಡಳಿತ ಮಂಡಳಿ ಪದಾಧಿಕಾರಿಗಳು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಹಾಜರಿದ್ದರು. ದಕ್ಷಿಣ ಕೊಡಗು ಲೇಖಕಿಯರ ಮತ್ತು ಕಲಾವಿದರ ವೇದಿಕೆ ಉಪಾಧ್ಯಕ್ಷೆ ರಜಿತ ಕಾರ್ಯಪ್ಪ, ಕಾರ್ಯದರ್ಶಿ ವಿಮಲ ಧಶರಥ, ಪ್ರೇಮಾಂಜಲಿ ಆಚಾರ್ಯ, ನಳಿನಾಕ್ಷಿ ಕಾರ್ಯಕ್ರಮ ನಿರ್ವಹಿಸಿದರು.