ವೀರಾಜಪೇಟೆ, ಸೆ. ೧೩: ವೀರಾಜಪೇಟೆ ನಗರ ಹಾಗೂ ತಾಲೂಕು ವರ್ತಕರ ಸಂಘ ವೀರಾಜಪೇಟೆಯಲ್ಲಿ ಅಧಿಕೃತವಾಗಿ ಶನಿವಾರ ಕಾರ್ಯಾರಂಭ ಮಾಡಿತು.

ವೀರಾಜಪೇಟೆ ನಗರದ ಪರಿವೀಕ್ಷಣಾ ಮಂದಿರದಲ್ಲಿ ನಡೆದ ಸಭೆಯಲ್ಲಿ ನೂತನ ಆಡಳಿತ ಮಂಡಳಿ ರಚನೆಯಾಗಿ ಅಧ್ಯಕ್ಷರಾಗಿ ವೀರಾಜಪೇಟೆ ಗಾಂಧಿನಗರ ನಿವಾಸಿ ಹಾಗೂ ವರ್ತಕ ಪಿ.ಎ. ಮಂಜುನಾಥ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಪಟ್ಟಡ ರಂಜಿ ಪೂಣಚ್ಚ, ಪ್ರಧಾನ ಕಾರ್ಯದರ್ಶಿಯಾಗಿ ಎ.ಎಚ್. ಮತೀನ್, ಖಜಾಂಚಿಯಾಗಿ ಆರ್. ಸುರೇಶ್, ನಿರ್ದೇಶಕರಾಗಿ. ಡಿ.ರಾಜೇಶ್ ಪದ್ಮನಾಭ, ಕೆ.ಹೆಚ್. ಮಹಮ್ಮದ್ ರಾಫಿ, ಆರ್. ರಾಜೇಶ್ ಶೇಟ್, ಟಿ.ಜೆ. ವೆಂಕಟೇಶ್, ಶಶಿ ಕೆ.ಆರ್., ಮಹಮ್ಮದ್ ಹನೀಫ್ ಎಂ.ಎಸ್. ಹಸನ್ ಮನ್ನ, ಮದನ್ ಲಾಲ್ ಬದರಾಮ್ ಎಸ್.ಕೆ. ಚೇತನ್ ಚೌಧರಿ, ಕಾನೂನು ಸಲಹೆಗಾರರಾಗಿ ವಕೀಲ ಪ್ರೀತಂ, ಸದಸ್ಯರುಗಳಾಗಿ ಟಿ.ಆರ್. ಹರ್ಷ, ರಜಾಕ್ ಕೆ.ಎಸ್. ಅವರುಗಳು ಆಯ್ಕೆಯಾಗಿದ್ದಾರೆ.

ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದ ಪಿ.ಎ. ಮಂಜುನಾಥ್ ಮಾತನಾಡಿ, ವರ್ತಕರ ಶ್ರೇಯೋಭಿವೃದ್ಧಿಗೋಸ್ಕರ ಈ ಸಂಘವನ್ನು ರಚನೆ ಮಾಡಲಾಗಿದೆ. ವಿವಿಧ ರೀತಿಯ ವ್ಯಾಪಾರಿಗಳ, ವರ್ತಕರ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಸಂಘಟಿಸಲು ಒಂದು ವರ್ತಕರ ಸಂಘಬೇಕು. ವ್ಯಾಪಾರಿಗಳು ಎದುರಿಸುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು, ವ್ಯಾಪಾರಿಗಳ ನಡುವೆ ಒಗ್ಗಟ್ಟನ್ನು ಮೂಡಿಸುವುದು ಮತ್ತು ಸಂಘಟಿಸುವುದು ಸಂಘದ ಉದ್ದೇಶವಾಗಿದೆ. ಎಲ್ಲಾ ವರ್ತಕರು ಸಂಘದೊAದಿಗೆ ಕೈಜೋಡಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಸದಸ್ಯರಾಗುವುದರ ಮೂಲಕ ಸಂಘದ ಬಲವರ್ಧನೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ನಿರ್ದೇಶಕ ರಾಜೇಶ್ ಶೇಟ್ ಮಾತನಾಡಿ, ಗ್ರಾಹಕರ ಸಂಘದ ಶ್ರೇಯೋಭಿವೃದ್ಧಿ ಯಾವ ರೀತಿ ಇದೆಯೋ ಅದೇ ರೀತಿ ವರ್ತಕರ ಅಭಿವೃದ್ಧಿ ಹಾಗೂ ಅವರ ಆಗುಹೋಗುಗಳ ಬಗ್ಗೆ ಕಾಳಜಿ ವಹಿಸಲು ಮತ್ತು ಸಮಸ್ಯೆಯಾದಾಗ ತಕ್ಷಣ ಸ್ಪಂದಿಸುವ ಉದ್ದೇಶದಿಂದ ಈ ಸಂಘ ಕಾರ್ಯ ನಿರ್ವಹಿಸುತ್ತದೆ ಎಂದು ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಎಸ್.ಹೆಚ್. ಮತೀನ್ ಮಾತನಾಡಿ, ಎಲ್ಲಾ ಅಂಗಡಿ ಮಾಲೀಕರು ಸದಸ್ಯತ್ವವನ್ನು ಪಡೆಯಬೇಕು ಎಂದು ಮನವಿ ಮಾಡಿದರು.

ಸಂಘದ ನಿರ್ದೇಶಕರಾದ ಮಹಮ್ಮದ್ ರಾಫಿ ಮಾತನಾಡಿ, ವರ್ತಕರ ಸಂಘಕ್ಕೆ ಅಧಿಕೃತವಾಗಿ ನೋಂದಾವಣೆ ಮಾಡಿ ಚಾಲನೆ ನೀಡಲಾಗಿದೆ. ಇದು ಐದು ವರ್ಷಗಳ ಹಿಂದೆಯೇ ರಚನೆಯಾಗಿದ್ದು, ವಾಟ್ಸಾö್ಯಪ್ ಗ್ರೂಪ್ ಮಾಡಿ ವರ್ತಕರ ಸಮಸ್ಯೆಗಳ ಬಗ್ಗೆ ಗಮನಿಸುತ್ತಾ ಬಂದಿದ್ದೇವೆ. ಆದರೆ ಅದನ್ನು ಇನ್ನು ಮುಂದೆ ತರುವ ನಿಟ್ಟಿನಲ್ಲಿ ಸಂಘ ನಿಂತ ನೀರಾಗದೆ ಚುರುಕುಗೊಳಿಸಬೇಕು. ಇದನ್ನು ಎಲ್ಲಾ ವರ್ತಕರ ಬಳಿ ತೆಗೆದುಕೊಂಡು ಹೋಗಿ ಇದರ ಲಾಭವನ್ನು ಎಲ್ಲಾ ವರ್ತಕರು ಪಡೆಯಬೇಕು. ನಮಗೆ ನಮ್ಮದೆ ಸಮಸ್ಯೆಗಳಿವೆ. ಇದಕ್ಕೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಸಂಘಕ್ಕೆ ಇಂದು ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಇದು ವರ್ತಕರ ಪರವಾಗಿ ಸದಾಕಾಲ ಇರುವ ಸಂಸ್ಥೆ ಎಂದು ಹೇಳಿದರು.

ಖಜಾಂಚಿ ಸುರೇಶ್ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಪ್ರಾರಂಭ ಮಾಡಿದ ಸಂಘ ಇದಾಗಿದೆ. ಸಮಾನ ಮನಸ್ಕರ ಸದಸ್ಯರು ಒಟ್ಟಾಗಿ ಸೇರಿ ಸಾಮಾಜಿಕ ಸೇವೆಗಳನ್ನು ಮಾಡುತ್ತ ಬಂದಿದ್ದು, ಈಗ ವರ್ತಕರಿಗೆ ಅವರದೇ ಆದ ಸಮಸ್ಯೆಗಳಿವೆ. ಅದನ್ನು ಪರಿಹರಿಸುವ ಉದ್ದೇಶದಿಂದ ಅಧಿಕೃತವಾಗಿ ಸಂಘ ಕಾರ್ಯನಿರ್ವಹಿಸಲಿದೆ ಎಂದು ಸಂಘದ ಉಪಯೋಗದ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭ ಸಭೆಯಲ್ಲಿ ನಿರ್ದೇಶಕರಾದ ಡಿ. ರಾಜೇಶ್ ಪದ್ಮನಾಭ, ಟಿ.ಜೆ. ವೆಂಕಟೇಶ್, ಶಶಿ ಕೆ.ಆರ್, ಮಹಮ್ಮದ್ ಹನೀಫ್ ಎಂ.ಎಸ್. ಹಸನ್ ಮನ್ನ, ಮದನ್ ಲಾಲ್ ಬದರಾಮ್ ಎಸ್.ಕೆ. ಚೇತನ್ ಚೌಧರಿ, ಸೇರಿದಂತೆ ಅನೇಕರು ಇದ್ದರು.