ಮಡಿಕೇರಿ, ಸೆ. ೧೨: ಭಾರತೀಯ ತೋಟಗಾರಿಕೆ ನಿರ್ವಹಣಾ ಸಂಸ್ಥೆ (ಐಐಪಿಎಂ)ಯ ಪ್ರತಿನಿಧಿಗಳು ಗುರುವಾರ ಇಲ್ಲಿನ ಕಾಫಿ ಮಂಡಳಿಗೆ ಭೇಟಿ ನೀಡಿ ಕಾಫಿ ಬೆಳೆಗಾರರು ಹಾಗೂ ವಿವಿಧ ಕಾಫಿ ಬೆಳೆಗಾರರ ಸಂಘದ ಪ್ರತಿನಿಧಿಗಳೊಂದಿಗೆ ಸಮಗ್ರ ಕಾಫಿ ಅಭಿವೃದ್ಧಿ ಯೋಜನೆ ಕುರಿತು ಚರ್ಚೆ ನಡೆಸಿದರು.

ಸಂಸ್ಥೆಯ ಪ್ರತಿನಿಧಿಗಳಾದ ಡಾ.ಮನಮೋಹನ್, ಡಾ.ನರೇಂದ್ರ ಹಾಗೂ ಡಾ.ಶಿಲ್ಪಾ ಇಲ್ಲಿ ಸುಮಾರು ೮೦ಕ್ಕೂ ಅಧಿಕ ಕಾಫಿ ಬೆಳೆಗಾರರು, ಕಾಫಿಗೆ ಸಂಬAಧಿಸಿದ ಸಂಘ, ಸಂಸ್ಥೆಗಳ ಪ್ರತಿನಿಧಿಗಳನ್ನು ಭೇಟಿ ಮಾಡಿದರು. ಜೊತೆಗೆ, ಕಾಫಿ ಮಂಡಳಿಯ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೂ ಸಂವಾದ ನಡೆಸಿದರು.

ಕಾಫಿ ಕೊಯ್ಲುವಿನಲ್ಲಿ ಎದುರಾಗುವ ಸವಾಲುಗಳು, ಸಬ್ಸಿಡಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಸೇರಿದಂತೆ ಹಲವು ಮಹತ್ವದ ವಿಷಯಗಳು ಚರ್ಚೆಗೆ ಬಂದವು. ಮುಂದಿನ ೫ ವರ್ಷದ ಯೋಜನೆಗಳಲ್ಲಿ ಯಾವ ಯಾವ ಅಂಶಗಳು ಸೇರಬೇಕು ಎನ್ನುವ ಕುರಿತೂ ಸಲಹೆಗಳನ್ನು ಪಡೆದರು.

ಈ ವೇಳೆ ಹಲವು ಕಾಫಿ ಬೆಳೆಗಾರರು ತಮ್ಮ ತಮ್ಮ ಸಲಹೆಗಳನ್ನು ನೀಡಿದರು. ಈ ಸಲಹೆಗಳನ್ನು ಕಾರ್ಯಗತಗೊಳಿಸಲು ವರದಿಯಲ್ಲಿ ಶಿಫಾರಸ್ಸು ಮಾಡಲು ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು. ಕಾಫಿ ಮಂಡಳಿ ಉಪನಿರ್ದೇಶಕ ಡಾ.ವಿ.ಚಂದ್ರಶೇಖರ್, ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ನಂದ ಬೆಳ್ಯಪ್ಪ, ಮಾಜಿ ಉಪಾಧ್ಯಕ್ಷ ಬೋಸ್ ಮಂದಣ್ಣ ಭಾಗವಹಿಸಿದ್ದರು.