ಮಡಿಕೇರಿ, ಸೆ. ೪: ‘ರಾಂಧವ’ ಚಿತ್ರದಲ್ಲಿ ಹೀರೋ ಆಗಿದ್ದ ಕೊಡಗಿನ ಭುವನ್ ಪೊನ್ನಣ್ಣ, ಇದೀಗ ಯೋಗರಾಜ್ ಭಟ್ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ. ‘ಹಲೋ ೧೨೩’ ಎಂಬ ಈ ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದು, ಅಮೃತಾ ಸಿನಿ ಕ್ರಾಫ್ಟ್ ಸಂಸ್ಥೆಯಡಿ ಈ ಚಿತ್ರವನ್ನು ವಿಜಯ್ ಟಾಟಾ ನಿರ್ಮಾಣ ಮಾಡುತ್ತಿದ್ದಾರೆ. ಬುಧವಾರ ಸಂಜೆ ಹಲೋ ೧೨೩ ಚಿತ್ರ ನಿರ್ಮಾಪಕ ವಿಜಯ್ ಟಾಟಾ ಅವರ ಮನೆಯಲ್ಲಿ ಚಿತ್ರದ ಸ್ಕಿçಪ್ಟ್ ಪೂಜೆಯೊಂದಿಗೆ ಶೀರ್ಷಿಕೆ ಅನಾವರಣಗೊಂಡಿದೆ. ಹರ್ಷಿಕಾ ಹಾಗೂ ಭುವನ್ ಪುತ್ರಿ ತ್ರಿದೇವಿ ಚಿತ್ರಕ್ಕೆ ಚಾಲನೆ ನೀಡಿದ್ದು ವಿಶೇಷ. ಯೋಗರಾಜ್ ಭಟ್ ಅಮೇರಿಕಾ ಪ್ರವಾಸ ಹೊರಟಿದ್ದು, ವಾಪಸ್ ಬಂದ ಕೂಡಲೇ ಚಿತ್ರದ ಉಳಿದ ಕೆಲಸಗಳು ಶುರುವಾಗಲಿದೆ. ಅಕ್ಟೋಬರ್ ತಿಂಗಳಲ್ಲಿ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ. ‘ಹಲೋ ೧೨೩’ ಮುಂದಿನ ವರ್ಷ ಮಾರ್ಚ್ ವೇಳೆಗೆ ಬಿಡುಗಡೆ ಆಗಲಿದೆ.