ಸಿದ್ದಾಪುರ, ಸೆ. ೪: ಕಾರು ಹಾಗೂ ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮಹಿಳೆ ಸಾವನ್ನಪ್ಪಿರುವ ಘಟನೆ ಮಡಿಕೇರಿ-ಮಂಗಳೂರು ಹೆದ್ದಾರಿ ನಡುವಿನ ಕಲ್ಲುಗುಂಡಿಯ ಕಡೆಪಾಲ ಎಂಬಲ್ಲಿ ನಡೆದಿದೆ. ನೆಲ್ಲಿಹುದಿಕೇರಿ ನಿವಾಸಿ ಪೊನ್ನಪ್ಪ ಎಂಬವರ ಪತ್ನಿ ಶೋಭಾ (೫೦) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ.

ನೆಲ್ಲಿಹುದಿಕೇರಿ ಗ್ರಾಮ ನಿವಾಸಿ, ಗುತ್ತಿಗೆದಾರ ಪಿ.ಆರ್. ದೇವಯ್ಯ ಅವರ ಪತ್ನಿ ಮೈನಾ ಹಾಗೂ ಅವರ ಅಣ್ಣ ಪೊನ್ನಪ್ಪ ಅವರ ಪತ್ನಿ ಶೋಭಾ ಅವರುಗಳು ಸುಳ್ಯಕ್ಕೆ ಡಸ್ಟರ್ ಕಾರಿನಲ್ಲಿ ತೆರಳಿ ಅಲ್ಲಿಂದ ಮಧ್ಯಾಹ್ನ ಹಿಂದಿರುಗುವ ಸಂದರ್ಭ ಮಡಿಕೇರಿಯಿಂದ ಸುಳ್ಯ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದ ಟ್ಯಾಂಕರ್‌ಗೆ ಡಿಕ್ಕಿಯಾಗಿದೆ. ಪರಿಣಾಮ ಶೋಭಾ ಅವರ ತಲೆಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ.

ಕಾರು ಚಲಾಯಿಸುತ್ತಿದ್ದ ದೇವಯ್ಯ ಅವರ ಸೊಂಟಕ್ಕೆ ಬಲವಾದ ಗಾಯವಾಗಿದ್ದು, ಅವರ ಪತ್ನಿ ಮೈನಾ ಅವರ ಕಾಲಿಗೂ ಪೆಟ್ಟಾಗಿದೆ. ಇವರುಗಳನ್ನು ಕೂಡಲೆ ಆ್ಯಂಬ್ಯುಲೆನ್ಸ್ ಮೂಲಕ ಸುಳ್ಯದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತು. ಮೈನಾ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದೇವಯ್ಯ ಅವರ ಅಕ್ಕನ ಮನೆ ಸುಳ್ಯದಲ್ಲಿದ್ದು, ಬುಧವಾರ ರಜೆ ದಿನವಾದ ಕಾರಣ ಅವರ ಆರೋಗ್ಯ ವಿಚಾರಿಸಲು ಕಾರಿನಲ್ಲಿ ತೆರಳಿದ್ದರು. ಬಳಿಕ ಮಧ್ಯಾಹ್ನ ಅಕ್ಕನ ಮನೆಯಿಂದ ಊಟ ಮುಗಿಸಿಕೊಂಡು ಅಭ್ಯತ್‌ಮಂಗಲದಲ್ಲಿರುವ ಶೋಭಾ ಅವರ ಪುತ್ರಿಯ ಮನೆಗೆ ತೆರಳುವ ಉದ್ದೇಶದಿಂದ ಮಧ್ಯಾಹ್ನವೇ ಸುಳ್ಯದಿಂದ ಕಾರಿನಲ್ಲಿ ಪ್ರಯಾಣ ಬೆಳೆಸುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಲಾರಿಯ ಮುಂಭಾಗಕ್ಕೂ ಹಾನಿಯಾಗಿದೆ.

ಶೋಭಾ ಅವರ ಪತಿ ಪೊನ್ನಪ್ಪ ಗುಡ್ಡೆಹೊಸೂರು ಬಳಿ ಮೆಕ್ಯಾನಿಕ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. -ವಾಸು