ಶನಿವಾರಸಂತೆ, ಸೆ. ೧ : ಮನುಷ್ಯನ ಆರೋಗ್ಯ , ನೆಮ್ಮದಿ, ಶಾಂತಿ ಹಾಗೂ ಸಹಬಾಳ್ವೆಯ ಬದುಕಿಗೆ ಶರಣರ ವಚನಗಳ ಅರಿವು ಸಹಕಾರಿ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಪೀಠಾಧಿಪತಿ ಸದಾಶಿವ ಸ್ವಾಮೀಜಿ ಹೇಳಿದರು.
ಸಮೀಪದ ಆಲೂರುಸಿದ್ದಾಪುರ ಮೊರಾರ್ಜಿ ದೇಸಾಯಿ ಆಂಗ್ಲ ಮಾದ್ಯಮ ವಸತಿ ಶಾಲೆಯಲ್ಲಿ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಸುತ್ತೂರು ಮಹಾ ಸಂಸ್ಥಾನದ ೨೩ ನೇ ಜಗದ್ಗುರು ಡಾ.ಶಿವರಾತ್ರೀಶ್ವರ ರಾಜೇಂದ್ರ ಸ್ವಾಮೀಜಿಯವರ ೧೧೦ ನೇ ಸಂಸ್ಮರಣೆ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ಸಪ್ತ ಸೂತ್ರಗಳನ್ನು ಮನುಷ್ಯ ತನ್ನ ನಿಜ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಸುಂದರ ಬದುಕನ್ನು ಕಟ್ಟಬಹುದು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಸರ್ಕಾರದ ಮಾಹಿತಿ ಹಕ್ಕು ಆಯೋಗದ ನಿವೃತ್ತ ಆಯುಕ್ತ ಜೆ.ಎಸ್. ವಿರೂಪಾಕ್ಷಯ್ಯ ಮಾತನಾಡಿ, ಸುತ್ತೂರಿನ ಡಾ.ರಾಜೇಂದ್ರ ಸ್ವಾಮೀಜಿ ಅವರಿಗೆ ಸಮಾಜವೇ ಕುಟುಂಬವಾಗಿತ್ತು. ಹಾಗಾಗಿ ಜಾತಿ-ಧರ್ಮಗಳನ್ನು ಲೆಕ್ಕಿಸದೇ ಎಲ್ಲರಿಗೂ ಸಮಾನ ಶಿಕ್ಷಣ, ವಸತಿ ಹಾಗೂ ಆರೋಗ್ಯ ನೀಡಿದರು. ವಿದ್ಯಾರ್ಥಿಗಳು ಸರ್ಕಾರದ ಸವಲತ್ತುಗಳನ್ನು ಪಡೆದು ವಿದ್ಯಾವಂತರಾಗಬೇಕು ಎಂದರು.
ಮುಖ್ಯ ಅತಿಥಿ ಜಿಲ್ಲಾ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷೆ ರುಬಿನಾ ಮಾತನಾಡಿ, ಶರಣರ ವಿಚಾರಧಾರೆಗಳನ್ನು ವಿದ್ಯಾರ್ಥಿಗಳ ಮೂಲಕ ಸಮಾಜದಲ್ಲಿ ಬಿತ್ತುವ ಕೆಲಸವಾಗಬೇಕಿದೆ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿ, ನಾಡಿನ ಜನಸಮುದಾಯಕ್ಕೆ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅರೆ ಸರ್ಕಾರದ ಮಾದರಿಯಲ್ಲಿ ಸುತ್ತೂರು ಸಂಸ್ಥಾನ ಕಾರ್ಯನಿರ್ವಹಿಸುತ್ತಿದೆ ಎಂದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಕೆ.ಪ್ರಕಾಶ್ ಮಾತನಾಡಿದರು. ವಿದ್ಯಾರ್ಥಿಗಳಿಂದ ವಚನ ಗಾಯನ ಕಾರ್ಯಕ್ರಮ ನಡೆಯಿತು. ಕಂದಾಯ ಇಲಾಖೆ ನಿವೃತ್ತ ಅಧಿಕಾರಿ ಬಿ.ನಟರಾಜ್, ಕೋಶಾಧಿಕಾರಿ ಕೆ.ಪಿ. ಪರಮೇಶ್, ಶಾಲೆಯ ಪೋಷಕ ಸಮಿತಿ ಪದಾಧಿಕಾರಿಗಳಾದ ಶಶಿಧರ್, ಬೀನಾ, ಜಗದೀಶ್, ಧರ್ಮ ಹಾಜರಿದ್ದರು. ಶಿಕ್ಷಕಿ ಟಿ.ಎಲ್. ಲೋಲಾಕ್ಷಿ ವಚನ ಗೀತೆ ಹಾಡಿದರು. ಶಿಕ್ಷಕರಾದ ಅಶೋಕ್ ಇಟಗಿ ನಿರೂಪಿಸಿ, ವೇಣುಗೋಪಾಲ್ ವಂದಿಸಿದರು.