ಸೋಮವಾರಪೇಟೆ, ಸೆ. ೧: ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿ ಸುತ್ತಿದೆ. ವಿದ್ಯಾರ್ಥಿಗಳು ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಡಾ.ಮಂತರ್‌ಗೌಡ ಹೇಳಿದರು. ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಸರ್ಕಾರಿ ಪದವಿ ಪೂರ್ವ ಕಾಲೇಜು ಸೋಮವಾರಪೇಟೆ, ಆಸರೆ ಫೌಂಡೇಶನ್ ವತಿಯಿಂದ ಕಾಲೇಜು ಸಭಾಂಗಣದಲ್ಲಿ ನಡೆದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ವಿದ್ಯಾಸಂಸ್ಥೆಯಲ್ಲಿ ಹೆಚ್ಚಿನ ಜ್ಞಾನ ಹೊಂದಿರುವ ಬೋಧಕ ವರ್ಗವಿರುತ್ತದೆ. ಇಂದಿನ ಸ್ಪರ್ಧಾತ್ಮಕ ಮತ್ತು ಆಧುನಿಕ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಜೀವನ ನಿರ್ವಹಣಾ ಕೌಶಲ್ಯ ಜ್ಞಾನ ಹೊಂದಬೇಕು. ನಿರಂತರ ಕಲಿಕೆಗೆ ಹೆಚ್ಚಿನ ಸಮ ಯವನ್ನು ಮೀಸಲಿಡಬೇಕು ಎಂದು ಹೇಳಿದರು. ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಹೆಚ್ಚಿನ ಅಂಕಗಳಿಸಿದ ಹಾಗು ಪದವಿ ಶಿಕ್ಷಣ ಮಾಡುತ್ತಿರುವ ಕಾಲೇಜಿನ ಪ್ರತಿಭಾನಿತ್ವ ಬಡ ವಿದ್ಯಾರ್ಥಿಗಳಿಗೆ ಆಸರೆ ಫೌಂಡೇಶನ್ ವತಿಯಿಂದ ಪ್ರೋತ್ಸಾಹಧನ ವಿತರಿಸಲಾಯಿತು. ಕಾಲೇಜಿನ ಅಭಿವೃದ್ದಿಗೆ ಧನಸಹಾಯ ಮಾಡಿರುವ ಉದ್ಯಮಿಗಳಾದ ಸಿ.ಇ.ಚೇತನ್, ವಿಜಯ ಕುಮಾರ್ ಬೆಂಗಳೂರು ಹಾಗೂ ನಿವೃತ್ತ ಉಪನ್ಯಾಸಕಿ ಎಂ.ಬಿ.ತಿಲೋತ್ತಮೆ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವಿ.ಎ.ಲಾರೆನ್ಸ್, ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ, ಸಂತ ಜೋಸೆಫರ ವಿದ್ಯಾಸಂಸ್ಥೆಯ ವ್ಯವಸ್ಥಾಪಕರಾದ ಅವಿನಾಶ್, ಪ್ರಮುಖರಾದ ಶೀಲಾ ಡಿಸೋಜ, ಕೆ.ಎಂ.ಲೋಕೇಶ್, ಬಿ.ಬಿ.ಸತೀಶ್, ಪ್ರಾಂಶುಪಾಲರಾದ ಬಿ.ಎಂ.ಬೆಳ್ಳಿಯಪ್ಪ ಇದ್ದರು.