ಸೋಮವಾರಪೇಟೆ, ಆ. ೨೮: ಗಣೇಶ ಚತುರ್ಥಿ ಹಬ್ಬದ ದಿನದಂದು ತಾಲೂಕಿನ ಬಾಣಾವರ ಕಲ್ಲುಕೋರೆ ಕೆರೆಗೆ ಧುಮುಕಿದ್ದ ವ್ಯಕ್ತಿಯೋರ್ವರು ಇಂದು ಶವವಾಗಿ ಪತ್ತೆಯಾಗಿದ್ದಾರೆ.

ಗೋಣಿಮರೂರು, ಮಾಲಂಬಿ ಹಾಡಿಗಳಲ್ಲಿ ವಾಸವಿದ್ದ ರಾಜು (೪೮) ಎಂಬವರೇ ಸಾವನ್ನಪ್ಪಿದವರು. ಗಣೇಶ ಹಬ್ಬದ ದಿನವಾದ ನಿನ್ನೆ ಮಧ್ಯಾಹ್ನ ೩.೧೫ರ ಸುಮಾರಿಗೆ ಸೋಮವಾರಪೇಟೆ-ಕೊಣನೂರು ರಾಜ್ಯ ಹೆದ್ದಾರಿ ಬದಿಯಲ್ಲಿರುವ ಬಾಣಾವರ ಕಲ್ಲುಕೋರೆಯ ಕೆರೆಗೆ ಧುಮುಕಿದ್ದರು.

ಕೆರೆಯ ದಡದಲ್ಲಿ ಪ್ಯಾಂಟ್ ಹಾಗೂ ಶರ್ಟ್ನ್ನು ಬಿಚ್ಚಿ ಕೆರೆಗೆ ಇಳಿದ ರಾಜು ಅವರನ್ನು ದೂರದಿಂದ ಗಮನಿಸಿದ ಸ್ಥಳೀಯರು, ತಕ್ಷಣ ಕೆರೆಯ ಸಮೀಪಕ್ಕೆ ಆಗಮಿಸಿ ನೋಡುವಾಗ ಕ್ಷಣಮಾತ್ರದಲ್ಲಿ ನೀರಿನಲ್ಲಿ ಮುಳುಗಿ ಹೋಗಿದ್ದರು.

ಎಷ್ಟೇ ಹೊತ್ತಾದರೂ ಮೇಲೆ ಬಾರದ ಹಿನ್ನೆಲೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ತೆರಳಿದ ಪೊಲೀಸ್ ಸಿಬ್ಬಂದಿಗಳು ಪರಿಶೀಲನೆ ನಡೆಸಿ, ಅಗ್ನಿ ಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದರು. ಅಗ್ನಿಶಾಮಕ ದಳದವರು ಸಂಜೆಯವರೆಗೂ ಕಾರ್ಯಾಚರಣೆ ನಡೆಸಿದರೂ ರಾಜು ಅವರು ಪತ್ತೆಯಾಗಿರಲಿಲ್ಲ.

ಇಂದೂ ಕೂಡ ಬೆಳಗ್ಗಿನಿಂದಲೇ ರ‍್ಯಾಫ್ಟಿಂಗ್ ಬೋಟ್ ಹಾಗೂ ಕಬ್ಬಿಣದ ಕೊಕ್ಕೆಗಳನ್ನು ಬಳಸಿ ಹುಡುಕಾಟ ಆರಂಭಿಸಿದ್ದರು. ಮಧ್ಯಾಹ್ನದ ವೇಳೆಗೆ ಕೆರೆಯೊಳಗೆ ಹುದುಗಿದ್ದ ರಾಜು ಅವರ ಮೃತದೇಹ ಮೇಲೆ ಬಂತು. ನಂತರ ಮೃತದೇಹವನ್ನು ದಡಕ್ಕೆ ಸಾಗಿಸಲಾಯಿತು.

ನಿನ್ನೆ ಸಂಜೆಯಿAದಲೂ ದಡದಲ್ಲಿ ಪ್ಯಾಂಟ್ ಮತ್ತು ಶರ್ಟ್ ಮಾತ್ರ ಇದ್ದುದರಿಂದ ನೀರಿನಲ್ಲಿ ಮುಳುಗಿರುವುದು ಯಾರೆಂಬ ಬಗ್ಗೆ ಸಂಶಯವಿತ್ತು. ಇಂದು ಮೃತದೇಹವನ್ನು ಹೊರತೆಗೆದ ನಂತರ ಸ್ಥಳೀಯರು ಗುರುತು ಪತ್ತೆ ಹಚ್ಚಿದರು.

ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಪಿ.ಎಸ್. ನಾಗೇಶ್, ಲಕ್ಷಿö್ಮÃಕುಮಾರ್, ವಿನಯ್, ಚೇತನ್, ಪ್ರಕಾಶ್ ಅವರುಗಳ ತಂಡ ಮೃತದೇಹವನ್ನು ಪತ್ತೆ ಹಚ್ಚಿ ಹೊರ ತೆಗೆಯಿತು. ಪೊಲೀಸ್ ಠಾಣಾಧಿಕಾರಿ ಗೋಪಾಲ್, ಸಿಬ್ಬಂದಿಗಳಾದ ಅನಂತ್, ಪರಮೇಶ್, ನಂದ ಅವರುಗಳು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತ ರಾಜು ಅವರು ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ.