ಶನಿವಾರಸಂತೆ, ಆ. ೨೬: ಶನಿವಾರಸಂತೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಉತ್ತಮ ಲಾಭದಲ್ಲಿ ಮುನ್ನಡೆಯುತ್ತಿದ್ದು ಪ್ರಸ್ತುತ ಸಾಲಿನಲ್ಲಿ ರೂ. ೨೧,೩೨,೦೫೦ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಡಿ.ಬಿ. ಧರ್ಮಪ್ಪ ಹೇಳಿದರು.
ಪಟ್ಟಣದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ೨೦೨೪-೨೦೨೫ ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು ೨೦೨೪-೨೫ ನೇ ಸಾಲಿನ ಆಡಿಟ್‌ನಲ್ಲಿ ‘ಎ’ ಶ್ರೇಣಿ ಪಡೆದಿದೆ. ಮಾರಾಟ ಸಂಘದಲ್ಲಿ ವ್ಯಾಪಾರ-ವಹಿವಾಟು ನಡೆದು ಪ್ರತಿಯೊಬ್ಬರು ದುಡಿದಾಗ ಸಂಘದ ಅಭಿವೃದ್ಧಿ ಸಾಧ್ಯ. ಸಹಕಾರಿ ಇಲಾಖೆ ಅಧಿಕಾರಿಗಳು, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಿಬ್ಬಂದಿಗಳ ದುಡಿಮೆಯಿಂದಾಗಿ ಸಂಘ ಪ್ರಗತಿ ಸಾಧಿಸಿದೆ. ಸಹಕಾರಿಗಳು ಒಗ್ಗಟ್ಟಾಗಿರುವುದರಿಂದ ಪ್ರಗತಿ ಸಾಧ್ಯ ಎಂದರು.
ಸಂಘದ ನಿರ್ದೇಶಕ ಎಸ್.ಸಿ.ಶರತ್ ಶೇಖರ್ ಮಾತನಾಡಿ, ಸಹಕಾರ ಸಂಘವು ಶನಿವಾರಸಂತೆ ಭಾಗದ ರೈತರ ಸಂಘವಾಗಿ ಪ್ರಗತಿ ಸಾಧಿಸುತ್ತಿದೆ. ೫ ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯನ್ನು ನಿರ್ವಹಿಸುತ್ತಾ ವ್ಯಾಪಾರ ಅಭಿವೃದ್ಧಿಯನ್ನು ವಿಸ್ತರಿಸಿಕೊಂಡಿದೆ. ರೈತರ ಒಳಿತಿಗಾಗಿ ರೂ. ೬೧ ಲಕ್ಷ ವೆಚ್ಚದ ಗೋದಾಮ ನಿರ್ಮಿಸಿ, ಸ್ವಂತ ಬಂಡವಾಳದಿAದ ೬ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದೆ. ರೈತರು ನಿಯಂತ್ರಿತ ಬೆಲೆಯ ಸಾಮಗ್ರಿಗಳನ್ನು, ರಸಗೊಬ್ಬರವನ್ನು ಇತರೆ ವಸ್ತುಗಳನ್ನು ಸಂಘದಲ್ಲೇ ಖರೀದಿಸಿದರೆ ಸಂಘ ಮತ್ತಷ್ಟು ಲಾಭದಾಯಕವಾಗಿ ನಡೆಯುತ್ತದೆ ಎಂದರು.