ಸಾವಿರಾರು ಭಕ್ತಾದಿಗಳಿಂದ ಪೂಜೆ | ಜಿಲ್ಲೆಯಾದ್ಯಂತ ಗೌರಿ ವ್ರತಾಚರಣೆ

ಸೋಮವಾರಪೇಟೆ, ಆ. ೨೬: ಶತಮಾನಗಳ ಹಿಂದೆ ಏಳುಸಾವಿರ ಸೀಮೆಯೆಂದು ಕರೆಯಲ್ಪಡುತ್ತಿದ್ದ ಪ್ರದೇಶದಲ್ಲಿ ಒಮ್ಮಿಂದೊಮ್ಮೆಲೆ ಭೀಕರ ಬರಗಾಲ ಬಂದು ಊರಿನಲ್ಲಿದ್ದ ಬೃಹತ್ ಕೆರೆಯಲ್ಲೂ ಹನಿ ನೀರು ಸಿಗದಾದಾಗ, ಸಾಕ್ಷಾತ್ ಜಲದೇವತೆಯಾಗಿ ಕೆರೆಗೆ ಹಾರವಾದ ದೈವಿಕ ಇತಿಹಾಸ ಹೊಂದಿರುವ ತಾಲೂಕಿನ ಹೊನ್ನಮ್ಮನ ಕೆರೆಗೆ ಗೌರಿ ಹಬ್ಬದ ದಿನವಾದ ಇಂದು ಬಾಗಿನ ಅರ್ಪಿಸಲಾಯಿತು.

ಇಲ್ಲಿಗೆ ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಇತಿಹಾಸ ಪ್ರಸಿದ್ಧ, ಎಂದೂ ಬತ್ತದ ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.

ವರ್ಷಂಪ್ರತಿ ಗೌರಿ ಹಬ್ಬದ ದಿನದಂದು ನೂರಾರು ನವ ದಂಪತಿಯರು ಸೇರಿದಂತೆ ಸಾವಿರಾರು ಮಂದಿ ಆಗಮಿಸಿ ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಿಸಿ ಸರ್ವಮಂಗಳಕ್ಕಾಗಿ ಪ್ರಾರ್ಥಿಸುವದು ಹಿಂದಿನಿAದಲೂ ನಡೆದುಕೊಂಡು ಬಂದ ಪದ್ದತಿ.

ಸ್ವರ್ಣಗೌರಿ ಹಬ್ಬದ ದಿನವಾದ ಇಂದು ಬೆಳಿಗ್ಗೆ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕ್ಷೇತ್ರದಲ್ಲಿರುವ ಶ್ರೀ ಹೊನ್ನಮ್ಮ ತಾಯಿ, ಬಸವೇಶ್ವರ ಗುಡಿಯಿರುವ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಬಾಗಿನ (ಮೊರದಲ್ಲಿ ಅರಶಿಣ, ಕುಂಕುಮ, ಬಿಚ್ಚೋಲೆ, ರವಿಕೆ ಕಣ, ಕನ್ನಡಿ, ಬಳೆ, ಹೂವು, ಫಲತಾಂಬೂಲ)ವನ್ನು ದೇವಾಲಯದ ಪಕ್ಕದಲ್ಲಿರುವ ಬಂಗಾರದ ಕಲ್ಲಿನ ಕಟ್ಟೆಯ ಮೇಲಿಟ್ಟು ಪೂಜೆ ಸಲ್ಲಿಸಿದ ನಂತರ ಮೊದಲು ಹೊನ್ನಮ್ಮನ ಕುಟುಂಬಸ್ಥರು ಬಾಗಿನ ಅರ್ಪಿಸಿದರು. ನಂತರ ಶ್ರೀ ಸಿದ್ದೇಶ್ವರ ಬಸವೇಶ್ವರ ಹಾಗೂ ಸ್ವರ್ಣಗೌರಿ ಹೊನ್ನಮ್ಮ ದೇವಾಲಯ ಸಮಿತಿಯವರು ಕೆರೆಗೆ ಬಾಗಿನ ಅರ್ಪಿಸಿದರು.

ನಂತರ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ರಾಜ್ಯ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ತಾ.ಪಂ. ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್, ಮಾಜಿ ಸದಸ್ಯ ಹೆಚ್.ಆರ್.ಸುರೇಶ್, ಆರ್‌ಎಂಸಿ ಮಾಜಿ ಅಧ್ಯಕ್ಷ ಬಿ.ಬಿ. ಸತೀಶ್, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ, ಒಕ್ಕಲಿಗರ ಯುವ ವೇದಿಕೆ ಜಿಲ್ಲಾಧ್ಯಕ್ಷ ಗಿರೀಶ್ ಮಲ್ಲಪ್ಪ, ಗ್ರಾಮ ಸಮಿತಿ ಮಾಜೀ ಅಧ್ಯಕ್ಷ ಉದಯ, ಪ.ಪಂ. ನಾಮನಿರ್ದೇಶಿತ ಸದಸ್ಯ ಡಿ.ಯು. ಕಿರಣ್, ನಿವೃತ್ತ ಮುಖ್ಯ ಶಿಕ್ಷಕ ಸಿ.ಟಿ. ಸೋಮಶೇಖರ್ ಸೇರಿದಂತೆ ಇತರರು ಬಾಗಿನ ಅರ್ಪಿಸಿದರು.

ದೇವಾಲಯಕ್ಕೆ ಬಂದ ಭಕ್ತಾದಿಗಳು ೯೦೦ ಅಡಿ ಎತ್ತರದ ಗವಿಬೆಟ್ಟ ಹಾಗೂ ಗುಹೆಗೆ ಭೇಟಿ ನೀಡಿದರು. ದೇವಾಲಯ ಸಮಿತಿಯ ಆಶ್ರಯದಲ್ಲಿ ಸಾವಿರಾರು ಮಂದಿ ಭಕ್ತಾದಿಗಳಿಗೆ ಅನ್ನದಾನ ವ್ಯವಸ್ಥೆ ಕಲ್ಪಿಸಲಾಗಿತ್ತು.

ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಎಂ.ಬಿ. ಚಂದ್ರ ಶೇಖರ್, ಕಾರ್ಯದರ್ಶಿ ಪ್ರದೀಪ್ ಕುಮಾರ್, ಪದಾಧಿಕಾರಿಗಳಾದ ಡಿ.ಬಿ. ವೀರೇಶ್, ಡಿ.ಎಂ. ಪ್ರಸನ್ನ, ಡಿ.ಟಿ. ಭರತ್, ಎಂ.ಬಿ. ವಸಂತ್‌ಕುಮಾರ್, ಡಿ.ಪಿ. ಶಾಂತರಾಜು, ಎಂ.ಜೆ. ಕಿರಣ್‌ಕುಮಾರ್, ೪ಆರನೇ ಪುಟಕ್ಕೆ

ಪ್ರವಾಸಿ ತಾಣವಾಗಿಯೂ ಅಭಿವೃದ್ಧಿ ಕಾಣುತ್ತಿರುವ ಹೊನ್ನಮ್ಮನ ಕೆರೆ ಸೇರಿದಂತೆ ಸುತ್ತಮುತ್ತಲ ಅಭಿವೃದ್ಧಿಗೆ ಶಾಸಕರ ನಿಧಿ ಅಥವಾ ಪ್ರವಾಸೋದ್ಯಮ ಇಲಾಖೆಯಿಂದ ರೂ. ೫೦ ಲಕ್ಷ ಅನುದಾನ ಕಲ್ಪಿಸಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಭರವಸೆ ನೀಡಿದರು. ದೇವಾಲಯಕ್ಕೆ ಭೇಟಿ ನೀಡಿ ಬಸವೇಶ್ವರ, ಸಿದ್ದೇಶ್ವರ, ಗಣಪತಿ, ಹೊನ್ನಮ್ಮ ತಾಯಿಗೆ ಪೂಜೆ ಸಲ್ಲಿಸಿ, ಬಳಿಕ ಕೆರೆಗೆ ಬಾಗಿನ ಅರ್ಪಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆರೆಯ ಸುತ್ತಲೂ ವಾಕಿಂಗ್ ಪಾತ್, ದೇವಾಲಯದ ಬಳಿ ಸುಸಜ್ಜಿತ ಅಡುಗೆ ಕೋಣೆ, ಶೌಚಾಲಯ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳಿಗೆ ಸರ್ಕಾರದಿಂದ ೫೦ ಲಕ್ಷ ಅನುದಾನ ಕಲ್ಪಿಸಲಾಗುವುದು ಎಂದು ಮಂತರ್ ಗೌಡ ಹೇಳಿದರು.

ಇದರೊಂದಿಗೆ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಲು ಸಕ್ಷಮ ಪ್ರಾಧಿಕಾರದೊಂದಿಗೆ ವ್ಯವಹರಿಸಲಾಗುವುದು. ಕೆರೆಯ ಬದಿಯಲ್ಲಿ ತಡೆಗೋಡೆ ನಿರ್ಮಾಣ ಸೇರಿದಂತೆ ಒಟ್ಟಾರೆ ಕ್ಷೇತ್ರದ ಅಭಿವೃದ್ಧಿಗೆ ಸಮಿತಿಯೊಂದಿಗೆ ಚರ್ಚೆ ನಡೆಸಿ, ಅಗತ್ಯ ಅನುದಾನ ಕಲ್ಪಿಸಲಾಗುವುದು ಎಂದು ಶಾಸಕರು ತಿಳಿಸಿದರು.