ನಾಯಿಯ ನಿಷ್ಠೆಗೆ ಪ್ರತೀಕವಾಗಿ ಅದರ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ ಎಂದರೆ ಅಚ್ಚರಿಯಾಗಬಹುದಲ್ಲವೇ..? ಆದರೂ ಅದು ನಿಜ. ನಾಯಿಯನ್ನು ಅತಿ ಹೆಚ್ಚಾಗಿ ಪ್ರೀತಿಸುವ ಜಪಾನಿನ ಟೋಕಿಯೋದಲ್ಲಿ ಈ ಪ್ರತಿಮೆಯಿದ್ದು, ಅಲ್ಲಿನ ಜನಪ್ರಿಯ ಸ್ಥಳವಾಗಿದೆ. ೧೯೨೦ರ ಕಾಲದಲ್ಲಿ ಅಲ್ಲಿನ ಪ್ರೊ. ಐಜಾಬುರೊ ಯುನೋ ಎಂಬವರು ದತ್ತು ಪಡೆದು ಸಾಕಿದ ಹಚಿಕೊ ಎಂಬ ನಾಯಿ ಪ್ರತಿನಿತ್ಯ ಮಧ್ಯಾಹ್ನ ರೈಲ್ವೇ ನಿಲ್ದಾಣಕ್ಕೆ ಹೋಗಿ ಯುನೋ ವಾಪಸ್ ಬರೋವರೆಗೂ ಕಾಯುತ್ತಾ ಇರುತ್ತಿತ್ತು. ೧೯೨೫ರಲ್ಲಿ ವಿವಿಯಲ್ಲಿದ್ದಾಗಲೇ ಯುನೋ ಸಾವನ್ನಪ್ಪಿದರು. ಆದರೆ, ಈ ವಿಷಯ ತಿಳಿಯದ ಹಚಿಕೊ ಸುಮಾರು ಹತ್ತು ವರ್ಷಗಳವರೆಗೆ ಪ್ರತಿದಿನ ಮಧ್ಯಾಹ್ನ ನಿಲ್ದಾಣಕ್ಕೆ ಹೋಗಿ ತನ್ನ ಪ್ರೀತಿಯ ಯಜಮಾನನನ್ನು ಕಾಯುತ್ತಲೇ ಇಹಲೋಕ ತ್ಯಜಿಸಿತು.
ಮಾಲೀಕನ ಸಮಾಧಿ ಪಕ್ಕದಲ್ಲಿಯೇ ಅದರ ಸಂಸ್ಕಾರ ಮಾಡಲಾಯಿತು. ಹಚಿಕೊನಾ ಈ ನಿಷ್ಠಾವಂತ ಪ್ರೀತಿಯ ಧ್ಯೋತಕವಾಗಿ ಅದರ ಪ್ರತಿಮೆ ಸ್ಥಾಪನೆ ಮಾಡಲಾಗಿದೆ. ಈ ದೃಷ್ಟಾಂತ ಚಲನಚಿತ್ರವಾಗಿಯೂ ತೆರೆಕಂಡಿದೆ. ಕನ್ನಡ ಚಿತ್ರರಂಗದಲ್ಲೂ ನಾಯಿಯ ಪ್ರೀತಿಯ ಧ್ಯೋತಕದ ಚಲನಚಿತ್ರಗಳು ಮೂಡಿಬಂದಿವೆ.