ಸೋಮವಾರಪೇಟೆ, ಆ. ೨೫ : ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಪಟ್ಟಭದ್ರ ಹಿತಾಸಕ್ತಿಗಳು ಅಪಪ್ರಚಾರದಲ್ಲಿ ತೊಡಗಿದ್ದು, ಕೋಟ್ಯಂತರ ಭಕ್ತರ ಭಾವನೆಗಳಿಗೆ ಧಕ್ಕೆ ತರಲಾಗುತ್ತಿದೆ ಎಂದು ಆರೋಪಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಕ್ತಾಭಿಮಾನಿಗಳ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.
ಕ್ಷೇತ್ರದ ವಿರುದ್ಧ ನಿರಂತರ ಸುಳ್ಳು ಸುದ್ದಿ ಹಬ್ಬಿಸಿಕೊಂಡು ಬರುತ್ತಿರುವವರÀನ್ನು ತಕ್ಷಣ ಬಂಧಿಸಬೇಕೆAದು ಪ್ರತಿಭಟನಾಕಾರರು ಆಗ್ರಹಿಸಿ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣ, ಸಮೀರ್, ಸುಜಾತಾ ಭಟ್ ಸೇರಿದಂತೆ ಇತರರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಲಾಯಿತು.
ಪಟ್ಟಣದ ಗಾಂಧಿ ವೃತ್ತದಿಂದ ಹೊರಟ ಪ್ರತಿಭಟನಾ ಮೆರವಣಿಗೆ, ಮಡಿಕೇರಿ ರಸ್ತೆ, ಮುಖ್ಯರಸ್ತೆ, ಖಾಸಗಿ ಬಸ್ ನಿಲ್ದಾಣದ ಮೂಲಕ ಸಾಗಿ, ಇಲ್ಲಿನ ಜೇಸೀ ವೇದಿಕೆಯಲ್ಲಿ ಸಮಾವೇಶಗೊಂಡಿತು. ನಂತರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಅವರು, ಶ್ರೀ ಕ್ಷೇತ್ರದ ಮೇಲೆ ನಿರಂತರ ಅಪಪ್ರಚಾರ ನಡೆಸುತ್ತಿರುವವರನ್ನು ತಕ್ಷಣ ಬಂಧಿಸಬೇಕೆAದು ಒತ್ತಾಯಿಸಿದರು.
ಧರ್ಮಸ್ಥಳದ ಬಗ್ಗೆ ಸಮೀರ್ ಎಂಬಾತ ಕಟ್ಟುಕಥೆಯನ್ನು ಮಾಡಿ ಜನರ ಹಾದಿ ತಪ್ಪಿಸಿದ್ದಾನೆ. ಈತನ ಹಿಂದೆ ವಿದೇಶಿ ಮೂಲದ ಕೈಗಳೂ ಅಡಗಿವೆ. ಕ್ಷೇತ್ರಕ್ಕೆ ಧಕ್ಕೆ ತರುವ ಕಾರ್ಯಕ್ಕೆ ಅಲ್ಲಿಂದಲೂ ಹಣ ಬಂದಿದೆ ಎಂದು ಆರೋಪಿಸಿದ ಅವರು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಮೊದಲು ಈತನನ್ನು ಬಂಧಿಸಬೇಕೆAದು ಆಗ್ರಹಿಸಿದರು.
ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಒಂದು ಫೋಟೋ ಹಾಕಿದ್ದಕ್ಕೆ ಕೆ.ಜೆ.ಹಳ್ಳಿ ಡಿ.ಜೆ.ಹಳ್ಳಿಯಲ್ಲಿ ಹಿಂದೂ ಶಾಸಕರ ಮನೆ, ಪೊಲೀಸ್ ಠಾಣೆಗೆ ಒಂದು ವರ್ಗ ಬೆಂಕಿ ಹಾಕಿತ್ತು. ಇದೀಗ ಸಮೀರ್ ಶ್ರೀ ಕ್ಷೇತ್ರದ ಬಗ್ಗೆ ಆಗಾಗ್ಗೆ ವೀಡಿಯೋಗಳನ್ನು ಮಾಡುತ್ತಿದ್ದರೂ ಹಿಂದೂ ಸಮಾಜ ಮೌನ ವಹಿಸಿದೆ. ನಮಗೆ ನ್ಯಾಯಾಂಗದ ಮೇಲೆ ನಂಬಿಕೆಯಿದೆ ಎಂದು ರಂಜನ್ ಹೇಳಿದರು.
ತಮಿಳುನಾಡಿನ ಕಾಂಗ್ರೆಸ್ ಸಂಸದ ಶಶಿಕಾಂತ್ ಸೆಂದಿಲ್ ಕೂಡ ಈ ಷಡ್ಯಂತ್ರದ ಭಾಗವಾಗಿದ್ದಾರೆ. ಸೆಂದಿಲ್ ಸೇರಿದಂತೆ ವಕೀಲ ದ್ವಾರಕಾನಾಥ್ ಎಂಬವರನ್ನೂ ವಿಚಾರಣೆಗೆ ಒಳಪಡಿಸಬೇಕು. ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಸುಜಾತಾ ಭಟ್ ಅವರ ಹಿಂದೆ ಇರುವ ಗಿರೀಶ್ ಮಟ್ಟಣ್ಣನವರನ್ನು ತಕ್ಷಣ ಬಂಧಿಸಬೇಕೆAದು ಆಗ್ರಹಿಸಿದರು.
ಹಿಂದೂ ದೇವಾಲಯ, ಧರ್ಮದ ಮೇಲೆ ನಡೆಯುವ ಷಡ್ಯಂತ್ರಗಳಿಗೆ ಹಿಂದೂಗಳು ಬಲಿಯಾಗಬಾರದು. ಹಿಂದೂಗಳಿಗೆ ಉಳಿದಿರುವುದು ಇದೊಂದೆ ದೇಶ. ಹಾಗಾಗಿ ಹಿಂದೂ ಸಂಸ್ಕೃತಿಯ ರಕ್ಷಣೆ ಆಗಲೇಬೇಕು ಎಂದು ಅಭಿಪ್ರಾಯಿಸಿದರು.
ಜಿಲ್ಲಾ ಜನಜಾಗೃತಿ ಸಮಿತಿ ಸ್ಥಾಪಕ ಅಧ್ಯಕ್ಷ ಅಭಿಮನ್ಯುಕುಮಾರ್ ಮಾತನಾಡಿ, ಕೆಲವು ಕಿಡಿಗೇಡಿಗಳು, ಎಡಪಂಥೀಯರು, ನಾಸ್ತಿಕರು ಸಮಾಜದ ಸಾಸ್ಥö್ಯ ಕೆಡಿಸಲು ಷಡ್ಯಂತ್ರ ರೂಪಿಸಿದ್ದಾರೆ. ಕ್ಷೇತ್ರದ ಕೋಟ್ಯಂತರ ಭಕ್ತಾದಿಗಳ ನಂಬಿಕೆಯನ್ನು ಘಾಸಿಗೊಳಿಸುವ ಯತ್ನ ನಡೆಸಿದ್ದಾರೆ. ಧರ್ಮಸ್ಥಳದ ಹುಂಡಿಗೆ ಬಿಡಿಗಾಸೂ ಹಾಕದವರು ಇಂದು ಹುಂಡಿಯ ಲೆಕ್ಕ ಕೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕ್ಷೇತ್ರದಿಂದ ಈವರೆಗೆ ೧೬,೬೫೯ ದೇವಾಲಯಗಳ ಅಭಿವೃದ್ಧಿಗೆ ೨೨ ಸಾವಿರ ಕೋಟಿ ೫೭೮ ಲಕ್ಷ ಹಣವನ್ನು ನೀಡಲಾಗಿದೆ. ೭೬೪ ರುದ್ರಭೂಮಿ ಅಭಿವೃದ್ಧಿಗೆ ೧೦.೫೦ ಕೊಟಿ ಅನುದಾನ ನೀಡಿದೆ. ಸೋಮವಾರಪೇಟೆಯಲ್ಲೂ ದೇವಾಲಯ, ರುದ್ರಭೂಮಿ ಅಭಿವೃದ್ಧಿ ಆಗಿದೆ. ಸರ್ಕಾರ ಮಾಡದಷ್ಟು ಅಭಿವೃದ್ಧಿ ಕಾರ್ಯವನ್ನು ಕ್ಷೇತ್ರ ಮಾಡುತ್ತಿದೆ. ೧೯೬೧ ಮದ್ಯವರ್ಜನಾ ಶಿಬಿರದ ಮೂಲಕ ೧.೫೨ ಲಕ್ಷ ಮಂದಿ ಮದ್ಯ ತ್ಯಜಿಸುವಂತೆ ಮಾಡಲಾಗಿದೆ. ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಖಾವಂದರು ಮುಂಚೂಣಿಯಲ್ಲಿದ್ದಾರೆ. ಕ್ಷೇತ್ರದಿಂದ ಒಟ್ಟಾರೆಯಾಗಿ ೮೧,೬೦೩ ಕೋಟಿ ಸಾಮಾಜಿಕ ಕಾರ್ಯಗಳಿಗೆ ನೀಡಲಾಗಿದೆ. ಇದನ್ನು ಸಹಿಸದ ಮಂದಿ ಕ್ಷೇತ್ರದ ವಿರುದ್ಧ ನಿರಂತರ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ಮುಸುಕುಧಾರಿಯಾಗಿದ್ದ ಚಿನ್ನಯ್ಯನನ್ನು ಮೊದಲು ವಿಚಾರಣೆ ನಡೆಸಬೇಕಿತ್ತು. ಇದನ್ನು ಸರ್ಕಾರ ಮಾಡಲಿಲ್ಲ. ಮಂಗಳೂರಿನ ಪೊಲೀಸ್ ವರಿಷ್ಠಾಧಿಕಾರಿ ಮಂಪರು ಪರೀಕ್ಷೆಗೆ ಸಿದ್ದತೆ ನಡೆಸಿದರೂ ಸರ್ಕಾರ ಅವಕಾಶ ನೀಡಲಿಲ್ಲ ಎಂದು ಆರೋಪಿಸಿದ ಅವರು, ಇಡೀ ಪ್ರಕರಣವನ್ನು ಎನ್.ಐ.ಎ. ತನಿಖೆಗೆ ಕೊಡಬೇಕು. ಮುಖವಾಡದ ಹಿಂದೆ ಇರುವ ವ್ಯಕ್ತಿಗಳಿಗೂ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಕೆ.ಎನ್. ದೀಪಕ್ ಮಾತನಾಡಿ, ಧಾರ್ಮಿಕ ಶ್ರದ್ಧಾಕೇಂದ್ರಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಧರ್ಮಸ್ಥಳ ಪ್ರಕರಣವನ್ನು ಸಿಬಿಐ, ಇ.ಡಿ., ಎನ್.ಐ.ಎ. ಕೂಡ ತನಿಖೆ ನಡೆಸುವಂತಾಗಬೇಕು ಎಂದರು.
ಮುಳ್ಳೂರು ಕ್ಷೇತ್ರದ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಮಾತನಾಡಿ, ಷಡ್ಯಂತ್ರದ ವಿರುದ್ದ ಎಲ್ಲರೂ ಧನಿಯೆತ್ತಬೇಕು. ನಮ್ಮೊಳಗೆ ಧರ್ಮ ಜಾಗೃತಿ ಮೂಡಬೇಕು. ಇಂದು ಧರ್ಮಸ್ಥಳಕ್ಕೆ ಆದಂತಹ ಅಪಮಾನ ನಾಳೆ ನಮ್ಮೂರಿನ ದೇವಾಲಯ, ನಮ್ಮ ಮನೆಗಳ ಮೇಲೂ ಆಗಬಹುದು. ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕು ಎಂದರು.
ಧರ್ಮಸ್ಥಳ ಹಿಂದೂ ಸಮಾಜದ ಶಕ್ತಿಯಾಗಿದೆ. ಆರೋಗ್ಯ, ಅಕ್ಷರ, ಅನ್ನ, ನ್ಯಾಯದಾನದ ಮೂಲಕ ವೀರೇಂದ್ರ ಹೆಗ್ಗಡೆಯವರು ಸಮಾಜದ ಅಸ್ಮಿತೆಯಾಗಿದ್ದಾರೆ. ಕಾಂಗ್ರೆಸ್ ಸರ್ಕಾರದ ಕೈಗೊಂಬೆಯಾಗಿ ಕುಣಿಯುವ ಕೆಲಸವನ್ನು ಪೊಲೀಸ್ ಇಲಾಖೆ ಕೈಬಿಡಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಹಿಂದೂಗಳಿಗೆ ಇಂತಹದೇ ದುಸ್ಥಿತಿ ಬರುತ್ತಿದೆ. ಮುಖ್ಯಮಂತ್ರಿ ಈ ವರೆಗೆ ಧರ್ಮಸ್ಥಳ ಪರವಾಗಿ ಒಂದೇ ಒಂದು ಹೇಳಿಕೆ ನೀಡಿಲ್ಲ. ಹಿಂದುತ್ವದ ವಿರುದ್ದವಾದ ಧೋರಣೆ ಬಿಡಬೇಕು ಎಂದು ಆಗ್ರಹಿಸಿದರು.
ವೇದಿಕೆಯಲ್ಲಿ ಜಿಲ್ಲಾ ಜನಜಾಗೃತಿ ಸಮಿತಿ ಅಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷ ಪುಂಡರೀಕ, ಕುರುಹಿನ ಶೆಟ್ಟಿ ಸಮಾಜದ ಅಧ್ಯಕ್ಷ ರಾಮಶೆಟ್ಟಿ, ವಿರಕ್ತ ಮಠಾಧೀಶರಾದ ನಿಶ್ಚಲ ನಿರಂಜನ ದೇಶೀಕೇಂದ್ರ ಸ್ವಾಮೀಜಿ, ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ವಕೀಲ ಕಾಟ್ನಮನೆ ವಿಠಲ್ ಗೌಡ, ಸಮಿತಿಯ ಅಧ್ಯಕ್ಷ ಎಸ್.ಆರ್. ಸೋಮೇಶ್, ಸಂಚಾಲಕ ಸುರೇಶ್ ಸೇರಿದಂತೆ ಇತರರು ಇದ್ದರು.
ನಂತರ ತಾಲೂಕು ಕಚೇರಿಗೆ ಮೆರವಣಿಗೆ ಮೂಲಕ ತೆರಳಿ, ಕ್ಷೇತ್ರದ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿದ ವ್ಯಕ್ತಿಗಳ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
ಅಂತೆಯೇ ಸಮೀರ್ ಹಾಗೂ ಸುಜಾತಾ ಭಟ್ ಅವರು ಅನನ್ಯ ಭಟ್ ಹೆಸರನ್ನು ಸೃಷ್ಟಿಸಿ, ಕೊಡಗು ಮೂಲದ ಯುವತಿಯ ಭಾವಚಿತ್ರವನ್ನು ದುರ್ಬಳಕೆ ಮಾಡಿಕೊಂಡಿದ್ದು, ಈರ್ವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಠಾಣೆಗೆ ದೂರು ನೀಡಲಾಯಿತು.