ವೀರಾಜಪೇಟೆ, ಆ. ೧೦: ಕರ್ನಾಟಕ ಸರಕಾರ ಜನರ ಶ್ರೇಯೋಭಿವೃದ್ಧಿಗಾಗಿ ಹತ್ತು ಹಲವು ಕಾರ್ಯಕ್ರಮವನ್ನು ಅನುಷ್ಠಾನ ಮಾಡುತ್ತಿದ್ದು, ಅದರ ಪ್ರಯೋಜನ ಪಡೆದುಕೊಳ್ಳುವಂತೆ ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಕರೆ ನೀಡಿದರು.
ಕೊಟ್ಟೋಳಿ ಗ್ರಾಮದ ಕೆ. ಬೋಯಿಕೇರಿ ಆಶ್ರಯ ಕಾಲೋನಿಗೆ ಭೇಟಿ ನೀಡಿ ನಿವಾಸಿಗಳ ಕುಂದು ಕೊರತೆಗಳನ್ನು ಆಲಿಸಿದರು.
ಬಳಿಕ ಮಾತನಾಡಿದ ಶಾಸಕ ಪೊನ್ನಣ್ಣ, ಕಾಂಗ್ರೆಸ್ ಸರಕಾರ ಹಲವಾರು ಜನಪರ ಯೋಜನೆ ಗಳನ್ನು ಜಾರಿಗೆ ತಂದಿದೆ. ಎಲ್ಲರಿಗೂ ಮೂಲಭೂತ ಸೌಲಭ್ಯ ತಲುಪು ವಂತಾಗಬೇಕು. ಎಲ್ಲರೂ ಸಮಾಜದ ಮುಖ್ಯ ವಾಹಿನಿಗೆ ಬರುವಂತಾಗಬೇಕು. ಮೂಲಭೂತ ಸೌಕರ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪು ವಂತಾಗಬೇಕು ಎನ್ನುವುದೇ ಸರಕಾರದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ನಾನು ಸದಾ ಶ್ರಮಿಸುತ್ತಿದ್ದೇನೆ. ಇಲ್ಲಿನ ನಿವಾಸಿಗಳ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು. ಬಳಿಕ ಆಶ್ರಯ ಕಾಲೋನಿ ಮಕ್ಕಳೊಂದಿಗೆ ಮಾತನಾಡಿದ ಶಾಸಕರು ಎಲ್ಲರೂ ವಿದ್ಯಾವಂತರಾಗಿ ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಉತ್ತಮ ಸಾಧನೆ ಮಾಡುವಂತಾಗಲಿ ಎಂದು ಹಾರೈಸಿದರು.
ಈ ಸಂದರ್ಭ ವೇದಿಕೆಯಲ್ಲಿ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಹನೀಫ್, ವಲಯ ಕಾಂಗ್ರೆಸ್ ಅಧ್ಯಕ್ಷ ನಡಿಕೇರಿಯಂಡ ಮಹೇಶ್, ಕೆದಮುಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜೆಫ್ರಿ ಉತ್ತಪ್ಪ, ಕೆಡಿಪಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಮಾಳೆಟೀರ ಪ್ರಶಾಂತ್, ಕೆದಮುಳ್ಳೂರು ಪಂಚಾಯಿತಿ ಸದಸ್ಯರಾದ ಇಸ್ಮಾಯಿಲ್, ಪವಿತ್ರ ಉಪಸ್ಥಿತರಿದ್ದರು.