ವೀರಾಜಪೇಟೆ, ಆ. ೧೦: ವೀರಾಜಪೇಟೆ ತಾಲೂಕು ಕೆದಮುಳ್ಳೂರು ಗ್ರಾಮ ವಲಯ ಕಾಂಗ್ರೆಸ್ ವತಿಯಿಂದ ಶಾಸಕರ ೫೧ನೇ ಜನ್ಮದಿನದ ಪ್ರಯುಕ್ತ, ಆಶಾ ಕಾರ್ಯಕರ್ತರು, ವಿಶೇಷಚೇತನರು ಸೇರಿದಂತೆ ಆಯ್ದ ೮೨ ಫಲಾನುಭವಿಗಳಿಗೆ ಆಹಾರ ಕಿಟ್ ವಿತರಿಸಲಾಯಿತು.
ಕೆದಮುಳ್ಳೂರಿನ ನೂತನ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಿಟ್ ವಿತರಿಸಿ ಬಳಿಕ ಮಾತನಾಡಿದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಕೆದಮುಳ್ಳೂರು ಗ್ರಾಮ ಪಂಚಾಯಿತಿ ಜಿಲ್ಲೆಯಲ್ಲಿಯೇ ಅತಿದೊಡ್ಡ ಗ್ರಾಮ ಪಂಚಾಯಿತಿ ಎನಿಸಿಕೊಂಡಿದೆ. ಈ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಬೇಕು. ಸಮುದಾಯ ಭವನದ ಕಾಮಗಾರಿ ಪೂರ್ಣಗೊಂಡಿಲ್ಲ. ಹೆಚ್ಚುವರಿ ಕಾಮಗಾರಿಗೆ ಸರಕಾರದಿಂದ ಮುಂದಿನ ದಿನಗಳಲ್ಲಿ ಅನುದಾನ ಒದಗಿಸಿಕೊಡುವುದಾಗಿ ಹೇಳಿದರು. ಸರಕಾರದ ವತಿಯಿಂದ ವೀರಾಜಪೇಟೆ ಕ್ಷೇತ್ರಕ್ಕೆ ನಿವೇಶನ ಹಾಗೂ ವಸತಿ ರಹಿತರಿಗೆ ೧,೨೦೦ ಮನೆ ನಿರ್ಮಾಣ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಅದರಲ್ಲಿ ಕೆದಮುಳ್ಳೂರು ಭಾಗದಲ್ಲೂ ಅರ್ಹರನ್ನು ಗುರುತಿಸಿ ಮನೆ ನಿರ್ಮಾಣ ಮಾಡಿಕೊಡಲಾಗುವುದು ಎಂದರು.
ಕೆದಮುಳ್ಳೂರು ವಲಯ ಕಾಂಗ್ರೆಸ್ ಪ್ರಮುಖರು ತಮ್ಮ ಗ್ರಾಮದಲ್ಲಿ ಗುರುತಿಸಿದ ವಿಶೇಷಚೇತನರು ಹಾಗೂ ಆಶಾ ಕಾರ್ಯಕರ್ತರು ಈ ಆಹಾರ ಕಿಟ್‌ಗಳನ್ನು ಪಡೆದುಕೊಂಡರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜಾ ಉತ್ತಪ್ಪ ಮಾತನಾಡಿದರು. ವಲಯ ಕಾಂಗ್ರೆಸ್ ಅಧ್ಯಕ್ಷ ನಡಿಕೇರಿಯಂಡ ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಕೆದಮುಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜೆಫ್ರಿ ಉತ್ತಪ್ಪ, ಕೆಡಿಪಿ ಹಾಗೂ ಪಂಚಾಯಿತಿ ಸದಸ್ಯ ಮಾಳೇಟಿರ ಪ್ರಶಾಂತ್, ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ, ಪಂಚಾಯಿತಿ ಸದಸ್ಯರಾದ ಇಸ್ಮಾಯಿಲ್, ಪವಿತ್ರ ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೆದಮುಳ್ಳೂರು ಗ್ರಾಮಸ್ಥರು, ಆಶಾ ಕಾರ್ಯಕ ರ್ತೆಯರು, ಪಂಚಾಯಿತಿ ಸದಸ್ಯರುಗಳು ಹಾಗೂ ಕಾಂಗ್ರೆಸ್ ಪ್ರಮುಖರಿದ್ದರು.