ಸೋಮವಾರಪೇಟೆ,ಆ.೧೦: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿAದಲೂ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದ್ದು, ಇದರ ಭಾಗವಾಗಿ ಸಿ ಮತ್ತು ಡಿ ಹಾಗೂ ಸೆಕ್ಷನ್-೪ ವಿಚಾರದಲ್ಲಿ ರೈತರ ಒಕ್ಕಲೆಬ್ಬಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ಕೃಷಿ ಮೋರ್ಚಾ, ತಾ. ೧೨ರಂದು ರೈತ ಸಂಘಟನೆಗಳು ಕರೆ ನೀಡಿರುವ ಸೋಮವಾರಪೇಟೆ ತಾಲೂಕು ಬಂದ್ಗೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಘೋಷಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಬಿಜೆಪಿ ಕೃಷಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರತ್ಚಂದ್ರ ಅವರು, ಹತ್ತಾರು ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿರುವ ಬಡ ರೈತರನ್ನು ಕಾಂಗ್ರೆಸ್ ಸರ್ಕಾರ ಒಕ್ಕಲೆಬ್ಬಿಸುವ ಷಡ್ಯಂತ್ರ ನಡೆಸಿದೆ ಎಂದು ಆರೋಪಿಸಿದರು.
ಕಳೆದ ೧೧.೦೭.೨೦೧೮ರಲ್ಲಿ ಅಂದಿನ ಬಿಜೆಪಿ ಸರ್ಕಾರ ಸಿ ಮತ್ತು ಡಿ ಜಾಗವನ್ನು ಕಂದಾಯ ಇಲಾಖೆ ಮೂಲಕ ಹಕ್ಕುಪತ್ರ ನೀಡಲು ಆದೇಶ ಹೊರಡಿಸಿತ್ತು. ಅದರಂತೆ ಅಂದಿನ ಶಾಸಕರಾದ ಅಪ್ಪಚ್ಚು ರಂಜನ್ ಅವರು ಹಲವಷ್ಟು ಮಂದಿಗೆ ಹಕ್ಕು ಪತ್ರ ನೀಡಿದ್ದಾರೆ. ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾದರೂ ಒಂದೇ ಒಂದು ಅಕ್ರಮ ಸಕ್ರಮ ಸಮಿತಿ ಸಭೆ ಕರೆದಿಲ್ಲ. ರೈತರಿಗೆ ಒಂದೇ ಒಂದು ಹಕ್ಕುಪತ್ರವನ್ನೂ ವಿತರಿಸಿಲ್ಲ ಎಂದು ದೂರಿದರು.
ಅಪ್ಪಚ್ಚು ರಂಜನ್ ಅವರು ನಡೆದ ಕೊನೆಯ ಸಭೆಯಲ್ಲಿಯೂ ಹಲವಷ್ಟು ಮಂದಿಗೆ ಹಕ್ಕುಪತ್ರ ನೀಡಲು ಅರ್ಜಿ ವಿಲೇವಾರಿ ಮಾಡಲಾಗಿತ್ತು. ಈಗಿನ ಶಾಸಕರು ಅದನ್ನೂ ತಡೆಹಿಡಿದಿದ್ದಾರೆ ಎಂದು ದೂರಿದ ಶರತ್ಚಂದ್ರ, ಈ ಬಗ್ಗೆ ಬಿಜೆಪಿ ವತಿಯಿಂದ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಕಾAಗ್ರೆಸ್ ಸರ್ಕಾರ ಹಾಗೂ ಅರಣ್ಯ ಸಚಿವರು ಸದಾ ರೈತರಿಗೆ ಮಾರಕವಾಗುವ ಕಾಯ್ದೆಗಳನ್ನೇ ಅನುಷ್ಠಾನ ಮಾಡುತಿದ್ದಾರೆ. ೧೭.೦೫.೨೦೨೪ ರಂದು ಸಿ ಮತ್ತು ಡಿ ಜಾಗ ತೆರವಿಗೆ ಸಂಬAಧಿಸಿದAತೆ ಆದೇಶ ಹೊರಡಿಸಲಾಗಿದೆ. ಇದಾದ ನಂತರ ೧೫.೦೮.೨೦೨೪ ರಂದು ಅರಣ್ಯ ವ್ಯವಸ್ಥಾಪನಾಧಿಕಾರಿಗಳು ಸಿ ಮತ್ತು ಡಿ ಜಾಗವನ್ನು ಅರಣ್ಯ ಇಲಾಖೆಗೆ ಒಪ್ಪಿಸುವಂತೆ ಸೆಕ್ಷನ್೪ ನೋಟಿಸ್ ನೀಡಿದ್ದಾರೆ ಎಂದರು.
೧೦.೦೧.೨೦೨೪ ರಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಮನೆ, ದೇವಾಲಯಗಳಲ್ಲಿ ಇಟ್ಟುಕೊಂಡಿರುವ ವನ್ಯಪ್ರಾಣಿಗಳ ಕೊಂಬು, ಚರ್ಮ ಸೇರಿದಂತೆ ಇನ್ನಿತರ ಭಾಗಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಬೇಕೆಂದು ಆದೇಶ ಹೊರಡಿಸಿದ್ದಾರೆ. ಇದಕ್ಕೂ ಅಫಿಡವಿಟ್ ಸಲ್ಲಿಸಬೇಕೆಂದು ಸೂಚಿಸಿದ್ದಾರೆ. ಅಂತೆಯೇ ೨೩.೦೧.೨೦೨೪ ರಂದು ಖಾಸಗಿ ಭೂಮಿಯಲ್ಲಿರುವ ಮರಗಳನ್ನು ಸರ್ಕಾರಕ್ಕೆ ಹಸ್ತಾಂತರ ಮಾಡಬೇಕೆಂದು ಆದೇಶ ಮಾಡಿದ್ದಾರೆ. ಇಂತಹ ರೈತ ವಿರೋಧಿ ಕಾಂಗ್ರೆಸ್ ಸಚಿವರಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ಆಪಾದಿಸಿದರು. ಈ ಮಧ್ಯೆ ಅರಣ್ಯ ಪ್ರದೇಶಗಳಲ್ಲಿ ಜಾನುವಾರುಗಳನ್ನು ಮೇಯಲು ಬಿಡಬಾರದು. ಒಂದು ವೇಳೆ ಜಾನುವಾರುಗಳು ಅರಣ್ಯಕ್ಕೆ ಬಂದರೆ ಸಂಬAಧಿಸಿದ ರೈತರ ಮೇಲೆ ಮೊಕದ್ದಮೆ ಹಾಕುವುದಾಗಿ ಸರ್ಕಾರ ಹೇಳಿದೆ. ಕೃಷಿ ಪ್ರದೇಶಗಳಿಗೆ ವನ್ಯಪ್ರಾಣಿಗಳು ಆಗಮಿಸಿ ಕೃಷಿ ಫಸಲನ್ನು ತಿಂದು ನಾಶಗೊಳಿಸುತ್ತಿವೆ. ಆನೆ, ಹುಲಿ, ಚಿರತೆ ಸೇರಿದಂತೆ ಇನ್ನಿತರ ಪ್ರಾಣಿಗಳು ನಾಡಿಗೆ ಬಂದರೆ ಇದೇ ಅರಣ್ಯ ಸಚಿವರು ಹಾಗೂ ಅರಣ್ಯ ಇಲಾಖೆಯ ಮೇಲೆ ಮೊಕದ್ದಮೆ ದಾಖಲಿಸಲು ಅವಕಾಶ ಮಾಡಿಕೊಡಲು ಈಶ್ವರ್ ಖಂಡ್ರೆ ಅವರಿಗೆ ಸಾಧ್ಯವಿದೆಯೇ? ಎಂದು ಶರತ್ಚಂದ್ರ ಪ್ರಶ್ನಿಸಿದರು.
ಸಿ ಮತ್ತು ಡಿ ಜಾಗ ಸಮಸ್ಯೆ, ಸೆಕ್ಷನ್೪ ವಿಚಾರದಲ್ಲಿ ಬಿಜೆಪಿಯ ಮುಂಚೂಣಿ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು, ರೈತರ ಹಿತಕ್ಕಾಗಿ ಬಂದ್ಗೆ ಬೆಂಬಲ ನೀಡಲಿದ್ದಾರೆ ಎಂದರು. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಬಡ ರೈತರ ಉಳಿವಿಗೆ ಕ್ರಮ ಕೈಗೊಳ್ಳಬೇಕು. ಕೃಷಿ ಭೂಮಿಗೆ ದಾಖಲೆ ಒದಗಿಸಿಕೊಡಬೇಕು. ತಪ್ಪಿದ್ದಲ್ಲಿ ಬಿಜೆಪಿಯಿಂದ ಹೋರಾಟ ನಡೆಸಲಾಗುವುದು. ಈ ಸಂಬAಧ ಯಾವುದೇ ಸಂಘಟನೆಗಳು ಪ್ರತಿಭಟನೆಗೆ ಇಳಿದರೂ ಸಹಕಾರ ನೀಡಲಾಗುವುದು ಎಂದರು.
ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರತಿನಿಧಿ ಕಿಬ್ಬೆಟ್ಟ ಮಧು, ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಸೋಮೇಶ್, ಚೌಡ್ಲು ವಿಎಸ್ಎಸ್ಎನ್ ನಿರ್ದೇಶಕ ಭಾನುಪ್ರಕಾಶ್, ಶಕ್ತಿ ಕೇಂದ್ರ ಸಹ ಪ್ರಮುಖ್ ಯಡೂರು ರವಿ ಅವರುಗಳು ಉಪಸ್ಥಿತರಿದ್ದರು.