ಸೋಮವಾರಪೇಟೆ, ಆ. ೧೦: ಸಿ & ಡಿ ಜಾಗ ಹಾಗೂ ಸೆಕ್ಷನ್-೪ ಸಮಸ್ಯೆಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಕಾರಣವಲ್ಲ; ಬದಲಿಗೆ ಕೇಂದ್ರ ಸರ್ಕಾ ರದ ತೀರ್ಪುಗಳು ಕಾರಣವಾಗಿದ್ದು, ಸಮಸ್ಯೆ ಬಗೆಹರಿಸುವಂತೆ ಈಗಾಗಲೇ ಶಾಸಕದ್ವಯರಿಗೆ ಪಕ್ಷದಿಂದ ಮನವಿ ಮಾಡಲಾಗಿದೆ. ರೈತರ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ ನೀಡಲಿದೆ ಎಂದು ಕಾಂಗ್ರೆಸ್ ಪ್ರಮುಖರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಂ. ಲೋಕೇಶ್ ಅವರು, ಕಳೆದ ೨೦ ವರ್ಷಗಳಿಂದಲೂ ಸಿ&ಡಿ ಮತ್ತು ಸೆಕ್ಷನ್-೪ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಿಕೊಂಡು ಬರಲಾಗಿದೆ. ಮಲೆನಾಡು ಭಾಗದಲ್ಲಿ ಈ ಸಮಸ್ಯೆ ಹೆಚ್ಚಿದ್ದು, ಪ್ರತಿಯೊಂದು ಕೆಲಸಕ್ಕೂ ಅರಣ್ಯ ಇಲಾಖೆ ಅಡ್ಡಗಾಲು ಹಾಕುತ್ತಿದೆ ಎಂದು ಆರೋಪಿಸಿದರು.

ಇಂದು ಮಡಿಕೇರಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಶಾಸಕದ್ವಯರಿಗೆ ಸಿ & ಡಿ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿದ್ದೇವೆ. ಕಲಾಪದಲ್ಲಿ ಈ ಬಗ್ಗೆ ಗಟ್ಟಿಧ್ವನಿಯಲ್ಲಿ ಪ್ರಸ್ತಾಪಿಸಿ ಸಮಸ್ಯೆ ಬಗೆಹರಿಸುವಂತೆ ಒತ್ತಡವನ್ನೂ ಹಾಕಿದ್ದೇವೆ. ಡಾ. ಮಂತರ್ ಗೌಡ ಹಾಗೂ ಎ.ಎಸ್. ಪೊನ್ನಣ್ಣ ಅವರು ಈ ಹಿಂದಿನಿAದಲೂ ರೈತಪರವಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಕಾಂಗ್ರೆಸ್ ಪಕ್ಷ ಎಂದಿಗೂ ರೈತ ವಿರೋಧಿ ಧೋರಣೆ ಅನುಸರಿಸಿಲ್ಲ. ಸಿ & ಡಿ ಸಮಸ್ಯೆ ಇಷ್ಟೊಂದು ಪ್ರಮಾಣದಲ್ಲಿ ಗಂಭೀರವಾಗಲು ಕೇಂದ್ರ ಸರ್ಕಾರದ ನೀತಿಗಳೇ ಕಾರಣ ಎಂದು ದೂರಿದರು.

ಈ ನಿಟ್ಟಿನಲ್ಲಿ ಶಾಸಕರುಗಳೊಂದಿಗೆ ಸಂಸದರೂ ಸಹ ಕಾರ್ಯೋನ್ಮುಖರಾಗಬೇಕು. ಶಾಸಕರುಗಳು ವಿಧಾನ ಸಭೆಯಲ್ಲಿ ಸರ್ಕಾರದ ಗಮನ ಸೆಳೆದರೆ, ಸಂಸದರು ಲೋಕಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಬೇಕು ಎಂದು ಆಗ್ರಹಿಸಿದ ಕೆ.ಎಂ. ಲೋಕೇಶ್, ಈಗಾಗಲೇ ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ನ್ಯಾಯಾಲಯದ ಆದೇಶದ ನೆಪವೊಡ್ಡಿ ಅರಣ್ಯ ಇಲಾಖೆ ಅಡ್ಡಗಾಲು ಹಾಕುತ್ತಿದೆ. ಆದರೆ ಅರಣ್ಯ ಇಲಾಖೆಗೆ ಬಂದಿರುವ ಆದೇಶವನ್ನು ಬಹಿರಂಗ ಪಡಿಸುವಂತೆ ಕೇಳಿದರೆ ಈವರೆಗೆ ಆದೇಶದ ಪ್ರತಿ ತೋರಿಸಿಲ್ಲ ಎಂದರು.

ಸಿ & ಡಿ ಸಮಸ್ಯೆ ಕೇವಲ ಕೊಡಗಿಗೆ ಮಾತ್ರ ಸೀಮಿತವಾಗಿಲ್ಲ. ಮಲೆನಾಡು ಭಾಗಕ್ಕೆ ಈ ಸಮಸ್ಯೆ ತೂಗುಗತ್ತಿಯಾಗಿದೆ. ಈ ಹಿನ್ನೆಲೆ ಮಲೆನಾಡು ಭಾಗದ ಎಲ್ಲಾ ಶಾಸಕರು, ಸಂಸದರು ಒಂದಾಗಿ ಸರ್ಕಾರಗಳ ಗಮನ ಸೆಳೆಯಬೇಕು. ಈ ಬಗ್ಗೆಯೂ ಕೊಡಗಿನ ಶಾಸಕರಿಗೆ ಮನವರಿಕೆ ಮಾಡಿಕೊಡಲಾಗಿದೆ. ಈರ್ವರು ಶಾಸಕರು ಈ ಹಿಂದಿನಿAದಲೂ ಸಿ ಮತ್ತು ಡಿ ಜಾಗ ಸಮಸ್ಯೆ ನಿವಾರಣೆಗೆ ಪ್ರಯತ್ನಿಸುತ್ತಿದ್ದಾರೆ ಎಂದು ಲೋಕೇಶ್ ಹೇಳಿದರು.

ಕಾನೂನು ಹಾಗೂ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟ ನಡೆಸಬೇಕಿದೆ. ಈ ನಿಟ್ಟಿನಲ್ಲಿ ಶಾಸಕರು ಪ್ರಯತ್ನ ಮುಂದುವರೆಸಿದ್ದಾರೆ. ತಾ. ೧೨ರ ಪ್ರತಿಭಟನೆಗೆ ರೈತರ ಹಿತಕ್ಕಾಗಿ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಲೋಕೇಶ್ ತಿಳಿಸಿದರು.

ಗೋಷ್ಠಿಯಲ್ಲಿದ್ದ ಜಿಲ್ಲಾ ಕಾಂಗ್ರೆಸ್‌ನ ಮತ್ತೋರ್ವ ಉಪಾಧ್ಯಕ್ಷ ನಂದಕುಮಾರ್ ಮಾತನಾಡಿ, ಕಂದಾಯ ಹಾಗೂ ಅರಣ್ಯ ಇಲಾಖೆಯನ್ನು ಒಳಗೊಂಡAತೆ ಜಂಟಿ ಸರ್ವೆ ಆಗದ ಹೊರತು ಈ ಸಮಸ್ಯೆ ಬಗೆಹರಿಯುವುದಿಲ್ಲ. ಜಂಟಿ ಸರ್ವೆಯ ಮೂಲಕ ಸಿ&ಡಿ ಜಾಗವನ್ನು ಗುರುತಿಸಬೇಕು. ಈಗಾಗಲೇ ವ್ಯವಸಾಯ ಮಾಡಿಕೊಂಡಿರುವ ಜಾಗವನ್ನು ಕಂದಾಯ ಇಲಾಖೆಯ ವಶಕ್ಕೆ ಪಡೆಯಬೇಕು ಎಂದರು.

ಗೋಷ್ಠಿಯಲ್ಲಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್ ಮಾತನಾಡಿ, ಅಕ್ರಮ ಸಕ್ರಮ ಸಮಿತಿಗೆ ೭೪೦೪ ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಹಿಂದಿನಿAದಲೂ ಇರುವ ಆದೇಶಗಳ ಪ್ರಕಾರ ೮೦ ಅರ್ಜಿಗಳು ಮಾತ್ರ ವಿಚಾರಣೆಗೆ ಯೋಗ್ಯವಾಗಿವೆ. ಪ್ಲಾಂಟೇಷನ್ ಬೆಳೆಗಳು ಇರುವ ಜಾಗಕ್ಕೆ ದಾಖಲೆ ನೀಡಲು ಪ್ರಸ್ತುತ ಅವಕಾಶವಿಲ್ಲ. ಈ ಹಿನ್ನೆಲೆ ಪ್ಲಾಂಟೇಷನ್ ಬೆಳೆಗಳಿಗೂ ಅವಕಾಶ ಕಲ್ಪಿಸಬೇಕೆಂದು ಕೋರಿ ಶಾಸಕರುಗಳಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಮುಖರಾದ ವಿ.ಎ. ಲಾರೆನ್ಸ್, ಜಿಲ್ಲಾ ಕಾಂಗ್ರೆಸ್ ಪ್ರಮುಖರಾದ ಎಸ್.ಎಂ. ಚಂಗಪ್ಪ ಉಪಸ್ಥಿತರಿದ್ದರು.