ಮಡಿಕೇರಿ, ಆ. ೧೦: ನಿರ್ಗತಿಕರ ಸೇವೆ, ಪರಿಸರ ರಕ್ಷಣೆಗೆ ಗಿಡ ನೆಡುವುದು, ಬೀದಿ ಪ್ರಾಣಿಗಳಿಗೆ ಆಶ್ರಯವಾಗುವುದು ಹೀಗೆ ಹತ್ತು ಹಲವು ಬಗೆಯಲ್ಲಿ ಸಮಾಜದ ಸೇವೆ ಮಾಡುವವರು ನಮ್ಮ ಸುತ್ತಮುತ್ತಲಿನಲ್ಲಿ ಕಾಣಲು ಸಿಗುತ್ತಾರೆ.

ಆದರೆ ರಸ್ತೆಯಲ್ಲಿ ಗುಂಡಿ ಬಿದ್ದಿದ್ದರೆ ಅದನ್ನು ಸರಿಮಾಡುವ ಒಬ್ಬ ವ್ಯಕ್ತಿ ಕುಶಾಲನಗರದಲ್ಲಿ ಇದ್ದಾರೆ. ರಸ್ತೆಯಲ್ಲಿ ಹೋಗುವ ಸಂದರ್ಭ ಯಾವುದೇ ಗುಂಡಿ ಕಂಡರೆ ಸಾಕು ಅದನ್ನು ಮುಚ್ಚುವ ಕೆಲಸಕ್ಕೆ ಮುಂದಾಗುವ ಈ ವ್ಯಕ್ತಿಯ ಹೆಸರು ಉಲ್ಜರ್.

೭೦ರ ಆಸುಪಾಸಿನ ಈ ವ್ಯಕ್ತಿ ಚಿಕ್ಕ ವಯಸಿನಲ್ಲೇ ಸೋಮವಾರಪೇಟೆಯಿಂದ ಮನೆ ಬಿಟ್ಟು ಕುಶಾಲನಗರಕ್ಕೆ ಬಂದು ಇಲ್ಲೇ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಸುಮಾರು ೪೦ ವರ್ಷದಿಂದ ಬದುಕು ಕಟ್ಟಿಕೊಂಡಿದ್ದಾರೆ. ಮುಖ್ಯವಾಗಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವುದು ಮತ್ತು ಗೂಡ್ಸ್ ವಾಹನ ಓಡಿಸುತ್ತಿದ್ದ ಸಂದರ್ಭ ಕೆಟ್ಟ ರಸ್ತೆಯಿಂದ ಆದ ಅನುಭವದಿಂದ ಇವರು ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ.

ರಸ್ತೆಯಲ್ಲಿ ಗುಂಡಿ ಸಿಕ್ಕರೆ ಸಾಕು ಅವುಗಳನ್ನು ಮುಚ್ಚಲು ತಮ್ಮ ದ್ವಿಚಕ್ರ ವಾಹನದಲ್ಲಿ ಒಂದು ಪ್ಲಾಸ್ಟಿಕ್ ಡಬ್ಬ ಹೊತ್ತು ಹೊರಟು ಬಿಡುತ್ತಾರೆ ಡಬ್ಬ ತುಂಬೆಲ್ಲ, ಕಲ್ಲು ಮಣ್ಣು ಕಟ್ಟಡದ ತ್ಯಾಜ್ಯ ಸಂಗ್ರಹಿಸಿ ತಂದು ಏಕಾಂಗಿಯಾಗಿ ಇದೆಲ್ಲಾ ದೇವರ ಕಾರ್ಯ ಎಂದು ಗುಂಡಿ ಮುಚ್ಚುವ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ಹತ್ತಾರು ವರ್ಷದಿಂದ ಕುಶಾಲನಗರ ವ್ಯಾಪ್ತಿಯಲ್ಲಿ ಇವರು ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. -ಗಿರಿಧರ್, ಕೊಂಪುಳಿರ