ಮಡಿಕೇರಿ, ಜು. ೨೩: ಕೊಡಗು ಜಿಲ್ಲೆಯಲ್ಲಿರುವ ಅರೆಭಾಷೆ ಗೌಡ ಜನಾಂಗದ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಕ್ರೀಡಾ ಕೇಂದ್ರದ ಸ್ಥಾಪನೆಗಾಗಿ ಮದೆನಾಡು ಗ್ರಾಮದ ಸರ್ವೆ ನಂಬರ್ ೯೮/೧ ಪೈಸಾರಿ ಜಾಗದಲ್ಲಿ ಖಾಲಿ ಇರುವ ೧೩ ಎಕರೆ ಜಾಗವನ್ನು ಮಡಿಕೇರಿ-ಕೊಡಗು ಗೌಡ ಸಮಾಜಕ್ಕೆ ಮಂಜೂರು ಮಾಡಲು ಕೊಡಗು ಗೌಡ ಸಮಾಜದ ಮುಖಂಡರು ಶಾಸಕ ಎ.ಎಸ್. ಪೊನ್ನಣ್ಣ ಅವರಲ್ಲಿ ಮನವಿ ಸಲ್ಲಿಸಿದರು.

ಬೆಂಗಳೂರಿನ ವಿಧಾನಸೌಧದ ಕಚೇರಿಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಭೇಟಿ ಮಾಡಿದ ಮುಖಂಡರು ಭಾಗಮಂಡಲ ಗೌಡ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರು ರೂ. ೧ ಕೋಟಿ ಅನುದಾನ ನೀಡುವ ಭರವಸೆ ಇತ್ತಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಗೌಡ ಸಮಾಜಕ್ಕೆ ಮದೆನಾಡು ಗ್ರಾಮದಲ್ಲಿ ಜಾಗ ಒದಗಿಸುವ ಬೇಡಿಕೆಯನ್ನು ಸಚಿವ ಸಂಪುಟದ ಮುಂದಿಡ ಲಾಗುವುದು ಎಂದರು. ಸಮಾಜದ ಇನ್ನಿತರ ಹಲವು ಪ್ರಮುಖ ಬೇಡಿಕೆಗಳ ಮನವಿ ಪತ್ರವನ್ನು ಕೂಡ ಈ ಸಂದರ್ಭ ಶಾಸಕರಿಗೆ ಸಲ್ಲಿಸಲಾಯಿತು. ಮನವಿಯನ್ನು ಸ್ವೀಕರಿಸಿದ ಶಾಸಕರು ಸಮಾಜದ ಮನವಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು. ಈ ಸಂದರ್ಭ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಗೌಡ ಸಮಾಜದ ಪ್ರಮುಖರಾದ ಸೂರ್ತಲೆ ಸೋಮಣ್ಣ, ಗಿರೀಶ್, ಆನಂದ್, ರಾಜೇಂದ್ರ, ಅನಂತ್, ಕುಮಾರ್, ವಸಂತ, ಸಂದೀಪ್, ಸೀತರಾಮ್, ದಮಯಂತಿ ಹಾಗೂ ಇತರರು ಇದ್ದರು.