ಕರಿಕೆ, ಜು. ೨೧: ಇಲ್ಲಿಗೆ ಸಮೀಪದ ತೋಟಮ್ ಮಂಜನಡ್ಕ ಎಂಬಲ್ಲಿ ಮೂರು ದಿನಗಳ ಹಿಂದೆ ಮುಳುಗು ಸೇತುವೆಯಲ್ಲಿ ಬೈಕ್ ದಾಟಿಸುವ ಸಂದರ್ಭದಲ್ಲಿ ಬೈಕ್ ಸಮೇತ ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ ಪತ್ತೆಯಾಗಿದೆ.

ಬೆಳಗಾವಿ ಮೂಲದ ದುರ್ಗಪ್ಪ ಮಾದರ (೧೯) ಮೃತದೇಹ ಸೋಮವಾರ ಬೆಳಿಗ್ಗೆ ನಾಪತ್ತೆಯಾದ ಸ್ಥಳದಿಂದ ಒಂದೂವರೆ ಕಿ.ಮೀ. ದೂರದ ಪಾಣತ್ತೂರ್ ಸಮೀಪದ ವಟ್ಟಕುಂಡ್ ಬಳಿ ಪತ್ತೆಯಾಗಿದೆ.

ಮಳೆಯ ಆರ್ಭಟ ತಗ್ಗಿದ ಪರಿಣಾಮ ನದಿಯಲ್ಲಿ

(ಮೊದಲ ಪುಟದಿಂದ) ನೀರಿನ ಪ್ರಮಾಣ ಕಡಿಮೆಯಾಗಿತ್ತು. ಸ್ಥಳೀಯರು ಹುಡುಕಾಟದಲ್ಲಿ ತೊಡಗಿದ್ದ ಸಂದರ್ಭದಲ್ಲಿ ನದಿಯಲ್ಲಿ ಮೃತದೇಹ ಗೋಚರಿಸಿದ್ದು, ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿದ್ದು, ಬೆಳ್ಳರಿಕುಂಡ್ ತಾಲೂಕು ತಹಶೀಲ್ದಾರ್ ಮುರಳಿಧರ್ ಸಮ್ಮುಖದಲ್ಲಿ ಎನ್‌ಡಿ ಆರ್‌ಎಫ್ ತಂಡ ಮೃತದೇಹ ಹೊರತೆಗೆದು ನಂತರ ಕರಿಕೆ ಗ್ರಾ.ಪಂ. ಅಧ್ಯಕ್ಷ ಎನ್. ಬಾಲಚಂದ್ರ ನಾಯರ್, ಪನತಡಿ ಗ್ರಾ.ಪಂ. ಅಧ್ಯಕ್ಷೆ ಪ್ರಸನ್ನ ಪ್ರಸಾದ್ ಹಾಗೂ ಪಂಚಾಯತ್ ಸದಸ್ಯರು, ಮೃತನ ಪೋಷಕರ ಸಮ್ಮುಖದಲ್ಲಿ ಮಹಜರು ನಡೆಸಿ ಕಾಸರಗೋಡು ಜಿಲ್ಲಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು. ನಂತರ ಮೃತನ ಹುಟ್ಟೂರು ಬೆಳಗಾವಿಗೆ ಮೃತದೇಹ ಕೊಂಡೊಯ್ಯಲಾಯಿತು.