ಮಡಿಕೇರಿ, ಜು. ೨೧ : ಬೈಕ್ ಕಳವು ಮಾಡುತ್ತಾ ಅದೇ ಬೈಕ್‌ನಲ್ಲಿ ಊರಿಂದೂರಿಗೆ ಸುತ್ತಾಡುತ್ತಾ ಎಲ್ಲೆಂದರಲ್ಲಿ ಕಳವು ಮಾಡಿ ಸಂಚರಿಸುತ್ತಿರುವ ಕಳ್ಳರು ಕೊಡಗಿಗೂ ಕಾಲಿಟ್ಟಿದ್ದರು. ಈ ಕಳ್ಳರು ಇತ್ತೀಚೆಗೆ ಪೊಲೀಸ್ ವಸತಿ ಗೃಹಗಳಿಗೆ ನುಗ್ಗಿ ಕಳವು ಮಾಡಿದ್ದಲ್ಲದೆ ಮತ್ತೊಂದು ಬೈಕ್ ಕಳವು ಮಾಡಿ ಪರಾರಿಯಾಗಿ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿರುವ ಪ್ರಕರಣ ಇದಾಗಿದೆ..!

ಕಳೆದ ಜೂನ್ ೧೭ರಂದು ರಾತ್ರಿ ಜಿಲ್ಲಾ ಕೇಂದ್ರ ಮಡಿಕೇರಿಯ ಮೈತ್ರಿ ಪೊಲೀಸ್ ಸಮುದಾಯದ ಬಳಿ ಇರುವ ಪೊಲೀಸ್ ವಸತಿಗೃಹಗಳಲ್ಲಿ ಕಳ್ಳತನವಾಗಿತ್ತು. ಸುಮಾರು ಎಂಟು ಮನೆಗಳ ಬೀಗ ಒಡೆದಿದ್ದ ಕಳ್ಳರು ಮನೆಯೊಳಗಡೆ ಸಿಕ್ಕಿದ ಅಂದಾಜು ರೂ.೯೦ಸಾವಿರದಷ್ಟು ಹಣ, ಬೆಳ್ಳಿ ದೀಪಗಳು ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು. ಮರುದಿನ ವಸತಿ ಗೃಹದಲ್ಲಿದ್ದ ಕೆಲವರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಡಿಕೇರಿ ನಗರದೊಳಗಡೆ ಪೊಲೀಸ್ ಇಲಾಖೆ ವತಿಯಿಂದ ಅಳವಡಿಸಲಾಗಿರುವ ಸಿಸಿ ಕ್ಯಾಮರಾಗಳು ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಖಾಸಗಿಯವರು ಅಳವಡಿಸಿದ್ದ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದರೂ ಯಾವದೇ ಪ್ರಯೋಜನವಾಗಿರಲಿಲ್ಲ..!

(ಮೊದಲ ಪುಟದಿಂದ)

ಕೆರೆಯಲ್ಲಿ ಬೈಕ್ ಪತ್ತೆ..!

ಮರುದಿನ ಕಳವು ಮಾಡಿದ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿದ ಪೊಲೀಸರು ಜಿಲ್ಲೆಯ ಎಲ್ಲೆಡೆ, ಗಡಿ ಭಾಗಗಳಲ್ಲಿ ಅಪರಿಚಿತರ ಸಂಚಾರವನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಈ ಸಂದರ್ಭ ಮಾದಾಪುರ ರಸ್ತೆಯ ಹಟ್ಟಿಹೊಳೆ ಬಳಿಯ ಕೆರೆಯ ಬದಿ ಬೈಕ್ ಒಂದು ಬಿದ್ದಿರುವದನ್ನು ಗಮನಿಸಿದ ಗ್ರಾಮಸ್ಥರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೈಕ್ ಅನ್ನು ಮೇಲೆತ್ತಿ ಪರಿಶೀಲಿಸಿದಾಗ ಅದು ಗೋವಾ ರಾಜ್ಯಕ್ಕೆ ಸೇರಿದ್ದಾಗಿದ್ದು, ಅದನ್ನು ಅಲ್ಲಿಂದ ಕಳವು ಮಾಡಿರುವದು ಪತ್ತೆಯಾಗಿದೆ..!

ಬೈಕ್ ಅಪಹರಣ..!

ಅದೇ ದಿನ ನಡುರಾತ್ರಿ ಬಳಿಕ ಮತ್ತೊಂದು ಬೈಕ್ ಅಪಹರಣವಾಗಿದೆ. ಮಕ್ಕಂದೂರು ಗ್ರಾಮ ನಿವಾಸಿ ಜಗದೀಶ್ ಎಂಬವರಿಗೆ ಸೇರಿದ ಬೈಕ್(ಕೆ.ಎ.೧೨-ಕೆ.೯೫೫೮) ಅನ್ನು ನಾಗೇಶ್ ಎಂಬವರು ಪಡೆದುಕೊಂಡು ರಸ್ತೆ ಬದಿಯಲ್ಲಿ ಅವರು ತಂಗಿರುವ ಮನೆಯ ಬಳಿ ನಿಲ್ಲಿಸಿದ್ದರು. ನಡುರಾತ್ರಿವರೆಗೂ ಇದ್ದ ಬೈಕ್ ಬೆಳಿಗ್ಗೆ ನೋಡುವಾಗ ಕಳವಾಗಿತ್ತು. ಈ ಬೈಕ್‌ನ ಹುಡುಕಾಟದ ಸಂದರ್ಭದಲ್ಲಿ ಗೋವಾದ ಬೈಕ್ ಕೆರೆಯಲ್ಲಿ ಪತ್ತೆಯಾಗಿದೆ..!

ಹಳೆಬೀಡಿನಲ್ಲಿ ಪತ್ತೆ..!

ಬೈಕ್ ಕಳವಾಗಿರುವ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ಶೋಧ ಕಾರ್ಯದಲ್ಲಿ ತೊಡಗಿಕೊಂಡ ಗ್ರಾಮಾಂತರ ಠಾಣಾ ನಿರೀಕ್ಷಕ ಚಂದ್ರಶೇಖರ್ ನೇತೃತ್ವದ ತಂಡದವರು ಮಡಿಕೇರಿ-ಮಾದಾಪುರ ರಸ್ತೆ ಬದಿಯಲ್ಲಿರುವ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ಮಾಡಿದ್ದಾರೆ. ಎಲ್ಲೋ ಒಂದು ಕಡೆ ಬೈಕ್ ಸೋಮವಾರಪೇಟೆ ದಾಟಿ ಹಾಸನ ಜಿಲ್ಲೆಯತ್ತ ತೆರಳಿರುವದು ಪತ್ತೆಯಾಗಿದೆ. ಇದರ ಆಧಾರದಲ್ಲಿ ಶೋಧ ಕಾರ್ಯ ಮುಂದುವರಿಸಿದಾಗ ಕಳವಾಗಿದ್ದ ಬೈಕ್ ಬೇಲೂರು ಬಳಿಯ ಹಳೆಬೀಡಿನಲ್ಲಿ ಪತ್ತೆಯಾಗಿದೆ. ಕಳ್ಳರು ಬೈಕನ್ನು ಅಲ್ಲಿ ನಿಲ್ಲಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಬೈಕ ಅನ್ನು ವಶಪಡಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ..!

ಗೋವಾದಿAದ ಬಂದವರು..!

ಹಟ್ಟಿಹೊಳೆ ಬಳಿಯ ಕೆರೆಯಲ್ಲಿ ಪತ್ತೆಯಾದ ಬೈಕ್‌ನ ಆಧಾರದಲ್ಲಿ ಕಳ್ಳರು ಗೋವಾದಿಂದ ಬಂದವರೆAದು ಖಾತರಿಯಾಗಿದೆ. ಅಲ್ಲಿಂದ ಬೈಕ್ ಕಳ್ಳತನ ಮಾಡಿಕೊಂಡು ಮಾರ್ಗದುದ್ದಕ್ಕೂ ಕಳವು ಮಾಡಿಕೊಂಡು ಬಂದು ಮಡಿಕೇರಿಯಲ್ಲಿ ಪೊಲೀಸರ ಮನೆಗಳಿಗೆ ನುಗ್ಗಿದ್ದಾರೆ. ನಂತರ ಪರಾರಿಯಾಗುವಾಗ ನಡುರಾತ್ರಿಯಲ್ಲಿ ಮಕ್ಕಂದೂರಿನಲ್ಲಿ ರಸ್ತೆ ಬದಿಯಲ್ಲಿ ಕಂಡ ಬೈಕನ್ನು ಕೂಡ ಅಪಹರಿಸಿ ಅದೇ ಮಾರ್ಗವಾಗಿ ಮುಂದುವರೆದಿದ್ದಾರೆ. ಆದರೆ ಹಟ್ಟಿ ಹೊಳೆ ಬಳಿ ಬೈಕ್‌ನ ಪೆಟ್ರೋಲ್ ಖಾಲಿಯಾದ ಹಿನ್ನೆಲೆಯಲ್ಲಿ ಅದನ್ನು ಅಲ್ಲಿಯೇ ಕೆರೆಗೆ ಎಸೆದು ಇನ್ನೊಂದು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ..!

ಮೂವರು ಕಳ್ಳರು..!

ಕಳ್ಳರ ತಂಡದಲ್ಲಿ ಮೂವರು ಇರುವ ಬಗ್ಗೆ ತಿಳಿದು ಬಂದಿದೆ. ಬೈಕ್‌ನಲ್ಲಿ ಬಂದ ಮೂವರು ಮನೆ ಕಳ್ಳತನ ಮಾಡಿ ಅಲ್ಲಿಂದ ಮಕ್ಕಂದೂರುವಿನಲ್ಲಿ ಮತ್ತೊಂದು ಬೈಕ್ ಅಪಹರಿಸಿ ಪರಾರಿಯಾಗಲು ಯತ್ನಿಸಿದಾಗ ಮಧ್ಯದಲ್ಲಿ ಒಂದು ಬೈಕ್ ಕೈಕೊಟ್ಟ ಹಿನ್ನೆಲೆಯಲ್ಲಿ ಅದನ್ನು ಅಲ್ಲಿಯೇ ಎಸೆದು ಒಂದೇ ಬೈಕ್‌ನಲ್ಲಿ ಕಾಲ್ಕಿತ್ತಿದ್ದಾರೆ..!

ತನಿಖೆಗೆ ತೊಡಕು..!

ಯಾವದೇ ಅಪರಾಧ ಪ್ರಕರಣವಾದರೂ ಇಂದಿನ ಆಧುನಿಕ ತಂತ್ರಜ್ಞಾನದಡಿ ಆರೋಪಿಗಳನ್ನು ಪತ್ತೆಹಚ್ಚಬಹುದಾಗಿದೆ. ಮೊಬೈಲ್ ನೆಟ್ವರ್ಕ್ ಜಾಲದ ಮೂಲಕ ಕಂಡುಹಿಡಿಯಬಹುದಾಗಿದೆ. ಆದರೆ, ಈ ಕಳ್ಳರು ಮೊಬೈಲ್ ಬಳಸುತ್ತಿರುವ ಬಗ್ಗೆ ಯಾವದೇ ಸುಳಿವು ಸಿಗುತ್ತಿಲ್ಲ. ಒಂದು ವೇಳೆ ಮೊಬೈಲ್ ಬಳಸಿದಲ್ಲಿ ಕಂಡುಹಿಡಿಯಲು ಸಾಧ್ಯವಾಗುತ್ತಿತ್ತು. ಹಾಗಾಗಿ ಈ ಒಂದು ಪ್ರಕರಣ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದು, ಆದರೂ ತನಿಖೆಯ ಹಾದಿಯಲ್ಲಿದ್ದಾರೆ. ಕಳ್ಳರು ಯಾವ ಹಾದಿಯಲ್ಲಿ ಸಾಗಿದ್ದಾರೆ ಎಂಬದೇ ನಿಗೂಢ..!? -ಕುಡೆಕಲ್ ಸಂತೋಷ್