ಗುರು ಪರಂಪರೆಯ ಎಲ್ಲಾ ಸದ್ಗುರುಗಳನ್ನೂ ಸ್ಮರಿಸಿ ಅವರು ಹೇಳಿಕೊಟ್ಟಿರುವ ಬೋಧನೆಗಳನ್ನು ಏಕಚಿತ್ತದಿಂದ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯೋಣ.

ಗುರುವಿನ ಕೃಪೆಯು ಪೂರ್ಣ ಚಂದ್ರನ ಹಾಗೆ. ಶೋಭೆಯನ್ನೂ, ತಂಪನ್ನೂ ಹೊಂದಿರುತ್ತದೆ. ಗುರು ಕೃಪೆಯು ‘ಶಿಷ್ಯನಲ್ಲಿ’ರುವ ಅಜ್ಞಾನವೆಂಬ ಕತ್ತಲನ್ನು ನಿವಾರಿಸಿ, ಅವನಲ್ಲಿ ಪ್ರಕಾಶ ಬೆಳಗಿಸುವುದು.

ಪುಣ್ಯ ನದಿಗಳ ಸಂಗಮವನ್ನು ಭಾರತೀಯರು ತೀರ್ಥಸ್ನಾನಗಳಾಗಿ ಕಾಣುವರು. ಎಲ್ಲಾ ತೀರ್ಥ ಕ್ಷೇತ್ರಗÀಳಿಗಿಂತ ಪವಿತ್ರವಾದುದು ಎಂದರೆ ಗುರು - ಶಿಷ್ಯರ ಸಂಗಮ. ಇಲ್ಲಿ ಶಿಷ್ಯನ ಜ್ಞಾನದಾಹದ ಪ್ರವಾಹ ಮತ್ತು ಗುರುವಿನ ಕಾರುಣ್ಯದ ಪ್ರವಾಹ ಇವುಗಳ ಸಂಗಮವಾಗುತ್ತದೆ. ಈ ಸಂಗಮವಾಗುವುದು ಶಿಷ್ಯನ ಹೃದಯ ಮಂದಿರದಲ್ಲಿ. ಗುರುವು ಶಿಷ್ಯನಿಗೆ ನೀಡುವ ಅತ್ಯಂತ ಮಹತ್ತರವಾದ ಉಡುಗೊರೆ ಎಂದರೆ ಆತ್ಮಜ್ಞಾನ. ಸದ್ಯ ನಮಗೆ ‘ನಾವು’ ಯಾರೆಂಬುದೇ ಅತ್ಯಂತ ನಿಗೂಢವಾಗಿದೆ. ಲೋಕದ ಅನೇಕ ಜ್ಞಾನಗಳ ಬಗ್ಗೆ ನಮಗೆ ಗೊತ್ತಿರುತ್ತದೆ. ಆದರೆ ನಿಜವಾಗಿಯೂ ‘ನಾವು ಯಾರೆಂಬುದೇ ಗೊತ್ತಿರುವುದಿಲ್ಲ. ಗುರುವು ನಮ್ಮ ಶ್ರದ್ಧೆಯನ್ನೂ, ದೃಷ್ಟಿಯನ್ನೂ ಆತ್ಮದ ಕಡೆಗೆ ಹೊರಳಿಸುತ್ತಾನೆ. ಸತ್ಯ ಸಾಕ್ಷಾತ್ಕಾರಕ್ಕೆ ಅನೇಕ ಮಾರ್ಗಗಳಿವೆ. ಮಾರ್ಗ ಯಾವುದಾದರೂ ಪೂರ್ಣನಾದ ಗುರುವಿನ ಮಾರ್ಗದರ್ಶನ ನಮಗೆ ಬೇಕೇ ಬೇಕು.

ಮಕ್ಕಳಿಗೆ ಮೊದಲ ಗುರು ಜನ್ಮದಾತೆಯೇ ಆಗಿರುತ್ತಾಳೆ. ಹಾಗೆಯೇ ಹತ್ತು ಹಲವಾರು ವಿದ್ಯೆ ಕಲಿಯಲು ಗುರುವಿನ ಮಾರ್ಗದರ್ಶನ ಬೇಕೇ ಬೇಕು. ಗುರುವಿನ ದಿವ್ಯ ಸಾನಿಧ್ಯದಲ್ಲಿ ಸಮಯ ವಿನಿಯೋಗಿಸಿದಾಗ ಧ್ಯಾನ, ಈಶ್ವರ ಪೂಜೆ, ಪ್ರಾರ್ಥನೆ, ನಿಸ್ವಾರ್ಥ ಸೇವೆ, ಪ್ರೇಮ, ಕರುಣೆ, ಸಹನೆ ಮುಂತಾದ ಎಲ್ಲಾ ಗುಣಗಳ ನಿಜವಾದ ಅರ್ಥವೂ ಅವುಗಳ ಆಳವೂ ನಮ್ಮ ಅರಿವಿಗೆ ಬರುತ್ತದೆ.

ಶಿಷ್ಯನಲ್ಲಿ ವಿಶ್ವಾಸವೂ, ಆತ್ಮಸಮರ್ಪಣೆಯೂ ಇದ್ದರೆ ಮಾತ್ರವೇ ಗುರು - ಶಿಷ್ಯ ಸಂಬAಧವು ಪೂರ್ಣತೆಯನ್ನು ಪಡೆಯುವುದು. ಶ್ರೀ ಕೃಷ್ಣ, ಶ್ರೀ ರಾಮ, ರಾಮಕೃಷ್ಣ ಪರಮಹಂಸ, ಸಂತ ಏಕನಾಥ್, ಕಬೀರ್ ದಾಸ್ ಎಲ್ಲರಿಗೂ ಸದ್ಗುರುಗಳಿದ್ದರು. ಅಷ್ಟೇ ಅಲ್ಲದೆ, ಪರಶಿವನಿಗೂ ಗುರುಗಳಿದ್ದರು. ಒಂದು ದಿನ ಪರಮೇಶ್ವರನು ನಮಸ್ಕರಿಸುತ್ತಿರುವುದನ್ನು ಕಂಡ ಶಿವೆಯು ಈಶ್ವರನನ್ನು ‘ತಾವು ಯಾರಿಗೆ ನಮಸ್ಕರಿಸುತ್ತಿದ್ದೀರಿ’ ಎಂದು ಪ್ರಶ್ನಿಸುತ್ತಾಳೆ. ಶಿವನು ಆಗ ನಾನು ನನ್ನ ಗುರುವನ್ನು ಪೂಜಿಸಿ, ಗುರುವಿಗೆ ನಮಸ್ಕರಿಸುತ್ತಿರುವೆನು ಎನ್ನುತ್ತಾರೆ. ತದನಂತರ ಶಿವನು ಗುರುವಿನ ಮಹಾತ್ಮೆಯನ್ನು ಕೊಂಡಾಡುತ್ತಾ ಗುರುತತ್ವದ ಬಗ್ಗೆ ಪಾರ್ವತಿಗೆ ತಿಳಿಸಿಕೊಟ್ಟನು. ಈ ಸಂಭಾಷಣೆಯೇ ‘ಗುರುಗೀತೆ’ ಎಂಬ ಅಮರ ಕೃತಿಯಾಗಿದೆ. ೧೫ನೇ ಶತಮಾನದ ಸಂತಕವಿ ಕಬೀರ್ ದಾಸರು ‘ನನ್ನ ಮುಂದೆ ಗುರುವೂ ದೇವರೂ ಒಟ್ಟಿಗೆ ಪ್ರಕಟವಾದರೆ, ನಾನು ಮೊದಲು ಗುರುವಿಗೆ ನಮಸ್ಕರಿಸುತ್ತೇನೆ. ನಂತರ ದೇವರಿಗೆ ನಮಸ್ಕರಿಸುತ್ತೇನೆ. ಯಾಕೆಂದರೆ ಗುರುವೇ ನನಗೆ ದೇವರನ್ನು ಪಡೆಯುವ ಮಾರ್ಗ ತೋರಿಸಿದ್ದು, ಗುರು ಇಲ್ಲದೆ ನನಗೆ ಈಶ್ವರ ಪ್ರಾಪ್ತಿ ಆಗುತ್ತಿರಲಿಲ್ಲ’ ಎಂದಿದ್ದಾರೆ. ‘ಯೋಗ ವಸಿಷ್ಟ’ದಲ್ಲಿ ಶ್ರೀರಾಮನನ್ನು ವಸಿಷ್ಟರು ಕೇಳುವಾಗಲೂ, ಶ್ರೀರಾಮನು ನಾನು ಮೊದಲು ಗುರುವಿಗೆ ನಮಸ್ಕರಿಸುವೆ ಎಂದಿದ್ದಾರೆ.

ಹರ ಮುನಿದರೆ ಗುರುಕಾಯ್ವನು, ಗುರು ಮುನಿದರೆ ಕಾಯುವವ ರಾರೆಂಬ ನುಡಿ ಮಾತಿದೆ. ಗುರುವನ್ನು ಅರಿಯ ಬೇಕೆಂದರೂ ನಮಗೆ ಗುರುವಿನ ಕೃಪೆ ಬೇಕು. ಪ್ರಯತ್ನ ಮಾತ್ರದಿಂದ ನಾವು ಗುರುವನ್ನು ಅರಿಯಲಾರೆವು. ೧೯ನೇ ಶತಮಾನದ ಅವತಾರ ಪುರುಷ ಶ್ರೀ ರಾಮಕೃಷ್ಣರು ಒಂದು ದೃಷ್ಟಾಂತದ ಮೂಲಕ ಈ ತತ್ವವನ್ನು ಹೇಳಿದ್ದಾರೆ. ಆಗಿನ ಕಾಲದಲ್ಲಿ ಪೊಲೀಸರು ರಾತ್ರಿ ಪಾಳಿಯಲ್ಲಿ ಗಸ್ತು ತಿರುಗುವಾಗ ಲಾಟಿಯನ್ನು ಹಿಡಿದಿರುತ್ತಿದ್ದರು. ಇತರರ ಮುಖಕ್ಕೆ ಲಾಟೀನು ಹಿಡಿದು ನೋಡುತ್ತಿದ್ದರು. ಪೊಲೀಸರ ಮುಖ ಕಾಣಲು ಅವನೇ ಅದನ್ನು ಪ್ರತ್ಯೇಕ ರೀತಿಯಲ್ಲಿ ಎತ್ತಬೇಕಿತ್ತು. ಇದೇ ರೀತಿ ಗುರುವನ್ನು ಅರ್ಥಮಾಡಿ ಕೊಳ್ಳಬೇಕೆಂದರೆ ಗುರುವಿನ ಕರುಣೆಯೇ ಆಗಬೇಕು. ಗುರುವು ಕರುಣೆಯ ಮೇರು ಶಿಖರವೇ ಆಗಿದ್ದಾನೆ. ಪ್ರೇಮದ ಸಾಗರವೇ ಆಗಿದ್ದಾನೆ.

- ಶ್ರೀಮತಿ ರಾಜಲಕ್ಷಿö್ಮ ಗೋಪಾಲಕೃಷ್ಣ, ಮಡಿಕೇರಿ