ವೀರಾಜಪೇಟೆ, ಜು. ೯ : ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬುಧವಾರ ವೀರಾಜಪೇಟೆಯಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ಕಾರು ನಿಲ್ದಾಣದಲ್ಲಿ ಮುಷ್ಕರ ನಡೆಸಲಾಯಿತು.

ಮುಷ್ಕರ ನಿರತರು ವೀರಾಜಪೇಟೆಯ ಮಾರಿಯಮ್ಮ ದೇಗುಲದ ಬಳಿಯಿಂದ ಮೆರವಣಿಗೆಯಲ್ಲಿ ಸಾಗಿ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಿ ಕಾರು ನಿಲ್ದಾಣದಲ್ಲಿ ಜಮಾವಣೆಗೊಂಡರು.

ಮುಷ್ಕರ ನಿರತರನ್ನು ಉದ್ದೇಶಿಸಿ ಮಾತನಾಡಿದ ಸಿ.ಐ.ಟಿ.ಯು ಪ್ರಧಾನ ಕಾರ್ಯದರ್ಶಿ ಎ.ಸಿ. ಸಾಬು, ಕೇಂದ್ರ ಸರಕಾರವು ಕಾರ್ಮಿಕ ನೀತಿಗಳಿಗೆ ವಿರುದ್ಧವಾಗಿ ಕಾನೂನುಗಳನ್ನು ಜಾರಿಗೆ ತಂದಿದೆ. ಇಂದು ರಾಜ್ಯಾದ್ಯಂತ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿ ಮುಷ್ಕರ ನಡೆಯುತ್ತಿದೆ. ಬೆಲೆ ಏರಿಕೆಯಿಂದಾಗಿ ಕಾರ್ಮಿಕರ ಬದುಕು ಶೋಚನೀಯ ಸ್ಥಿತಿಗೆ ತಲುಪಿದೆ. ಸುಮಾರು ೭೦ ವರ್ಷಗಳಿಂದ ಕಾರ್ಮಿಕರಿಗೆ ನಿಗದಿಗೊಳಿಸಿರುವ ದುಡಿಮೆಯ ಸಮಯ ೮ ಗಂಟೆ. ಆದರೆ ಕೇಂದ್ರ ಸರಕಾರವು ೮ ಗಂಟೆ ಬದಲು ೧೨ ಗಂಟೆ ದುಡಿಯುವಂತೆ ಕಾನೂನು ಜಾರಿಗೆ ತಂದಿದೆ. ಇದರಿಂದ ಕಾರ್ಮಿಕರಿಗೆ ತೊಂದರೆಯಾಗಿದೆ ಎಂದರು.

ಮುಖ್ಯ ಭಾಷಣ ಮಾಡಿದ ಸಂಘಟನೆಯ ಪ್ರಮುಖರಾದ ಡಾ. ದುರ್ಗಾ ಪ್ರಸಾದ್, ಎಂಟು ಗಂಟೆ ಕೆಲಸದ ಅವಧಿ, ಖಾಯಂ ಕೆಲಸ, ಕೆಲಸಕ್ಕೆ ತಕ್ಕ ವೇತನ, ಸುರಕ್ಷತೆ, ಮುಷ್ಕರದ ಹಕ್ಕು ಇನ್ನಿತರ ಹಕ್ಕುಗಳನ್ನು ಇಲ್ಲವಾಗಿಸಿ ಕಾರ್ಮಿಕರನ್ನು ಗುಲಾಮರನ್ನಾಗಿಸಲು ಕೇಂದ್ರ ಸರಕಾರ ಮುಂದಾಗಿದ್ದು, ಕೇಂದ್ರ ಸರ್ಕಾರ ತನ್ನ ನಿಲುವನ್ನು ಬದಲಿಸಿಕೊಳ್ಳಬೇಕು. ಕಟ್ಟಡ ಕಾರ್ಮಿಕರು, ಆಟೋ ಟ್ಯಾಕ್ಸಿ ಚಾಲಕರು, ಮನೆ ಕೆಲಸಗಾರರು ಸೇರಿದಂತೆ ಇನ್ನಿತರ ಎಲ್ಲ ಅಸಂಘಟಿತ ಕಾರ್ಮಿಕರ ಮತ್ತು ಕೃಷಿ ತೋಟ ಕಾರ್ಮಿಕರು ಸೇರಿದಂತೆ ಎಲ್ಲಾ ವಿಭಾಗದ ಕಾರ್ಮಿಕರಿಗೆ ಕನಿಷ್ಟ ಮಾಸಿಕ ೯೦೦೦ ಪಿಂಚಣಿ ಹಾಗೂ ಸಾಮಾಜಿಕ ಭದ್ರತೆಯನ್ನು ಖಾತ್ರಿಪಡಿಸಬೇಕು. ಎನ್‌ಪಿಎಸ್ ಮತ್ತು ಯುಪಿಎಸ್ ರದ್ದುಪಡಿಸಿ ಹಳೆಯ ಪೆನ್ಷನ್ ಸ್ಕೀಮ್ ಅನ್ನು ಮರು ಸ್ಥಾಪಿಸಬೇಕು. ಪ್ರತಿ ೫ನೇ ತಾರೀಖಿನ ಒಳಗೆ ಕಾರ್ಮಿಕರ ವೇತನ ನೀಡಬೇಕು. ಸರಕಾರ ಕಾರ್ಮಿಕ ವಿರೋಧಿ ನೀತಿಯನ್ನು ಕೈಬಿಟ್ಟು ಕಾರ್ಮಿಕರ ಏಳಿಗೆಗಾಗಿ ನೀತಿಗಳನ್ನು ರೂಪಿಸಬೇಕೆಂದರು.

ಈ ಸಂದರ್ಭ ಮುಖಂಡರುಗಳಾದ ಎ.ಐ.ಟಿ.ಯು.ನ ವಕೀಲರಾದ ಸುನೀಲ್ ಮತ್ತು ಮಣಿ, ಸಿ.ಐ.ಟಿ.ಯು ಸಂಘಟನೆಯ ಪದಾಧಿಕಾರಿಗಳಾದ ಎನ್.ಡಿ. ಕುಟ್ಟಪ್ಪ, ಎ. ಮಹಾದೇವ, ಶಾಜಿ ರಮೇಶ್, ರಾಚಪ್ಪಜಿ, ಪುಷ್ಪ, ಹರಿದಾಸ್, ಅಂಗನವಾಡಿ ನೌಕರರ ಸಂಘಟನೆಯ ಜಿಲ್ಲಾಧ್ಯಕ್ಷೆ ಸುಮಿತ್ರ, ವೀರಾಜಪೇಟೆ ತಾಲೂಕು ಅಧ್ಯಕ್ಷೆ ಶೀಲಾ, ಬಿಸಿಯೂಟ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಕುಸುಮ, ಪೊನ್ನಂಪೇಟೆಯ ತಾಲೂಕು ಅಧ್ಯಕ್ಷರಾದ ಜಯಂತಿ ಮತ್ತು ನ್ಯಾನ್ಸಿ, ತೋಟ ಕಾರ್ಮಿಕರ ಸಂಘಟನೆಯ ಜಿಲ್ಲಾಧ್ಯಕ್ಷರಾದ ಪುಷ್ಪ, ಜನರಲ್ ವಕರ‍್ಸ್ ಯೂನಿಯನ್ ಜಿಲ್ಲಾ ಅಧ್ಯಕ್ಷರಾದ ಹೆಚ್. ಬಿ. ರಮೇಶ್, ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಸಂಚಾಲಕಿ ಪದ್ಮಿನಿ ಶ್ರೀಧರ್, ಎಲ್‌ಐಸಿ ಮತ್ತು ಆಸ್ಪತ್ರೆ ಸಿಬ್ಬಂದಿ, ನೌಕರರ ಸಂಘಟನೆ ಪದಾಧಿಕಾರಿಗಳು ಭಾಗವಹಿಸಿ ಮುಷ್ಕರಕ್ಕೆ ಬೆಂಬಲ ಸೂಚಿಸಿದರು.