ಮಡಿಕೇರಿ, ಜು. ೯: ನಗರದ ಎಲ್.ಐ.ಸಿ ಕಚೇರಿ ಬಳಿ ಆಟೋ ನಿಲ್ದಾಣದ ರಸ್ತೆಯಲ್ಲಿ ಬೃಹತ್ ಗುಂಡಿ ಸೃಷ್ಟಿಯಾಗಿದ್ದು, ವಾಹನ ಚಾಲಕರಿಗೆ, ಹೆಚ್ಚಾಗಿ ದ್ವಿಚಕ್ರ ವಾಹನ ಚಾಲಕರಿಗೆ ಅಪಾಯಕಾರಿಯಾಗಿ ಪರಿಣಮಿಸಿತ್ತು. ಇದನ್ನು ಗಮನಿಸಿದ ಅಲ್ಲಿನ ಆಟೋ ಚಾಲಕರು ಕಲ್ಲು-ಮಣ್ಣಿನಿಂದ ಗುಂಡಿಯನ್ನು ಸ್ವತಃ ತಾವೇ ಮುಚ್ಚಿ ಮಾದರಿಯಾದರು. ಆಟೋ ಚಾಲಕರಾದ ಮೋನಪ್ಪ ಪೂಜಾರಿ, ಲೋಹಿತ್, ಮಧು, ರಾಜು ಹಾಗೂ ಇತರ ಚಾಲಕರು ಸೇರಿ ಗುಂಡಿಯನ್ನು ಮುಚ್ಚುವ ಕಾರ್ಯ ಮಾಡಿದರು. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿಯೂ ಇದೇ ಭಾಗದಲ್ಲಿ ಗುಂಡಿಯಾಗಿದ್ದು, ಅಂದು ಕೂಡ ಅಲ್ಲಿನ ಆಟೋ ಚಾಲಕರೇ ಗುಂಡಿ ಮುಚ್ಚಿದ್ದರು. ಈ ವ್ಯಾಪ್ತಿಯ ವಾರ್ಡ್ ಸದಸ್ಯರು ಗುಂಡಿಯ ಬಗ್ಗೆ ತಲೆಕೆಡಿಸಿಕೊಳ್ಳದ ಕಾರಣ ಎರಡು ಬಾರಿಯೂ ಸ್ಥಳೀಯರೇ ಗುಂಡಿಮುಚ್ಚುವ ಪರಿಸ್ಥಿತಿ ಎದುರಾಯಿತು.