ಮಡಿಕೇರಿ, ಜು. ೪: ಶ್ರದ್ಧೆ ಹಾಗೂ ಶ್ರಮದಿಂದ ಮುನ್ನಡೆದರೆ ಮಾತ್ರ ಸಾಧನೆ ಶಿಖರವೇರಲು ಸಾಧ್ಯ ಎಂದು ನಗರದ ಸಂತ ಜೋಸೆಫರ ಶಾಲೆಯ ಸುಪೀರಿಯರ್ ರೆ. ಸಿಸ್ಟರ್ ಮರ್ಸಿ ಜೇಕಬ್ ಪ್ರತಿಪಾದಿಸಿದರು.

ಸಂತ ಜೋಸೆಫರ ವಿದ್ಯಾಸಂಸ್ಥೆ ಯಲ್ಲಿ ಆಯೋಜನೆಗೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಪ್ರಸ್ತುತ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಪ್ರತಿಜ್ಞಾವಿಧಿ ಸಮಾರಂಭದಲ್ಲಿ ಮಾತನಾಡಿದರು.

ಸತತ ಪ್ರಯತ್ನ ನಮಗೆ ನೀಡುವ ಆನಂದವೇ ನಿಜವಾದ ಸಂತೋಷವಾಗಿರುತ್ತದೆ. ಸಾಧನೆಗೆ ಶ್ರಮವನ್ನು ಹೊರತುಪಡಿಸಿ ಪರ್ಯಾಯ ಮಾರ್ಗಗಳಿಲ್ಲ. ಏಕಾಗ್ರತೆಯೊಂದಿಗೆ ಓದಿ ಮನೋಬಲ ಸಾಧಿಸಿದರೆ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಇದರಿಂದ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಹೊರಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸಂಸ್ಥೆಯ ಸಂಚಾಲಕರಾದ ಸಿಸ್ಟರ್ ಲೂರ್ದ್ ಮೇರಿ ಆಶೀರ್ವಚನ ನೀಡಿದರು.

ಸಂಸ್ಥೆಯ ಮುಖ್ಯ ಶಿಕ್ಷಕರಾದ ಸಿಸ್ಟರ್ ರೋಜಾ ಕಳೆದ ಶೈಕ್ಷಣಿಕ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆಗೈದು ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಅಲ್ಫಿಯಾ ಅವರನ್ನು ಸಂಸ್ಥೆಯ ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಿ ಗೌರವಿಸ ಲಾಯಿತು. ಅಂತೆಯೇ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡ ಮಕ್ಕಳಿಗೆ ಸ್ಮರಣಿಕೆಗಳನ್ನು ನೀಡಿ ಅಭಿನಂದಿಸಲಾಯಿತು. ನೂತನ ವಿದ್ಯಾರ್ಥಿ ವೃಂದದ ನಾಯಕರು ಪ್ರತಿಜ್ಞಾ ವಿಧಿ ಸ್ವೀಕರಿಸಿದ ನಂತರ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಸಂಸ್ಥೆಯ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಸಿಸ್ಟರ್ ಫಿಲೋಮಿನಾ, ಕಿಂಡರ್ ಗಾರ್ಟನ್ ವಿಭಾಗದ ಮುಖ್ಯಸ್ಥೆ ಸಿಸ್ಟರ್ ಅಂತೋಣಿಯಮ್ಮ ಉಪಸ್ಥಿತರಿದ್ದರು.