ಸೋಮವಾರಪೇಟೆ, ಜು. ೪: ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಿಥಿಲಾವಸ್ಥೆ ಹಾಗೂ ಅಪಾಯಕಾರಿ ಹಂತದಲ್ಲಿರುವ ಮನೆಗಳ ಮಾಲೀಕರಿಗೆ ಗ್ರಾ.ಪಂ. ಮೂಲಕ ನೋಟೀಸ್ ನೀಡಲಾಯಿತು.
ಮಳೆ-ಗಾಳಿಯಿಂದ ಮನೆಗಳಿಗೆ ಹಾನಿಯಾಗಿ ಅಪಾಯ ಸಂಭವಿಸುವ ಹಿನ್ನೆಲೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಕೆಲವು ಮನೆಗಳ ಮಾಲೀಕರಿಗೆ ತಾ.ಪಂ. ಹಾಗೂ ಗ್ರಾ.ಪಂ. ಸೂಚನೆ ನೀಡಲಾಯಿಗಿದೆ.
ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ಅವರ ನೇತೃತ್ವದಲ್ಲಿ ಹಾನಗಲ್ಲು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಯಶಾಂತ್ ಕುಮಾರ್, ಉಪಾಧ್ಯಕ್ಷೆ ರೇಣುಕ ವೆಂಕಟೇಶ್, ಸದಸ್ಯರಾದ ಸುದೀಪ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇದಪ್ಪ ಸೇರಿದಂತೆ ಇತರರು ಶಿಥಿಲಗೊಂಡಿರುವ ಮನೆಗಳನ್ನು ಪರಿಶೀಲಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾನಗಲ್ಲು ಗ್ರಾಮದ ಲೋಹಿತ್ ಆಚಾರ್ ರವರ ಮನೆ ಮಳೆಯಿಂದ ಹಾನಿಗೊಂಡಿರುವುದನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವೀಕ್ಷಿಸಿದರು. ಇದರೊಂದಿಗೆ ಜೋಸೆಫ್ ಮತ್ತು ರೂಪಾ ರವರ ಮನೆ ಮುಂಭಾಗ ಬರೆ ಕುಸಿದಿರುವ ಜಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಕಾನ್ವೆಂಟ್ ಬಾಣೆಯ ಗಣೇಶ್ ಅವರ ಮನೆಯ ಛಾವಣಿ ಸೋರುತ್ತಿರುವ ಹಿನ್ನೆಲೆ ಗ್ರಾ.ಪಂ. ನಿಂದ ಟಾರ್ಪಲ್ ವಿತರಿಸಲಾಯಿತು.