ವೀರಾಜಪೇಟೆ, ಜು. ೪: ಶೆಡ್ ನಿರ್ಮಿಸಿಕೊಂಡು ಕೊಳತ್ತೋಡು ಬೈಗೋಡುವಿನಲ್ಲಿ ನೆಲೆಸಿದ್ದ ಪರಿಶಿಷ್ಟ ಪಂಗಡ ನಿವೇಶನ ರಹಿತರನ್ನು ಅಲ್ಲಿಂದ ತೆರವು ಮಾಡಿದ ಕ್ರಮವನ್ನು ವಿರೋಧಿಸಿ ವೀರಾಜಪೇಟೆ ಮಿನಿವಿಧಾನ ಸೌಧ ಎದುರು ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾ ನಿರತರು ನಿವೇಶನ ಕಲ್ಪಿಸುವಂತೆ ಒತ್ತಾಯಿಸಿದರು. ೧೫ ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅರೆ ಬೆತ್ತಲೆ ಮೆರವಣಿಗೆ ಹಾಗೂ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭ ಮಾತನಾಡಿದ ಜಿಲ್ಲಾ ಸಂಚಾಲಕ ಪರಶುರಾಮ್, ಕೊಳತ್ತೋಡು ಬೈಗೋಡುವಿನಲ್ಲಿ ಪರಿಶಿಷ್ಟ ಪಂಗಡದ ನಿವೇಶನ ರಹಿತ ೨೧ ಕುಟುಂಬದ ಸದಸ್ಯರು ಸರ್ವೆ ನಂಬರ್ ೩೨೮/೧ ರ ಸುಮಾರು ೨೩ ಎಕರೆ ೭೦ ಸೆÀಂಟ್ ಜಾಗದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ವಾಸಿಸುತ್ತಿದ್ದರು. ತಾ. ೩ ರಂದು ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳ ತಂಡ ದಿಢೀರ್ ಆಗಮಿಸಿ ತೆರವು ಮಾಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಳ್ಳುವ ತೋಟದ ಮಾಲೀಕರ ವಿರುದ್ಧ ಕ್ರಮಕೈಗೊಳ್ಳದ ಅಧಿಕಾರಿಗಳು ಬಡವರ್ಗದ ಮೇಲೆ ಮಾತ್ರ ಪ್ರಹಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಪೊನ್ನಂಪೇಟೆ ತಾಲೂಕಿನ ನಿಟ್ಟೂರು ಗ್ರಾಮದ ಸುಮಾರು ೨೫ ಕುಟುಂಬಕ್ಕೆ ಜಾಗವೇ ಇಲ್ಲದೆ ಹಕ್ಕು ಪತ್ರ ನೀಡಿದ್ದಾರೆ. ಈ ಹಿನ್ನೆಲೆ ಪೊನ್ನಂಪೇಟೆ ತಹಶೀಲ್ದಾರರನ್ನು ತಕ್ಷಣ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ನ್ಯಾಯಾಲಯದಲ್ಲಿ ಕೆವಿಟ್ ಅರ್ಜಿ ಸಲ್ಲಿಸಿದರೂ ಕೂಡ ನ್ಯಾಯಾಲಯಕ್ಕೆ ಮನ್ನಣೆ ನೀಡದೇ ಶೆಡ್ ತೆರವು ಮಾಡಿರುವುದು ಸರಿಯಲ್ಲ ಎಂದರು.

ತಹಶೀಲ್ದಾರ್ ಅನಂತ ಶಂಕರ್ ಮಾತನಾಡಿ, ಪರ್ಯಾಯ ಜಾಗ ಗುರುತಿಸುವ ಸಂಬAಧ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸುವುದಾಗಿ ಹೇಳಿದರು.

ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಆದಿವಾಸಿಗಳು ಭಾಗವಹಿಸಿದ್ದರು. ಈ ಸಂದರ್ಭ ವೀರಾಜಪೇಟೆ ನಗರ ಪೋಲಿಸರು ಬಂದೋಬಸ್ತ್ ಒದಗಿಸಿದ್ದರು.