ಸಿದ್ದಾಪುರ, ಜು. ೪: ಕಾರ್ಯಾಚರಣೆ ವೇಳೆ ಕಾಡಾನೆಯೂ ಅರಣ್ಯ ಇಲಾಖೆ ಸಿಬ್ಬಂದಿ ತಂಡದವರ ಮೇಲೆ ದಾಳಿಗೆ ಪ್ರಯತ್ನಿಸಿದ ಘಟನೆ ಬೈರಂಬಾಡದಲ್ಲಿ ನಡೆದಿದೆ.

ಬೈರಂಬಾಡ, ಮೈತಾಡಿ ಭಾಗದ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಿದ್ದ ಕಾಡಾನೆಗಳನ್ನು ಕಾಡಿಗಟ್ಟುವ ಉದ್ದೇಶದಿಂದ ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಂ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಂಡ ಸಂದರ್ಭ ಗುಂಪಿನಲ್ಲಿದ್ದ ಆನೆಯೊಂದು ಕಾರ್ಯಾಚರಣೆ ತಂಡದ ಮೇಲೆ ಎರಡು ಬಾರಿ ದಾಳಿ ನಡೆಸಲು ಮುಂದಾಗಿದೆ. ಈ ವೇಳೆ ಸಿಬ್ಬಂದಿಗಳು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾಡಾನೆ ದಾಳಿಯನ್ನು ತಪ್ಪಿಸಿಕೊಳ್ಳಲು ಕಾರ್ಯಾಚರಣೆಯ ಸಿಬ್ಬಂದಿಗಳು ಕೆಸರಿನ ನಡುವೆ ಓಡುವ ಸಂದರ್ಭ ಸಿಬ್ಬಂದಿ ಹರೀಶ ಕೆಸರಿನಲ್ಲಿ ಬಿದ್ದು ಸಣ್ಣಪುಟ್ಟ ಗಾಯಗೊಂಡ ಘಟನೆಯೂ ನಡೆದಿದೆ.

ಈ ನಡುವೆಯೂ ೫ ಬಾರಿ ಆನೆಗಳನ್ನು ಓಡಿಸುವ ಪ್ರಯತ್ನ ನಡೆಸಿದರೂ ಅವುಗಳು ಬೇರ್ಪಟ್ಟು ತೋಟದಿಂದ ತೋಟಕ್ಕೆ ಸುತ್ತಾಡುತ್ತ ತಂಡವನ್ನು ಸುಸ್ತು ಮಾಡಿದವು. ಕಾಫಿ ತೋಟದೊಳಗೆ ಎರಡು ಮರಿಯಾನೆಗಳು ೪ ಆನೆಗಳು ಕಂಡುಬAದವು ಎಂದು ವಲಯ ಅರಣ್ಯ ಅಧಿಕಾರಿ ಶಿವರಾಂ ಮಾಹಿತಿ ನೀಡಿದರು. ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯ ಅಧಿಕಾರಿ ರಾಘವ ಸಂಜೀತ್ ಸೋಮಯ್ಯ ಹಾಗೂ ಆನೆ ಕಾರ್ಯಪಡೆ.ಆರ್.ಆರ್.ಟಿ. ತಂಡದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.