ಮಡಿಕೇರಿ, ಜು. ೩: ಕೊಡಗು ಜಿಲ್ಲೆಯಾದ್ಯಂತ ಮಳೆಯೊಂದಿಗೆ ಚಳಿಯ ವಾತಾವರಣ ಮುಂದುವರಿದಿದೆ. ನಿನ್ನೆಯಿಂದ ಮಳೆಯ ಬಿರುಸು ಎಲ್ಲೆಡೆ ಕಂಡುಬರುತ್ತಿದ್ದು, ಕಳೆದ ೨೪ ಗಂಟೆಗಳ ಅವಧಿಯಲ್ಲಿ ಸರಾಸರಿ ಎರಡು ಇಂಚು ಮಳೆಯಾಗಿದೆ.
ನಿನ್ನೆಯಿಂದ ವಾತಾವರಣ ದಲ್ಲಿ ಬದಲಾವಣೆ ಕಂಡು ಬಂದಿದ್ದು, ನೈಜ ಮುಂಗಾರಿನ ಸನ್ನಿವೇಶವನ್ನು ಜಿಲ್ಲೆಯ ಜನತೆ ಎದುರಿಸುತ್ತಿದ್ದಾರೆ. ಬುಧವಾರ ಸುರಿದ ಭಾರೀ ಮಳೆ ಹಾಗೂ ಮತ್ತೂ ಮಳೆ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆ ಗುರುವಾರದಂದು ಜಿಲ್ಲೆಯ ಶಾಲಾ - ಕಾಲೇಜು ಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿತ್ತು. ಗುರುವಾರ ಬೆಳಿಗ್ಗೆಯಿಂದ ಮಳೆಯ ತೀವ್ರತೆ ಒಂದಷ್ಟು ಕಡಿಮೆ ಕಂಡು ಬಂದಿತ್ತಾದರೂ, ಮೋಡ ಆವರಿಸಿದ ವಾತಾವರಣದೊಂದಿಗೆ ಹೆಚ್ಚಿನ ಚಳಿಯ ಸನ್ನಿವೇಶ ಜಿಲ್ಲೆ ಯಲ್ಲಿದೆ. ಶಾಂತಳ್ಳಿ ಹೋಬಳಿಯಲ್ಲಿ ೨೪ ಗಂಟೆಗಳಲ್ಲಿ ೫.೬೦ ಇಂಚು ಮಳೆ ದಾಖಲಾಗಿದೆ.
ಜಿಲ್ಲೆಯಲ್ಲಿ ಕಳೆದ ೨೪ ಗಂಟೆಗಳಲ್ಲಿ ಸರಾಸರಿ ೨ ಇಂಚು ಮಳೆಯಾಗಿದ್ದು, ಜನವರಿಯಿಂದ ಈ ತನಕ ಸರಾಸರಿ ೬೦ ಇಂಚು ಮಳೆ ಸುರಿದಂತಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ೩೫.೭೪ ಇಂಚು ಮಳೆಯಾಗಿದ್ದು, ಈ ಬಾರಿ ೨೫ ಇಂಚುಗಳಷ್ಟು ಅಧಿಕವಾಗಿದೆ. ಮಡಿಕೇರಿ ತಾಲೂಕಿನಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೨.೪೧ ಇಂಚು, ವೀರಾಜಪೇಟೆ ೨.೦೯, ಪೊನ್ನಂಪೇಟೆ ೧.೪೦, ಸೋಮವಾರಪೇಟೆ ೩.೧೮ ಹಾಗೂ ಕುಶಾಲನಗರ ತಾಲೂಕಿನಲ್ಲಿ ೦.೮೦ ಇಂಚು ಮಳೆಯಾಗಿದೆ.
ಮಡಿಕೇರಿ ತಾಲೂಕಿನಲ್ಲಿ ಪ್ರಸಕ್ತ ವರ್ಷ ಜನವರಿಯಿಂದ ಈತನಕ ೮೪.೫೬, ವೀರಾಜಪೇಟೆ ೫೯.೦೪, ಪೊನ್ನಂಪೇಟೆ ೫೭.೯೭, ಸೋಮವಾರಪೇಟೆ ೬೩.೯೦ ಹಾಗೂ ಕುಶಾಲನಗರ ತಾಲೂಕಿನಲ್ಲಿ ೩೧.೮೬ ಇಂಚು ಮಳೆಯಾಗಿದೆ. ಕಳೆದ ವರ್ಷ ಈ ಪ್ರಮಾಣ ಮಡಿಕೇರಿ ತಾಲೂಕಿ ನಲ್ಲಿ ೫೧.೧೪, ವೀರಾಜಪೇಟೆ ೩೭.೨೭, ಪೊನ್ನಂಪೇಟೆ ೩೫.೮೮, ಸೋಮವಾರಪೇಟೆ ೨೮.೪೯ ಹಾಗೂ ಕುಶಾಲನಗರ ತಾಲೂಕಿ ನಲ್ಲಿ ೨೫.೯೧ ಇಂಚುಗಳಷ್ಟಾಗಿತ್ತು. ಈ ವರ್ಷ ಜಿಲ್ಲೆಯಾದ್ಯಂತ ಈ ಅವಧಿಯಲ್ಲಿ ಮಳೆಯ ಪ್ರಮಾಣ ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ.
ಗ್ರಾಮೀಣ ಭಾಗಗಳಲ್ಲಿ ಭಾರೀ ಮಳೆ
ಪ್ರಸಕ್ತ ವರ್ಷ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಭಾರೀ ಮಳೆ ಸುರಿದಿದೆ. ತಲಕಾವೇರಿ, ಭಾಗಮಂಡಲ ವಿಭಾಗದಲ್ಲಿ ಈಗಾಗಲೇ ೧೨೦ ರಿಂದ ೧೫೦ ಇಂಚುಗಳಷ್ಟು ಮಳೆಯಾಗಿದೆ. ಸೂರ್ಲಬ್ಬಿ ವಿಭಾಗದಲ್ಲೂ ೧೫೦-೧೬೦ ಇಂಚು, ನಾಲಡಿ - ಕಕ್ಕಬ್ಬೆ ವಿಭಾಗದಲ್ಲಿ ೧೨೦ ಇಂಚು, ಬಿರುನಾಣಿ, ಶ್ರೀಮಂಗಲ, ಬಿ. ಶೆಟ್ಟಿಗೇರಿ ವಿಭಾಗಗಳಲ್ಲಿ ೧೦೦ ರಿಂದ ೧೧೦ ಇಂಚು, ಶಾಂತಳ್ಳಿ ವಿಭಾಗದಲ್ಲೂ ಸುಮಾರು ೧೦೦ ಇಂಚುಗಳಷ್ಟು ಮಳೆ ದಾಖಲಾಗಿದೆ. ಈಗಷ್ಟೇ ಜುಲೈ ತಿಂಗಳು ಆರಂಭಗೊAಡಿದ್ದು, ಇನ್ನೂ ಕೆಲವು ತಿಂಗಳ ಕಾಲ ಜಿಲ್ಲೆ ಮಳೆಗಾಲದ ಸಂಕಷ್ಟವನ್ನು ಎದುರಿಸಬೇಕಿದೆ.