ಮಡಿಕೇರಿ, ಜು. ೩: ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಬೃಹತ್ ಕೊಡುಗೆಯಾದ ‘ವಚನ’ಗಳನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಡಾ. ಫ.ಗು. ಹಳಕಟ್ಟಿ ಅವರ ದೂರದೃಷ್ಟಿ ಮತ್ತು ಮೌಲ್ಯಗಳು ಪ್ರತಿಯೊಬ್ಬರಿಗೂ ಮಾದರಿ ಎಂದು ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದ ಉಪನ್ಯಾಸಕ ಮಾರುತಿ ದಾಸಣ್ಣವರ್ ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ವತಿಯಿಂದ ನಗರದ ಗಾಂಧಿಭವನದಲ್ಲಿ ಡಾ. ಫ.ಗು. ಹಳಕಟ್ಟಿ ಅವರ ಜನ್ಮದಿನದ ಪ್ರಯುಕ್ತ ಬುಧವಾರ ನಡೆದ ವಚನ ಸಾಹಿತ್ಯ ಸಂರಕ್ಷಣೆ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಚನ ಸಂಶೋಧನೆ, ಸಂಗ್ರಹಣೆ, ಪರಿಷ್ಕರಣೆ, ಮುದ್ರಣ, ಪ್ರಕಾಶನ, ಪ್ರಚಾರ, ಪ್ರಸಾರ ಹಾಗೂ ಇಂಗ್ಲೀಷ್ ಭಾಷೆಗೆ ವಚನಗಳ ಅನುವಾದ ಇವುಗಳಲ್ಲಿ ತೊಡಗಿಸಿಕೊಂಡು ವಚನಗಳನ್ನು ಮುಂದಿನ ಪೀಳಿಗೆಗೆ ಕಟ್ಟಿಕೊಟ್ಟರು ಎಂದು ಅವರು ವಿವರಿಸಿದರು.

ವಚನ ಸಾಹಿತ್ಯ, ಅಂಕಣ ಬರಹಗಳು ಇಂತಹ ಅಮೂಲ್ಯ ಗ್ರಂಥಗಳನ್ನು ಸಂಗ್ರಹಿಸಿ ಪ್ರಕಟಿಸಿ, ನಾಡಿಗೆ ನೀಡಿದ ಡಾ. ಫ.ಗು. ಹಳಕಟ್ಟಿ ಅವರನ್ನು ಸದಾ ಸ್ಮರಿಸುವಂತಾಗಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ಅವರು ಮಾತನಾಡಿ, ೧೯೨೦ರ ಹೊತ್ತಿಗೆ ಒಂದು ಸಾವಿರ ವಚನಗಳ ಕಟ್ಟು ಸಂಗ್ರಹವಾಯಿತು. ಹೇಗಾದರೂ ಮಾಡಿ ಇದನ್ನು ಪ್ರಕಟಿಸಬೇಕೆಂದು ೫೦೦ ರೂ.ಗಳೊಂದಿಗೆ ಆ ಹಸ್ತಪ್ರತಿಯನ್ನು ಮಂಗಳೂರಿನ ಬಾಶೆಲ್ ಮಿಶನ್ ಮುದ್ರಣಕ್ಕೆ ಕಳಿಸಿದರು. ಅದುವರೆಗೆ ಕವಿ ಚರಿತೆಕಾರರು ಕೇವಲ ೫೦ ವಚನಕಾರರನ್ನು ಗುರುತಿಸಿದರು. ಫ.ಗು. ಹಳಕಟ್ಟಿಯವರು ೨೫೦ಕ್ಕೂ ಹೆಚ್ಚು ವಚನಕಾರರನ್ನು ಬೆಳಕಿಗೆ ತಂದರು. ಜೊತೆಗೆ ಹರಿಹರನ ರಗಳೆಗಳನ್ನು ಸಂಶೋಧಿಸಿ ಪ್ರಕಟಿಸಿದರು. ಹಳಕಟ್ಟಿಯವರು ೧೯೨೫ ರಲ್ಲಿ ಇರುವ ಮನೆ ಮಾರಿ ‘ಹಿತ ಚಿಂತಕ ಮುದ್ರಣಾಲಯ’ ಎಂಬ ಪ್ರಿಂಟಿAಗ್ ಪ್ರೆಸ್ ಸ್ಥಾಪಿಸಿದರು ಎಂದು ತಿಳಿಸಿದರು.

ಶಾಲಾ ಶಿಕ್ಷಣ ಇಲಾಖೆಯ ಡಿವೈಪಿಸಿ ಕೃಷ್ಣಪ್ಪ ಮಾತನಾಡಿ, ಕಾಯಕ, ದಾಸೋಹ ಮತ್ತು ಮಹಾಮನೆಗಳಂತಹ ಅಪೂರ್ವವಾದ ಪರಿಕಲ್ಪನೆಗಳನ್ನು ಮನುಷ್ಯನ ಜೀವನದಲ್ಲಿ ತಂದು ಬದುಕನ್ನೇ ಒಂದು ತಪಸ್ಸಾಗಿಸಿದವರು. ಇಂತಹ ಅಪೂರ್ವ ನಿಧಿಯನ್ನು ನಮಗೆ ಹುಡುಕಿ ಮೊಗೆ ಮೊಗೆದು ಕೊಟ್ಟವರೇ ನಮ್ಮ ಫ.ಗು. ಹಳಕಟ್ಟಿ ಎಂದು ನುಡಿದರು.

ನಗರಸಭೆ ಅಧ್ಯಕ್ಷೆ ಪಿ. ಕಲಾವತಿ ಮಾತನಾಡಿ, ವಚನ ಸಾಹಿತ್ಯವನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡುವಂತಾಗಬೇಕು. ವಚನ ಸಾಹಿತ್ಯದಿಂದ ನಾಡಿನ ಆಸ್ಮಿತೆ ತಿಳಿಯಲಿದೆ ಎಂದರು.

ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಫ.ಗು. ಹಳಕಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಸ್ವಾಗತಿಸಿದರು. ಬ್ಲಾಸಂ ಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.