ಗೋಣಿಕೊಪ್ಪಲು, ಜೂ. ೨೯: ಅನ್ನ ಬೆಳೆಯುವ ರೈತ ತನ್ನ ಭೂಮಿಯನ್ನು ಪಾಳುಬಿಡದಂತೆ ಎಚ್ಚರವಹಿಸಿ ವರ್ಷಂಪ್ರತಿ ಭತ್ತದ ಗದ್ದೆಗಳಲ್ಲಿ ಮುಂಗಾರು ಮಳೆ ಆರಂಭವಾಗುತ್ತಿದ್ದAತೆಯೇ ಭತ್ತದ ಕೃಷಿಗೆ ಮುಂದಾಗುತ್ತಾನೆ.
ಭತ್ತದ ಗದ್ದೆಗಳನ್ನು ಹದಗೊಳಿಸಿ, ಬೀಜ ಬಿತ್ತನೆಗೆ ತಯಾರಿ ನಡೆಸುತ್ತಾನೆ. ಬಿತ್ತನೆಗೆ ಬೇಕಾದ ಭತ್ತದ ಬೀಜಗಳನ್ನು ನೆನೆಸಿಟ್ಟು ಇನ್ನೇನು ಗದ್ದೆಗಳಲ್ಲಿ ಹಾಕಬೇಕು ಅನ್ನುವಷ್ಟರಲ್ಲಿ ಶೇಕರಿಸಿಡಲಾದ ಭತ್ತದ ಬೀಜಗಳನ್ನು ಕಾಡಾನೆಗಳ ಹಿಂಡು ತುಳಿದು ನಾಶ ಪಡಿಸಿವೆ.
ಇದರಿಂದ ಭತ್ತ ಬೆಳೆಯುವ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಗೋಣಿಕೊಪ್ಪ ಸಮೀಪದ ಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿರುವ ಕಳತ್ಮಾಡು ಗ್ರಾಮದ ಪ್ರಗತಿಪರ ರೈತರಾದ ಕೊಲ್ಲಿರ ಉಮೇಶ್ ಸಹೋದರರ ಭತ್ತದ ಗದ್ದೆಗಳಿಗೆ ಧಾಂಗುಡಿ ಇಟ್ಟ ಕಾಡಾನೆಗಳು ಅಲ್ಲಿದ್ದ ನಾಲ್ಕು ಕ್ವಿಂಟಾಲ್ ಭತ್ತದ ಬೀಜಗಳನ್ನು ತುಳಿದು ಹಾಳುಗೆಡವಿದೆ.
ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳ ರೈತರ,ಬೆಳೆಗಾರರ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು ಆಗಿಂದಾಗ್ಗೆ ರೈತರ ಭತ್ತದ ಗದ್ದೆಗಳಿಗೆ ನುಗ್ಗಿ ಅಲ್ಲಿರುವ ಫಸಲುಗಳನ್ನು ಹಾಳು ಮಾಡುತ್ತಿವೆ.
ಇದರಿಂದ ರೈತರು ತಮ್ಮ ಗದ್ದೆಗಳಲ್ಲಿ ಭತ್ತದ ಕ್ರಷಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ಈ ಭಾಗದಲ್ಲಿ ನೆಲೆಸಿರುವ ಕಾಡಾನೆಗಳ ಹಿಂಡನ್ನು ಅರಣ್ಯಕ್ಕೆ ಅಟ್ಟುವ ಕೆಲಸ ಕೂಡಲೇ ಮಾಡಬೇಕೆಂದು ಅರಣ್ಯ ಇಲಾಖೆಯನ್ನು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ. -(ಹೆಚ್.ಕೆ. ಜಗದೀಶ್)