ಚಿಕ್ಕಮಗಳೂರು, ಜೂ. ೨೯: ಇಲ್ಲಿನ ಕಡೂರು ತಾಲೂಕಿನ ಸಖರಾಯಪಟ್ಟಣ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೊಡಗು ಮೂಲದ ಫಾರೆಸ್ಟ್ ಗಾರ್ಡ್ ದಿಢೀರ್ ನಾಪತ್ತೆಯಾಗಿದ್ದಾರೆ. ನಾಪತ್ತೆ ಆಗಿರುವ ಗಾರ್ಡ್ ಅವರನ್ನು ಶರತ್ (೩೩) ಎಂದು ಗುರುತಿಸಲಾಗಿದೆ.

ಶರತ್ ಮಡಿಕೇರಿ ಮೂಲದವರಾಗಿದ್ದು ಇವರ ತಾಯಿ ರತಿ ಭೀಮಯ್ಯ ಮಗ ನಾಪತ್ತೆ ಆಗಿರುವ ಕುರಿತು ಸಖರಾಯಪಟ್ಟಣದಲ್ಲಿ ತಾ.೨೭ ರಂದು ರಾತ್ರಿ ದೂರು ದಾಖಲಿಸಿದ್ದಾರೆ. ಶರತ್ ಬೆಳಿಗ್ಗೆ ಕರ್ತವ್ಯಕ್ಕೆಂದು ಬೈಕ್‌ನಲ್ಲಿ ತೆರಳಿದ್ದು, ಸಂಜೆ ವಾಪಾಸ್ ಬಂದಿರುವುದಿಲ್ಲ ಎಂದಿದ್ದಾರೆ. ಆತನ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಪೋಷಕರು ಆತಂಕಗೊAಡಿದ್ದಾರೆ.

ಸಖರಾಯ ಪಟ್ಟಣದ ಅರಣ್ಯ ಇಲಾಖೆಯ ನೀಲಗಿರಿ ಪ್ಲಾಂಟೇಷನ್‌ನಲ್ಲಿ ಶರತ್‌ನ ಬೈಕ್ ಮತ್ತು ಜರ್ಕಿನ್ ಪತ್ತೆ ಆಗಿದೆ. ಶರತ್ ಪತ್ತೆಗೆ ಪೊಲೀಸರು ಮತ್ತು ಅರಣ್ಯ ಸಿಬ್ಬಂದಿ ಸಮೀಪದ ಅರಣ್ಯದಲ್ಲಿ ಶುಕ್ರವಾರ ಸಂಜೆಯಿAದಲೇ ಹುಡುಕಾಟ ನಡೆಸುತ್ತಿದ್ದಾರೆ. ಸಖರಾಯಪಟ್ಟಣದ ಅರಣ್ಯ ಪ್ರದೇಶ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲೂ ಹುಡುಕಾಟ ನಡೆಸಲಾಗುತ್ತಿದೆ.

ಈ ಕುರಿತು ಮಾಹಿತಿ ನೀಡಿದ ಸಖರಾಯಪಟ್ಟಣದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಬಿ. ಪವನ್ ಅವರು ಫಾರೆಸ್ಟ್ ಗಾರ್ಡ್ ನಾಪತ್ತೆ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು ನಿರಂತರ ಹುಡುಕಾಟ ನಡೆಸಲಾಗುತ್ತಿದೆ. ಶರತ್ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಆತ ಅರಣ್ಯದಲ್ಲಿ ಇರಬಹುದೇ ಅಥವಾ ಬೇರೆಡೆ ತೆರಳಿರಬಹುದೇ ಎಂದು ಹೇಳಲೂ ಸಾದ್ಯವಾಗುತ್ತಿಲ್ಲ, ಶುಕ್ರವಾರ ಬೆಳಿಗ್ಗೆಯಿಂದಲೇ ಶರತ್ ಕರ್ತವ್ಯ ಇರುವ ಬೀಟ್ ಪ್ರದೇಶದ ಗ್ರಾಮಸ್ಥರ ಕಣ್ಣಿಗೂ ಕಾಣಿಸಿಕೊಂಡಿಲ್ಲ. ಶರತ್ ಪತ್ತೆಗೆ ಹಗಲು ರಾತ್ರಿ ಹುಡುಕಾಟ ನಡೆಸಲಾಗುತ್ತಿದ್ದು, ಶೀಘ್ರವೇ ಪತ್ತೆ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

-ಕೋವರ್‌ಕೊಲ್ಲಿ ಇಂದ್ರೇಶ್