ಸೋಮವಾರಪೇಟೆ, ಜೂ. ೨೭ : ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ನೈಸರ್ಗಿಕ ಜಲಪಾತಗಳು ಮೈದುಂಬಿಕೊAಡಿವೆ.
ಪುಷ್ಪಗಿರಿ ಶ್ರೇಣಿಯಲ್ಲಿನ ಭಾರೀ ಮಳೆಯಿಂದಾಗಿ ಕುಮಾರಧಾರ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದು, ಪ್ರವಾಸಿಗರ ನೆಚ್ಚಿನ ತಾಣ ಮಲ್ಲಳ್ಳಿ ಜಲಪಾತ ಭೋರ್ಗರೆಯುತ್ತಾ ಧುಮ್ಮಿಕ್ಕುತ್ತಿದೆ. ಇದರೊಂದಿಗೆ ಸೋಮವಾರಪೇಟೆ ಗ್ರಾಮೀಣ ಪ್ರದೇಶದಲ್ಲಿರುವ ಸಣ್ಣಪುಟ್ಟ ಜಲಪಾತಗಳು ಮೈದುಂಬಿದ್ದು, ದಾರಿಹೋಕರನ್ನು ತಮ್ಮತ್ತ ಆಕರ್ಷಿಸುತ್ತಿವೆ.
ಶಾಂತಳ್ಳಿ ಹೋಬಳಿಯಾದ್ಯಂತ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಮಲ್ಲಳ್ಳಿ ಹಾಗೂ ಅಭಿಮಠ ಬಾಚಳ್ಳಿ ಜಲಪಾತಗಳು ಕಣ್ಮನ ತಣಿಸುವ ಸೌಂದರ್ಯದೊAದಿಗೆ ಧುಮ್ಮಿಕ್ಕುತ್ತಿವೆ.
ಗರ್ವಾಲೆ, ಸೂರ್ಲಬ್ಬಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಗರ್ವಾಲೆ ಭಾರತೀಯ ವಿದ್ಯಾಭವನದ ಎದುರಿನ ಅಜ್ಞಾತವಾಗಿರುವ ಜ್ಞಾನಗಂಗಾ ಜಲಪಾತ ಮೈದುಂಬಿದೆ. ಇದರೊಂದಿಗೆ ಪ್ರಕೃತಿ ನಿರ್ಮಿತವಾಗಿರುವ ಮಾದಾಪುರ-ಸೂರ್ಲಬ್ಬಿ
(ಮೊದಲ ಪುಟದಿಂದ) ರಸ್ತೆಯಲ್ಲಿರುವ ಮೇದುರ ಜಲಪಾತ, ಹಂಚಿನಳ್ಳಿ-ಮಲ್ಲಳ್ಳಿ ರಸ್ತೆಯಲ್ಲಿ ಉದ್ಭವಿಸಿರುವ ಜಲಪಾತ, ಶಿರಂಗಳ್ಳಿ-ಗರ್ವಾಲೆ ರಸ್ತೆ ಮಧ್ಯೆ ಇರುವ ಜಲಪಾತಗಳು ಹಾಲ್ನೊರೆ ಸೂಸುತ್ತಾ ಕಂಗೊಳಿಸುತ್ತಿವೆ.
ಐಗೂರು ಗ್ರಾಮದಲ್ಲಿ ಹರಿಯುವ ಚೋರನ ಹೊಳೆಯಲ್ಲಿ ನೀರಿನ ಪ್ರಮಾಣ ಅಧಿಕವಿದ್ದು, ದೇವಾಲಯದ ಸಮೀಪದ ಬಂಡೆಕಲ್ಲುಗಳಿAದ ಧುಮ್ಮಿಕ್ಕುವ ಚೋರನ ಜಲಪಾತ ದಾರಿಹೋಕರನ್ನೂ ಸೇರಿದಂತೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ನಿಸರ್ಗ ರಮಣೀಯ ಸೌಂದರ್ಯದ ನಡುವೆ ಹಾಲ್ನೊರೆ ಸೂಸುತ್ತಾ ಧುಮ್ಮಿಕ್ಕುವ ಜಲಪಾತಗಳು ಪ್ರಕೃತಿ ಪ್ರಿಯರನ್ನು ತಮ್ಮತ್ತ ಸೆಳೆಯುತ್ತಿದ್ದು, ವಾರಾಂತ್ಯದ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗರು ಜಲಪಾತದ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. -ವಿಜಯ್ ಹಾನಗಲ್