ಕೋವರ್ ಕೊಲ್ಲಿ ಇಂದ್ರೇಶ್

ಮಡಿಕೇರಿ, ಜೂ. ೨೭: ಇತ್ತೀಚೆಗೆ ಕಾಂಗ್ರೆಸ್‌ನ ಅಳಂದ ಶಾಸಕ ಬಿ.ಆರ್. ಪಾಟೀಲ್ ಅವರು ವಸತಿ ಯೋಜನೆಯ ಫಲಾನುಭವಿಗಳನ್ನು ಆಯ್ಕೆ ಮಾಡಲು ಹಣ ನೀಡಬೇಕಾಗಿದೆ ಎಂಬ ಗಂಭೀರ ಆರೋಪವನ್ನು ಮಾಡಿದ್ದರು. ಈ ಆರೋಪದ ಬೆನ್ನಲ್ಲೇ ವಿಪಕ್ಷಗಳು ಆಳುವ ಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು ರಾಜ್ಯ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ರಾಜೀನಾಮೆಗೂ ಒತ್ತಾಯಿಸಿದ್ದವು.

ಈ ನಡುವೆಯೇ ಆರ್‌ಟಿಐ ಮಾಹಿತಿಯೊಂದು ರಾಜ್ಯದಲ್ಲಿ ಪ್ರಧಾನ ಮಂತ್ರಿ ಆವಾಜ್ ಯೋಜನೆಯಲ್ಲಿ ಕೇವಲ ಶೇ. ೨೬ ರಷ್ಟು ಗುರಿ ಸಾಧಿಸಿರುವುದು ಬಯಲಿಗೆ ಬಂದಿದೆ. ರಾಜ್ಯದ ೩೧ ಜಿಲ್ಲೆಗಳಲ್ಲಿಯೂ ಈ ಯೋಜನೆಯನ್ನು ಜಾರಿಗೆ ತರುವಲ್ಲಿ ಭಾರೀ ಹಿನ್ನಡೆ ಆಗಿದ್ದು ಸಂಬAಧಪಟ್ಟ ಅಧಿಕಾರಿಗಳ ನಿರ್ಲಕ್ಷö್ಯತೆಗೆ ಹಿಡಿದ ಕೈಗನ್ನಡಿ ಆಗಿದೆ. ಕಳೆದ ಮೇ ತಿಂಗಳ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ಮೂರು ದಿನ ಎಲ್ಲಾ ಜಿಲ್ಲಾಧಿಕಾರಿಗಳ ಮತ್ತು ಜಿ.ಪಂ. ಕಾರ್ಯ ನಿರ್ವಾಹಕ ಅಧಿಕಾರಿಗಳ ಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆದಿದ್ದರು. ಆ ಸಭೆಗೆ ಅಧಿಕಾರಿಗಳು ತಮ್ಮ ಜಿಲ್ಲೆಯಲ್ಲಿ ಆಗಿರುವ ಪ್ರಗತಿಯ ಪಟ್ಟಿಯನ್ನು ನೀಡಿದ್ದರು. ಆ ಪಟ್ಟಿಯ ಪ್ರಕಾರ ರಾಜ್ಯದಲ್ಲಿ ವಿಜಯಪುರ ಜಿಲ್ಲೆ ಶೇ. ೫೮ ರಷ್ಟು ಪ್ರಗತಿ ಸಾಧಿಸಿದೆ. ವಿಜಯಪುರ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿರುವ ಜಮೀರ್ ಅಹ್ಮದ್ ಖಾನ್ ಅವರ ತವರು ಕ್ಷೇತ್ರವಿರುವ ಬೆಂಗಳೂರು ನಗರ ಜಿಲ್ಲೆಯಲ್ಲಿ ಪ್ರಗತಿ ಶೇ. ೦ ಆಗಿದೆ. ಇದರ ಜೊತೆಗೆ ಉಡುಪಿ ಜಿಲ್ಲೆಯಲ್ಲೂ ಪ್ರಗತಿ ಶೂನ್ಯ ಆಗಿದೆ.

ರಾಜ್ಯ ಸರ್ಕಾರ ಕೊಡಗು ಜಿಲ್ಲೆಗೆ ೮,೮೬೨ ಮನೆಗಳನ್ನು ಫಲಾನುಭವಿಗಳಿಗೆ ನೀಡುವ ಗುರಿಯನ್ನು ನಿಗದಿಪಡಿಸಿತ್ತು. ಆದರೆ ಈ ಪೈಕಿ ೭೩ ಮಂದಿ ಫಲಾನುಭವಿಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಇನ್ನೂ ೮,೭೮೯ ಮಂದಿ ಪಲಾನುಭವಿಗಳನ್ನು ಆಯ್ಕೆ ಮಾಡಲು ಬಾಕಿ ಇದ್ದು, ಶೇ. ೧ರಷ್ಟು ಮಾತ್ರ ಪ್ರಗತಿ ಆಗಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ರಾಜ್ಯದ ೩೧ ಜಿಲ್ಲೆಗಳಲ್ಲೂ ಫಲಾನುಭವಿಗಳನ್ನು ಆಯ್ಕೆ ಮಾಡಲು ವಸತಿ ಇಲಾಖೆಯು, ಪ್ರತಿ ಜಿಲ್ಲೆಗೂ ಗುರಿ ನಿಗದಿಪಡಿಸಿತ್ತು.

(ಮೊದಲ ಪುಟದಿಂದ) ಇದರ ಪ್ರಕಾರ ರಾಜ್ಯದ ೩೧ ಜಿಲ್ಲೆಗಳಿಗೆ ೭,೦೨,೭೩೧ ಗುರಿ ನಿಗದಿಪಡಿಸಿತ್ತು. ಈ ಪೈಕಿ ವಸತಿ ಇಲಾಖೆಯು ಈ ಯೋಜನೆಗೆ ಆಯ್ಕೆ ಮಾಡಿದ್ದು ೧,೮೦,೫೭೧ ಮಾತ್ರ. ಈ ಯೋಜನೆಗೆ ಇನ್ನೂ ೫,೨೨,೧೬೦ ಫಲಾನುಭವಿಗಳನ್ನು ಆಯ್ಕೆ ಮಾಡಲು ಬಾಕಿ ಇರಿಸಿಕೊಂಡಿರುವುದು ದಾಖಲೆಗಳಿಂದ ತಿಳಿದುಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನ ಅವರು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಜಾಗ, ಸೈಟು ಹೊಂದಿರುವ ಫಲಾನುಭವಿಗಳಿಗೆ ಮಾತ್ರ ಮನೆ ನಿರ್ಮಿಸಿಕೊಡಲು ಅವಕಾಶ ಇದ್ದು ಸೈಟು ಹೊಂದಿರುವ ಫಲಾನುಭವಿಗಳ ಸಂಖ್ಯೆ ಅತ್ಯಂತ ಕನಿಷ್ಟ ಮಟ್ಟದಲ್ಲಿರುವುದೇ ಹಿನ್ನಡೆಗೆ ಕಾರಣ ಎಂದು ಹೇಳಿದರು. ಈಗಾಗಲೇ ಅಮ್ಮತ್ತಿ ಹಾಗೂ ವೀರಾಜಪೇಟೆಯಲ್ಲಿ ಕಂದಾಯ ಇಲಾಖೆ ಫಲಾನುಭವಿಗಳಿಗೆ ಜಾಗವನ್ನು ಗುರುತಿಸಿದ್ದು ಅದು ವಿತರಣೆ ಆದ ಕೂಡಲೇ ಯೋಜನೆ ಚುರುಕುಗೊಳ್ಳಲಿದೆ ಎಂದು ಹೇಳಿದರು.

ಸರ್ಕಾರವು ನಿಗದಿಪಡಿಸಿರುವ ಗುರಿ ತೀರಾ ಹೆಚ್ಚಿದ್ದು ಇದರಲ್ಲಿ ಹೊರ ರಾಜ್ಯ, ಜಿಲ್ಲೆಗಳಿಂದ ಬರುವ ತಾತ್ಕಾಲಿಕ ವಲಸೆ ಕಾರ್ಮಿಕರನ್ನೂ ಸೇರಿಸಿಕೊಂಡು ವಸತಿ ರಹಿತರನ್ನು ಗುರುತಿಸಲಾಗಿದೆ. ಇದನ್ನೂ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಗಮನಕ್ಕೆ ತಂದಿದ್ದು ಶೀಘ್ರದಲ್ಲಿ ಸರ್ಕಾರದ ಮಟ್ಟದಲ್ಲಿಯೇ ವಸತಿ ರಹಿತರ ಪಟ್ಟಿಯನ್ನು ಪರಿಷ್ಕರಣೆ ಮಾಡಿ ನೈಜ ಫಲಾನುಭವಿಗಳನ್ನು ಗುರುತಿಸಿ ನಂತರ ಗುರಿ ನಿಗದಿಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.