ಮಡಿಕೇರಿ, ಜೂ. ೨೫: ಮುಳಿಯ ಪ್ರತಿಷ್ಠಾನದ ವತಿಯಿಂದ ಮಡಿಕೇರಿಯ ಮುಳಿಯ ಜ್ಯುವೆಲರಿಯಲ್ಲಿ ಅಪ್ಪಂದಿರ ದಿನದ ವಿಶೇಷವಾಗಿ ಎರಡನೇ ವರ್ಷದ ಚಿನ್ನದಂತ ನನ್ನ ಅಪ್ಪ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುಮಾರು ಮೂವತ್ತು ಜನ ಅಪ್ಪಂದಿರು ತಮ್ಮ ಮಕ್ಕಳೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನೆಲ್ಲಿಹುದಿಕೇರಿಯ ಸ್ವರ್ಣ ಕ್ಲಿನಿಕ್‌ನ ಡಾ. ಉದಯಕುಮಾರ್ ಅವರು ಈ ಕಾರ್ಯಕ್ರಮವು ಅಪ್ಪಂದಿರಿಗೆ ಒಂದು ರೀತಿಯಲ್ಲಿ ಶ್ರೇಷ್ಠತೆಯನ್ನು ತಂದುಕೊಡುತ್ತದೆ, ಜೀವನದಲ್ಲಿ ಮಕ್ಕಳಿಗೆ ಅಪ್ಪನ ತ್ಯಾಗ ಹೆಚ್ಚಿದ್ದರೂ ಕೂಡ ಅವರು ಎಲ್ಲಿಯೂ ಅದನ್ನು ತೋರಿಸಿಕೊಳ್ಳದೆ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ, ಈ ರೀತಿಯ ಕಾರ್ಯಕ್ರಮಗಳು ಅಪ್ಪಂದಿರ ಗೌರವದ ಜೊತೆಗೆ ಕರ್ತವ್ಯವನ್ನು ಹೆಚ್ಚಿಸುತ್ತದೆ ಎಂದರು. ಮಕ್ಕಳಿಗೆ ಮತ್ತು ಅಪ್ಪಂದಿರಿಗೆ ವಿವಿಧ ರೀತಿಯ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಬಾಳೆಯಡ ದಿವ್ಯಾ ಮಂದಪ್ಪ ಕಾರ್ಯಕ್ರಮ ನಿರೂಪಿಸಿದರು, ಮಡಿಕೇರಿ ಮುಳಿಯ ಶಾಖೆಯ ಸಹಾಯಕ ಪ್ರಬಂಧಕ ಚಂದ್ರಶೇಖರ್ ಹಾಜರಿದ್ದರು.