(ಇಸ್ರೇಲ್‌ನಲ್ಲಿರುವ ಮಡಿಕೇರಿ ಮೂಲದ ತಂಗಮಣಿಯಿAದ ಯುದ್ಧದ ದಿನಗಳ ಮಾಹಿತಿ - ಕದನ ವಿರಾಮ ಅಲ್ಪ ವಿರಾಮವಷ್ಟೇ?!)

ಸಂದರ್ಶನ : ಅನಿಲ್ ಎಚ್.ಟಿ.

ಮಡಿಕೇರಿ, ಜೂ. ೨೪: ಹಕ್ಕಿಗಳಂತೆ ಆಕಾಶದಲ್ಲಿ ಕ್ಷಿಪಣಿಗಳು ಹಾರಿ ಬರುತ್ತಿರುತ್ತವೆ.. ಮನೆ ಪಕ್ಕದಲ್ಲಿಯೇ ಬಾಂಬ್ ಬೀಳುತ್ತಿವೆ. ರಾಕೆಟ್‌ಗಳ ಶಬ್ದ,.. ಜನರ ಬೊಬ್ಬೆ.. ಇವೆಲ್ಲಾ ಎರಡು ವಾರಗಳಿಂದ ಮಾಮೂಲಿನಂತಾಗಿದೆ. ಹೊರಜಗತ್ತಿಗೆ ಇಲ್ಲಿ ಯುದ್ಧ ನಡೆಯುತ್ತಿದೆ ಎಂಬ ಆತಂಕವಿದೆ. ಸ್ಥಳೀಯರಿಗೆ ಕ್ಷಿಪಣಿಗಳು, ಬಾಂಬ್‌ಗಳ ಶಬ್ದ ಕೇಳದೇ ಇದ್ದರೆ ನಿದ್ದೆಯೇ ಬಾರದ ಪರಿಸ್ಥಿತಿ ಇಲ್ಲಿದೆ.

ಹೀಗೆಂದು ಯುದ್ಧಪೀಡಿತ ಇಸ್ರೇಲ್‌ನಿಂದ ಹೇಳಿದವರು ಮೂಲತಃ ಮಡಿಕೇರಿಯ ಭಗವತಿ ನಗರದವರಾದ ತಂಗಮಣಿ. ೧೦ ವರ್ಷಗಳಿಂದ ಇಸ್ರೇಲ್‌ನಲ್ಲಿ ‘ಕೇರ್ ಗಿವರ್’ ಅಥವಾ ಹಿರಿಯ ನಾಗರಿಕರ ಶುಶ್ರೂಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ತಂಗಮಣಿ ಇದಕ್ಕೂ ಮೊದಲು ಮಡಿಕೇರಿಯ ಅಶ್ವಿನಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸಿದ್ದರು.

ಸದ್ಯ ಇಸ್ರೇಲ್ ಮತ್ತು ಇರಾನ್ ನಡುವೆ ಕದನ ವಿರಾಮ ಆಗಿದೆ. ಎರಡು ದೇಶಗಳ ಯುದ್ಧವನ್ನು ಮಹಾಸಮರ ಎಂದು ವಿವಿಧ ದೇಶಗಳ ಮಾಧ್ಯಮಗಳು ಆತಂಕದಿAದ ಬಣ್ಣಿಸಿದ್ದವು. ಆದರೆ ಕದನ ವಿರಾಮವನ್ನು ಬಹುತೇಕರು ನಂಬುವ ಪರಿಸ್ಥಿತಿಯಲ್ಲಿಲ್ಲ. ತಂಗಮಣಿ ಹೇಳುವಂತೆ ಇಸ್ರೇಲ್‌ನಲ್ಲಿ ಇಂಥಹ ಕದನ ವಿರಾಮ ಪರಿಸ್ಥಿತಿಯನ್ನು ಯಾರೂ ನಂಬುವುದಿಲ್ಲ. ಯಾವಾಗ ಬೇಕಾದರೂ ಯಾವ ದಿಕ್ಕಿನಿಂದ ಬೇಕಾದರೂ ಬಾಂಬ್ ದಾಳಿ ಖಂಡಿತಾ ಸಾಧ್ಯವಿದೆ. ಕದನ ವಿರಾಮ ಎಂಬುದು ತಾತ್ಕಾಲಿಕ ವಿರಾಮವಷ್ಟೇ ಹೊರತು ಪ್ರಕ್ಷುಬ್ದತೆಯ ಅಂತ್ಯವಲ್ಲ ಎಂದು ಇಸ್ರೇಲ್ ನಾಗರಿಕರ ಮನದ ಭಾವನೆಯನ್ನು ತಂಗಮಣಿ ವ್ಯಕ್ತಪಡಿಸಿದರು.

ಇಸ್ರೇಲ್‌ನ ಪ್ರಮುಖ ನಗರಗಳಲ್ಲೊಂದಾದ ಟೆಲ್‌ಅವಿವ್‌ನಿಂದ ಅರ್ಧ ಗಂಟೆ ಸಾಗಿದರೆ ಸಿಗುವ ರಮತ್‌ಗನ್ ಎಂಬ ನಗರದಲ್ಲಿ ತಂಗಮಣಿ ಇದ್ದಾರೆ. ಹೀಗಾಗಿ ಹಗಲು-ರಾತ್ರಿ ಕ್ಷಿಪಣಿ ದಾಳಿಯನ್ನು ತಂಗಮಣಿ ಆತಂಕದಿAದಲೇ ನೋಡಿದ್ದಾರೆ. ರಮತ್‌ಗನ್‌ಗೆ ಇಸ್ರೇಲ್‌ನ ಸ್ಯಾಟಲೈಟ್ ನಗರ ಎಂಬ ಕೀರ್ತಿಯೂ ಇದೆ.

ಜೀವಭಯ ಕಾಡುತ್ತಿದೆಯೇ ಎಂಬ ಪ್ರಶ್ನೆಗೆ ತಂಗಮಣಿ ನಿರ್ಭಯತೆಯಿಂದ ಹೇಳಿದ್ದು ಹೀಗೆ,

- ಅಯ್ಯೋ . ಖಂಡಿತಾ ಇಲ್ಲ. ಎಲ್ಲರ ಮೊಬೈಲ್‌ನಲ್ಲಿರುವ ಸರ್ಕಾರದ ಆ್ಯಪ್‌ನಲ್ಲಿ ಶತ್ರು ದೇಶದಿಂದ ಕ್ಷಿಪಣಿ, ರಾಕೆಟ್ ಧಾಳಿಗೆ ೧೦ ನಿಮಿಷ ಮುನ್ನ ಎಚ್ಚರಿಕೆಯ ಅಲರ್ಟ್ ಸಂದೇಶ ಬರುತ್ತದೆ. ಈ ಸಂದೇಶ ಬಂದ ಕೂಡಲೇ ಎಲ್ಲಿಯೇ ಇದ್ದರೂ, ಯಾವುದೇ ಕೆಲಸ ಮಾಡುತ್ತಿದ್ದರೂ ಎಲ್ಲರೂ ಪ್ರೊಟೆಕ್ಷನ್ ಸೆಂಟರ್ ಅಥವಾ ಬಂಕರ್‌ಗಳಿಗೆ ಓಡಿಹೋಗಿ ಆಶ್ರಯ ಪಡೆಯಬೇಕು. ಈ ಬಂಕರ್‌ಗಳು ಹೇಗಿರುತ್ತವೆ ಎಂದರೆ, ಅಲ್ಲಿ ಹತ್ತಾರು ಜನರು ಹಾಯಾಗಿ ಗಂಟೆಗಟ್ಟಲೆ ಇರಬಹುದು. ಬಂಕರ್‌ಗಳಲ್ಲಿ ಕಾಫಿ, ಟೀ, ಬಿಸಿನೀರಿನ ಲಭ್ಯತೆ ಇರುತ್ತದೆ. ಹಿರಿಯ ನಾಗರಿಕರಿಗೆ, ರೋಗಿಗಳಿಗೆ ಹಾಸಿಗೆ ಕೂಡ ಮಲಗಲು ಸಿಗುತ್ತದೆ. ಶತ್ರು ದೇಶದ ದಾಳಿ ಮುಕ್ತಾಯವಾಯಿತು. ಈಗ ಪರಿಸ್ಥಿತಿ ಸುರಕ್ಷಿತ ಎಂಬ ಸಂದೇಶ ಲಭಿಸಿದ ನಂತರ ನಾವೆಲ್ಲಾ ಮತ್ತೆ ಮನೆ, ಕಚೇರಿಗಳಿಗೆ ತೆರಳಬಹುದು.

ವಿಪರ್ಯಾಸ ನೋಡಿ... ಈಗ ಇಸ್ರೇಲ್‌ನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಮನೆಗಳಿಗೆ ನೀರು, ಪುಪ್ಪವನದ ಸೌಲಭ್ಯ ಇಲ್ಲದೇ ಹೋದರೂ ಪ್ರತಿಯೊಂದು ಹೊಸ ಮನೆಯಲ್ಲಿಯೂ ಕಡ್ಡಾಯವಾಗಿ ಬಂಕರ್‌ಗಳು ಇರಲೇಬೇಕು ಎಂಬ ನಿಯಮವನ್ನು ಸರ್ಕಾರ ಮಾಡಿದೆ. ಅಂದರೆ, ಯುದ್ಧ ಸಾಧ್ಯತೆ ಸದಾ ಇರುತ್ತದೆ.

ನಾಗರಿಕರು ಸಮರ ಸಂದರ್ಭ ಸದಾ ಸಜ್ಜಾಗಿರಿ, ಸುರಕ್ಷಿತರಾಗಿರಿ ಎಂಬ ಸಂದೇಶವನ್ನು ಇದು ನೀಡಿದೆ ಎನ್ನುತ್ತಾರೆ ತಂಗಮಣಿ.

ಬಾAಬ್ ಅಥವಾ ಕ್ಷಿಪಣಿ ದಾಳಿಗೆ ಮುನ್ನ ಇಸ್ರೇಲ್‌ನಾದ್ಯಂತ ಕಳೆದ ೧೫ ದಿನಗಳಿಂದ ಸೈರನ್ ಸಂದೇಶ ಮೊಳಗುತ್ತಲೇ ಇದೆ. ಸೈರನ್ ಶಬ್ದ ಹೇಗಾಗಿದೆ ಎಂದರೆ ಮೊದಲೆಲ್ಲಾ ಸೈರನ್ ಕೇಳಿದಾಗ ಮನಸ್ಸಿಗೆ ಏನೋ ಆತಂಕವಾಗುತ್ತಿತ್ತು. ಆದರೆ ಸೈರನ್ ಈಗ ಕಿವಿಗೂ, ಮನಸ್ಸಿಗೂ ಅಭ್ಯಾಸವಾಗಿಬಿಟ್ಟಿದೆ. ಸೈರನ್ ಕೇಳದೇ ಹೋದರೆ ಈಗ ಏನಾಯಿತು ಎಂದು ಪ್ರಶ್ನಿಸುವಂತಾಗಿದೆ ಎಂದು ತಂಗಮಣಿ ಹಾಸ್ಯಚಟಾಕಿ ಹಾರಿಸುತ್ತಾರೆ. ಇಸ್ರೇಲ್‌ನಲ್ಲಿ ಮಕ್ಕಳು ಮಾಮೂಲಿನಂತೆ ಮೈದಾನಗಳಲ್ಲಿ ಆಟವಾಡುತ್ತಲೇ ಇದ್ದಾರೆ. ಆದರೆ ಸೈರನ್ ಕೇಳಿದೊಡನೇ ಮಕ್ಕಳು ಕೂಡ ಹತ್ತಿರದಲ್ಲಿ ಬಂಕರ್ ಇರುವ ಸ್ಥಳಕ್ಕೆ ದೌಡಾಯಿಸುತ್ತಾರಂತೆ. ಹಲವೆಡೆ ಸಾಮೂಹಿಕವಾಗಿ ನೂರಾರು ಜನರಿಗೆ ಆಶ್ರಯ ನೀಡಬಲ್ಲಂಥಹ ಬಂಕರ್‌ಗಳನ್ನು ಇಸ್ರೇಲ್ ಸರ್ಕಾರ ನಿರ್ಮಿಸಿದೆ. ಎಷ್ಟು ಹೊತ್ತು ಬೇಕಾದರೂ ಈ ಬಂಕರ್‌ಗಳಲ್ಲಿ ಇರಬಹುದು.

ತಂಗಮಣಿ ಇರುವ ಮನೆಯಿಂದ ೨೦೦ ಮೀಟರ್ ದೂರದಲ್ಲಿಯೇ ಕಳೆದ ವಾರ ಬಾಂಬ್ ಬಿದ್ದಿತ್ತು. ನಮ್ಮ ಕಥೆ ಮುಗಿಯಿತು ಎಂದೇ ಭಾವಿಸಿದ್ದೆ. ಆದರೆ ಪುಣ್ಯ ಯಾರದ್ದೇ ಜೀವಹಾನಿ ಆಗಲಿಲ್ಲ ಎಂದು ಹೇಳಿದ ತಂಗಮಣಿ, ಮನೆ ಮುಂದೆ ಬಟನ್ ಒತ್ತಿದರೆ ಮುಚ್ಚಿಕೊಳ್ಳುವ ಶಟರ್‌ಗಳಿವೆ. ಸೈರನ್‌ಮೊಳಗಿದೊಡನೆ ಶಟರ್ ಬಂದ್ ಮಾಡಿದರೆ ಇಡೀ ಮನೆಯೇ ಶಟರ್‌ನಿಂದ ಆವರಿಸಿಕೊಳ್ಳುತ್ತದೆ. ಹೀಗಾಗಿ ಬಾಂಬ್ ಸ್ಫೋಟಗೊಂಡರೂ ಕಬ್ಬಿಣದ ಶಟರ್‌ಗಳಿಂದ ಮುಚ್ಚಿರುವ ಮನೆ, ಕಚೇರಿ, ಅಂಗಡಿಗಳು ಸುರಕ್ಷಿತವಾಗಿರುತ್ತವೆ ಎಂದು ತಂಗಮಣಿ ವಿವರಿಸಿದರು.

ಬಂಕರ್‌ಗಳನ್ನೂ ಇಂಥಹ ಪ್ರಬಲವಾದ ಕಬ್ಬಿಣದ ಲೋಹ ಬಳಸಿ ನಿರ್ಮಿಸಿರುವುದರಿಂದ ಶೇ.೯೯ ರಷ್ಟು ಸುರಕ್ಷಿತವಾಗಿ ಬಂಕರ್‌ಗಳಿರುತ್ತವೆ ಎಂದೂ ಅವರು ವಿವರಿಸಿದರು.

ಇಸ್ರೇಲ್‌ನಲ್ಲಿ ಸರ್ಕಾರ ಜಾರಿ ಮಾಡಿರುವ ನಿಯಮದಂತೆ ೧೮ ವರ್ಷ ತುಂಬಿದ ಕೂಡಲೇ ಪ್ರತೀಯೋರ್ವ ಯುವಕ, ಯುವತಿ ಕಡ್ಡಾಯವಾಗಿ ೩ ವರ್ಷ ಆ ದೇಶದ ಸೇನೆಯಲ್ಲಿ ಕಾರ್ಯನಿರ್ವಹಿಸಬೇಕು. ಇಸ್ರೇಲ್ ಸೇನೆಯ ಕಠಿಣ ತರಬೇತಿ ಪಡೆಯಲೇಬೇಕು. ಹೀಗಾಗಿ ಪ್ರತಿಯೋರ್ವ ನಾಗರಿಕರೂ ಇಲ್ಲಿ ಸೈನಿಕನಂತೆ ಇರುತ್ತಾನೆ.

ತಂದೆ, ತಾಯಿಯಿಂದ ೧೮ ವರ್ಷವಾದ ಕೂಡಲೇ ಬಹುತೇಕ ದೂರವಾಗುತ್ತಾರೆ.. ಸೇನಾ ಕರ್ತವ್ಯದಲ್ಲಿ ತೊಡಗಿಕೊಂಡೇ ಉನ್ನತ ಶಿಕ್ಷಣ ಪಡೆದುಬೇಕಾದ ಉದ್ಯೋಗ ಗಿಟ್ಟಿಸಿಕೊಂಡು ವಿವಾಹವಾಗುತ್ತಾರೆ. ಬಳಿಕ ಪೋಷಕರಿಂದ ಪ್ರತ್ಯೇಕವಾಗಿ ಸ್ವಂತ ಮನೆ ಮಾಡಿಕೊಂಡು ತಮ್ಮದೇ ಜೀವನ ರೂಪಿಸಿಕೊಳ್ಳುತ್ತಾರೆ. ಹೀಗಿರುವಾಗ ಪೋಷಕರನ್ನು ನೋಡಿಕೊಳ್ಳಲು ಶುಶ್ರೂಷಕಿಯರು ಅಥವಾ ಕೇರ್ ಗಿವರ್‌ಗಳು ಬೇರೆ ಬೇರೆ ದೇಶಗಳಿಂದ ಇಸ್ರೇಲ್‌ಗೆ ಬರುತ್ತಾರೆ. ಭಾರತದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೇರ್‌ಗೀವರ್ಸ್ಗಳಾಗಿ ಇಲ್ಲಿ ಹಲವರು ಕೆಲಸ ಗಿಟ್ಟಿಸಿಕೊಂಡಿದ್ದಾರೆ. ೧೨ ವರ್ಷ ಕೆಲಸ ಮಾಡಿದ ಬಳಿಕ ಕಡ್ಡಾಯವಾಗಿ ಸ್ವಂತ ದೇಶಕ್ಕೆ ಕೇರ್ ಗಿವರ್ಸ್ ಮರಳಬೇಕೆಂಬ ನಿಯಮವಿದೆ ಎಂದೂ ತಂಗಮಣಿ ವಿವರಿಸಿದರು.

ಪೋಷಕರನ್ನು ಸಲಹಲು ಕೆಲಸ ಗಿಟ್ಟಿಸಿಕೊಂಡ ಯುವಕ, ಯುವತಿ ಪ್ರತೀ ವರ್ಷ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಸಂದಾಯ ಮಾಡುವ ಹಣದಿಂದ ಹಿರಿಯ ನಾಗರಿಕರ ಜೀವನವನ್ನು ಸರ್ಕಾರ ನೋಡಿಕೊಳ್ಳುತ್ತದೆ. ಹೀಗಾಗಿ ಯುದ್ಧ ಸಂದರ್ಭದಲ್ಲಿಯೂ ಹಿರಿಯ ನಾಗರಿಕರು ಕೂಡ ಆತಂಕವಿಲ್ಲದೇ ಸರ್ಕಾರ ತನ್ನ ರಕ್ಷಣೆಗಿದೆ ಎಂಬ ಬಲವಾದ ನಂಬಿಕೆಯಿAದ ಆತಂಕರಹಿತರಾಗಿ ಜೀವಿಸುತ್ತಾರೆ ಎಂದೂ ತಂಗಮಣಿ ನುಡಿದರು.

ಇಸ್ರೇಲ್‌ನ ಪ್ರತೀ ನಿವಾಸಿಗಳಲ್ಲಿಯೂ ದೇಶಪ್ರೇಮ ಹಾಸುಹೊಕ್ಕಾಗಿದೆ. ಮೊದಲು ಇಸ್ರೇಲ್, ನಂತರ ಕುಟುಂಬ, ನಂತರ ಉದ್ಯೋಗ, ನಂತರವೇ ಸುಖ ಸಂತೋಷ ಎಂಬAತೆ ಇಲ್ಲಿನವರು ಜೀವಿಸುತ್ತಿದ್ದಾರೆ. ದೇಶಕ್ಕಾಗಿ ಏನನ್ನೂ ಬೇಕಾದರೂ ಮಾಡಬಲ್ಲರು.. ಇಸ್ರೇಲ್‌ಗೆ ಯಾರೆಲ್ಲಾ ಜೀವ ಕೊಡುತ್ತೀರಿ ಎಂದು ಪ್ರಶ್ನಿಸಿದರೆ ನಾನೇ ಮೊದಲು ಎಂಬAತೆ ಸಾಲುಗಟ್ಟಿ ನಿಲ್ಲಬಲ್ಲ ದೇಶಪ್ರೇಮಿಗಳು ಇಸ್ರೇಲಿಗರು ಎಂದೂ ತನ್ನ ದಶಕದ ಅನುಭವ ಹಂಚಿಕೊAಡರು ತಂಗಮಣಿ.

ಎಳವೆಯಿAದಲೇ ಜೀವನದ ಪ್ರತೀ ಸಂತೋಷ, ಆಡಂಬರವನ್ನು ಇಸ್ರೇಲಿಗರು ನೋಡಿರುತ್ತಾರೆ. ಸ್ವಚ್ಛಂದ ಜೀವನಕ್ಕೆ ಇಲ್ಲಿ ಆದ್ಯತೆ, ಸೌಂದರ್ಯದ ಜತೆಗೆ ಅತ್ಯುತ್ತಮ ದೇಹದಾಡ್ಯತೆ ಕಾಪಾಡಿಕೊಂಡಿರುವ ಇಸ್ರೇಲಿಗರು ಸಾಹಸ ಮನೋಭಾವದವರು. ಸೋಲನ್ನು ಖಂಡಿತಾ ಸ್ವೀಕರಿಸಲಾರರು. ಇಸ್ರೇಲಿನ ಅಣುಬಾಂಬ್ ತಯಾರಿಕಾ ಘಟಕಗಳನ್ನು ಧ್ವಂಸ ಮಾಡುವುದೇ ಇರಾನ್ ಉದ್ದೇಶವಾಗಿದೆ.

ಕಳೆದ ಸೆಪ್ಟೆಂಬರ್‌ನಿAದಲೇ ಇಸ್ರೇಲ್‌ನಲ್ಲಿ ತಳಮಳದ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರಬಲವಾದ ಹಿಬ್ಜುಲ್ಲಾ ಗುಂಪಿನ ದಾಳಿಯಿಂದ ಪ್ರಾರಂಭವಾದ ಇಸ್ರೇಲ್ ಅನಿಶ್ಚಿತತೆ ಈಗಿನ ಇರಾನ್ ಜತೆಗಿನ ಸಮರದವರೆಗೂ ಕಾಲಿಟ್ಟಿತ್ತು. ನಮ್ಮಂಥ ಕೇರ್ ಗೀವರ್ಸ್ ಸಿಬ್ಬಂದಿಗಳಿಗೆ ಯುದ್ಧದ ದಿನಗಳಲ್ಲಿ ಹಿರಿಯ ನಾಗರಿಕರು, ರೋಗಿಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದೇ ದೊಡ್ಡ ಸವಾಲಿನ ಕೆಲಸ. ಹಿರಿಯ ನಾಗರಿಕರು ಅಥವಾ ಯಾವುದೇ ವ್ಯಕ್ತಿ ಆರೋಗ್ಯ ಹದಗೆಟ್ಟು ತುರ್ತಾಗಿ ಆಸ್ಪತ್ರೆಗೆ ತೆರಳಲೇಬೇಕೆಂದು ಅವರನ್ನು ಮನೆಯಿಂದ ಆಸ್ಪತ್ರೆಗೆ ರವಾನಿಸುವ ಸಂದರ್ಭವೇ ಬಾಂಬ್ ದಾಳಿಯ ಸೂಚನೆ ದೊರಕುತ್ತದೆ. ಆಗ ನಾವೇ ಪ್ರಾಥಮಿಕ ಚಿಕಿತ್ಸೆ ನೀಡಿ ಜೀವ ಉಳಿಸುವ ದೇವರಂತಾಗಬೇಕಾದ ಅನಿವಾರ್ಯತೆ ಇಲ್ಲಿದೆ ಎಂದು ಯುದ್ಧದ ನಾಡಿನಿಂದ ತಂಗಮಣಿ ವಿವರಿಸಿದರು. ರಷ್ಯಾ ತಯಾರಿಕೆಯ ಅತ್ಯಾಧುನಿಕ ಕ್ಷಿಪಣಿಗಳಿಂದ ಬಾಂಬ್‌ಗಳು ನೆಲಕ್ಕೆ ಬಿದ್ದು ಹತ್ತಾರು ಸ್ಫೋಟಗಳಾಗಿ ನೂರಾರು ಕಡೆ ಸಿಡಿದು ಭಾರೀ ಹಾನಿಯುಂಟು ಮಾಡುತ್ತಿವೆ. ಕಟ್ಟಡಗಳೇ ನೆಲಕ್ಕುರುಳುತ್ತಿವೆ. ಕಾರ್, ಜೀಪ್‌ಗಳು ಸುಟ್ಟು ಬೂದಿಯಾಗಿವೆ. ಹೀಗಿದ್ದರೂ ಇಸ್ರೇಲಿಗರ ಜೀವನೋತ್ಸಾಹ ಕೊಂಚವೂ ಕಡಿಮೆಯಾಗಿಲ್ಲ.

ಇಸ್ರೇಲಿಗರು ಇಂದಿಗೂ ರಣೋತ್ಸಾಹದಲ್ಲಿಯೇ ಇದ್ದಾರೆ. ಕದನ ವಿರಾಮ ಎಂಬುದು ‘ಜಸ್ಟ್ ಬ್ರೇಕ್’ ಅಷ್ಟೇ... ಮಹಾಯುದ್ಧಕ್ಕೆ ಮುನ್ನ ಅಲ್ಪವಿರಾಮದಂತೆ, ಇಸ್ರೇಲ್ ಹಾಳುಗೆಡಹಲು ಶತ್ರುದೇಶಗಳು, ಭಯೋತ್ಪಾದಕ ಸಂಘಟನೆಗಳು ರಕ್ತಬೀಜಾಸುರರಂತೆ ಹುಟ್ಟಿಕೊಳ್ಳುತ್ತಲೇ ಇರುತ್ತವೆ ಎಂದು ಅರ್ಥಪೂರ್ಣವಾಗಿ ಹೇಳಿ ಮಾತು ಮುಗಿಸಿದರು ತಂಗಮಣಿ.

ಇಸ್ರೇಲ್‌ನ ಪ್ರಸ್ತುತ ಬೆಳವಣಿಗೆಯ ನಡುವೇ ಕೊಡಗು, ಮಡಿಕೇರಿ ಯೋಚನೆಯಾಗುತ್ತಲೇ ಇರುತ್ತದೆ... ಕೊಡಗಿನಂಥ ಸುಂದರ, ಶಾಂತಿಯುತ ಮತ್ತು ಹಾಯಾದ ಜೀವನಶೈಲಿ ಇಂದಿನ ಇಸ್ರೇಲ್‌ಗೆ ಹೋಲಿಸಿದರೆ ಸ್ವರ್ಗಸುಖದಂತೆ ಎನ್ನಲೂ ಮಡಿಕೇರಿ ಮೂಲದ ತಂಗಮಣಿ ಮರೆಯಲಿಲ್ಲ.!