ಚೆಯ್ಯಂಡಾಣೆ, ಜೂ. ೨೧: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಮನೆಯಂಗಳಕ್ಕೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಕುಡಿಯುವ ನೀರಿನ ಸಿಂಟೆಕ್ಸ್ ಧ್ವಂಸಗೊಳಿಸಿ ತೋಟಗಳಿಗೆ ಲಗ್ಗೆ ಇಟ್ಟು ಅಪಾರ ಪ್ರಮಾಣದಲ್ಲಿ ಹಾನಿ ಉಂಟುಮಾಡಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.

ಚೇಲಾವರ ಗ್ರಾಮದ ನಿವಾಸಿ ಪವನ್ (ಮಂಜು) ಎಂಬವರ ಮನೆಯಂಗಳಕ್ಕೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಮನೆಗೆ ಅಳವಡಿಸಿದ್ದ ಕುಡಿಯುವ ನೀರಿನ ಸಿಂಟೆಕ್ಸ್ ಧ್ವಂಸಗೊಳಿಸಿದಲ್ಲದೆ ತೋಟಕ್ಕೆ ನುಸುಳಿ ಕಾಫಿ,ಅಡಿಕೆ, ಬಾಳೆ ತೆಂಗು ಇನ್ನಿತರ ಕೃಷಿ ಗಿಡಗಳನ್ನು ತುಳಿದು ನಾಶಪಡಿಸಿ ಅಪಾರ ನಷ್ಟ ಉಂಟುಮಾಡಿದೆ. ಇದೇ ಗ್ರಾಮದ ಬಾಚಮಂಡ, ಜೇನಿರ, ಪಟ್ಟಚೆರುವಂಡ ಕುಟುಂಬಸ್ಥರ ತೋಟಗಳಿಗೆ ಕಳೆದ ಒಂದು ವಾರಗಳಿಂದ ಕಾಡಾನೆಗಳ ಹಿಂಡು ದಾಳಿ ನಡೆಸಿ ಅಪಾರ ಕೃಷಿ ಗಿಡಗಳನ್ನು ತುಳಿದು ನಾಶಪಡಿಸಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕೂಡಲೇ ಸಂಬAಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿರುವ ಕಾಡಾನೆಗಳನ್ನು ಕಾಡಿಗಟ್ಟುವ ಅಥವಾ ಹಿಡಿದು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಹಾಗೂ ನಷ್ಟ ಸಂಭವಿಸಿದ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.