ಸಿದ್ದಾಪುರ, ಜೂ. ೨೦ : ಇತ್ತೀಚೆಗೆ ಬಾಡಗ ಬಾಣಂಗಾಲ ಗ್ರಾಮದ ಮಠದಲ್ಲಿ ಕಾರಿನ ಮೇಲೆ ತೆಂಗಿನ ಮರವನ್ನು ದೂಡಿ ಹಾಕಿ ಕಾರಿಗೆ ಹಾನಿಗೊಳಿಸಿದ್ದ ರೇಡಿಯೋ ಕಾಲರ್ ಅಳವಡಿಸಿರುವ ದಕ್ಷ ಎಂಬ ಪುಂಡಾನೆಯು ಇದೀಗ ಕರಡಿಗೋಡು ಗ್ರಾಮದಲ್ಲಿ ಗುರುವಾರ ರಾತ್ರಿ ಪ್ರತ್ಯಕ್ಷಗೊಂಡು ಆತಂಕ ಮೂಡಿಸಿದೆ.

ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ಮಾನವನ ಮೇಲೆ ದಾಳಿ ನಡೆಸುತ್ತಿದ್ದ ಕಾಡಾನೆಯನ್ನು ಸೆರೆ ಹಿಡಿದು ಅದನ್ನು ನಾಗರಹೊಳೆ ಅಂತರಸAತೆಗೆ ಬಿಟ್ಟು ದಕ್ಷ ಎಂಬ ಹೆಸರಿಟ್ಟು ರೇಡಿಯೋ ಕಾಲರ್ ಅಳವಡಿಸಲಾಗಿತ್ತು. ಆದರೆ ನಾಲ್ಕೆ ದಿನಗಳಲ್ಲಿ ಈ ಕಾಡಾನೆ ಹಿಂತಿರುಗಿ ಬಾಡಗಬಾಣಂಗಾಲ ಗ್ರಾಮದಲ್ಲಿ ಪ್ರತ್ಯಕ್ಷಗೊಂಡು ಹಲವಾರು ಮನೆಗಳ ಮೇಲೆ ಹಾಗೂ ವಾಹನಗಳ ಮೇಲೆ ದಾಳಿ ನಡೆಸಿತ್ತು. ನಂತರ ಕಾಫಿ ತೋಟದೊಳಗೆ ಸುತ್ತಾಡುತ್ತಿತ್ತು. ಕಳೆದ ವಾರ ಬಾಡಗ ಬಾಣಂಗಾಲ ಗ್ರಾಮದ ಮಠದಲ್ಲಿ ರಾತ್ರಿ ಸಮಯದಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ತೆಂಗಿನ ಮರವನ್ನು ದೂಡಿ ಹಾಕಿ ಕಾರಿಗೆ ಹಾನಿಗೊಳಿಸಿತ್ತು. ಇದರಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದರು. ಆದರೆ ರೇಡಿಯೋ ಕಾಲರ್ ಸಮರ್ಪಕವಾಗಿ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ದಕ್ಷ ಆನೆಯು ಯಾವ ಗ್ರಾಮದಲ್ಲಿ ಸುತ್ತಾಡುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಮರ್ಪಕವಾಗಿ ಮಾಹಿತಿ ದೊರೆತಿರಲಿಲ್ಲ.

ಇದೀಗ ಗುರುವಾರದಂದು ರಾತ್ರಿ ಸಿದ್ದಾಪುರ ಸಮೀಪದ ಕರಡಿ ಗೋಡು ಗ್ರಾಮದ ಕಾಫಿ ಬೆಳೆಗಾರ ಕೆ.ಪಿ. ದೇವಯ್ಯ ಎಂಬವರ ಮನೆ ಅಂಗಳದಲ್ಲಿ ಪ್ರತ್ಯಕ್ಷಗೊಂಡಿರುವ ದೃಶ್ಯಗಳು ಅವರ ಮನೆಯಲ್ಲಿ ಅಳವಡಿಸಿರುವ ಸಿ.ಸಿ. ಕ್ಯಾಮರದಲ್ಲಿ ಸೆರೆಯಾಗಿದೆ. ಅಲ್ಲದೆ ಅವರಿಗೆ ಸೇರಿದ ಕಾಫಿ ತೋಟಗಳಲ್ಲಿ ದಾಂಧಲೆ ನಡೆಸಿ ಕೃಷಿ ಫಸಲುಗಳನ್ನು ಹಾನಿಗೊಳಿಸಿದೆ. ದಕ್ಷ ಪ್ರತ್ಯಕ್ಷಗೊಂಡಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಮಾಹಿತಿ ಪಡೆದುಕೊಂಡ ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಕೆ.ವಿ. ಶಿವರಾಂ ಅವರು ಅಗತ್ಯ ಕ್ರಮ ಕೈಗೊಂಡು ರೇಡಿಯೋ ಕಾಲರ್ ಅಳವಡಿಸಿರುವ ದಕ್ಷ ಆನೆಯ ಬಗ್ಗೆ ಅದರ ಚಲನವಲನ ಕಂಡುಹಿಡಿಯಲು ಉಪವಲಯ ಅರಣ್ಯ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದಾರೆ.

ರೇಡಿಯೋ ಕಾಲರ್‌ನಿಂದ ಸಂದೇಶಗಳು ಸಮರ್ಪಕವಾಗಿ ಲಭಿಸದ ಹಿನ್ನೆಲೆಯಲ್ಲಿ ತಾಂತ್ರಿಕ ಸಿಬ್ಬಂದಿಗಳೊAದಿಗೆ ಚರ್ಚೆ ನಡೆಸಿದ್ದಾರೆ. ದಕ್ಷ ಪುಂಡಾಟಿಕೆ ನಡೆಸುತ್ತಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದು, ಮಾಲ್ದಾರೆ ಬಾಡಗ ಬಾಣಂಗಾಲ ವ್ಯಾಪ್ತಿಯಲ್ಲಿ ಕಂಡುಬರುತ್ತಿದ್ದ ಆನೆ ಇದೀಗ ಕರಡಿಗೋಡಿನತ್ತ ಲಗ್ಗೆ ಇಟ್ಟಿದೆ. ಆದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

-ವರದಿ : ವಾಸು