ಮಡಿಕೇರಿ, ಜೂ. ೨೦: : ಕುಶಾಲನಗರ ಬೈಚನಹಳ್ಳಿ ಗ್ರಾಮದ ಗ್ರಾಮದೇವತೆ ಕನ್ನಂಬಾಡಮ್ಮ ದೇವಾಲಯದ ನೂತನ ಗರ್ಭಗುಡಿ ನಿರ್ಮಾಣಕ್ಕಾಗಿ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ದೇವಾಲಯಗಳು ಮನುಷ್ಯನಿಗೆ ಶಾಂತಿ ನೆಮ್ಮದಿ ನೀಡುವ ಸುಂದರ ತಾಣಗಳು. ದೇವಾಲಯ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಜಾತಿ ಧರ್ಮ ಮೀರಿದ ಸಹಾಯ, ಸಹಕಾರ ನೀಡಬೇಕು. ಸರ್ಕಾರದಿಂದ ಅಗತ್ಯವಾಗಿ ಸಿಗುವ ಅನುದಾನದ ಜೊತೆಗೆ ವೈಯಕ್ತಿಕವಾಗಿಯೂ ಸಹಾಯ ಮಾಡುವುದಾಗಿ ಶಾಸಕರು ಹೇಳಿದರು.
ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ದಶಕಗಳ ಹಿಂದೆ ಬೈಚನಹಳ್ಳಿಯಲ್ಲಷ್ಟೇ ಜನವಸತಿ ಇತ್ತು. ಕ್ರಮೇಣ ಊರು ಆಧುನಿಕತೆಯತ್ತ ತೆರೆದುಕೊಂಡಿತು. ಈ ಗ್ರಾಮದಲ್ಲಿ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ದೇವಾಲಯಕ್ಕೆ ಹೊಸ ರೂಪ ಕೊಡಲು ಈ ಹಿಂದೆ ಮಾಡಿದ ಯೋಜನೆಗಳೆಲ್ಲಾ ವ್ಯರ್ಥ ವಾದ ಬಗೆಯನ್ನು ಸ್ಮರಿಸಿದರಲ್ಲದೆ ಇದೀಗ ಆಗುತ್ತಿರುವ ದೇವಾಲಯ ನಿರ್ಮಾಣ ನಿರ್ವಿಘ್ನವಾಗಿ ಸಾಗಲಿ ಎಂದರು.
ಕಳೆದ ೨೦ ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿದ್ದ ಹಳೆಯ ಕಟ್ಟಡದ ಸುತ್ತಲೂ ಅರಳಿ ಮರಗಳು ಬೆಳೆದು ಬೃಹತ್ ಬೇರುಗಳು ಇಡೀ ಕಟ್ಟಡವನ್ನು ಆವರಿಸಿ ಕಟ್ಟಡವನ್ನು ಶಿಥಿಲಗೊಳಿಸಿದ್ದವು. ಈ ಬಗ್ಗೆ ‘ಶಕ್ತಿ’ ವರದಿ ಪ್ರಕಟಿಸಿತ್ತು. ನಂತರ ಎಚ್ಚೆತ್ತುಕೊಂಡ ಸ್ಥಳೀಯರು ಅಷ್ಟಮಂಗಲ ಪ್ರಶ್ನೆ ಹಾಕಿಸಿ ಹಳೆಯ ಕಟ್ಟಡವನ್ನು ತೆರವುಗೊಳಿಸಿ ಇದೀಗ ರೂ. ೫೦ ಲಕ್ಷ ವೆಚ್ಚದಲ್ಲಿ ಹೊಸ ದೇವಾಲಯ ನಿರ್ಮಾಣಕ್ಕೆ ಮುಂದಾಗಿರುವುದು ಶಕ್ತಿ ವರದಿಯ ಫಲಶೃತಿ ಎಂದು ದೇವಾಲಯ ಸಮಿತಿ ಅಧ್ಯಕ್ಷ ಬಿ.ಎಸ್. ಶಿವಕುಮಾರ್ ಹೇಳಿದರು.
ಕನ್ನಂಬಾಡಮ್ಮ ದೇವಾಲಯ ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಡಿ. ಶ್ರೀಕಾಂತ್, ಕಾರ್ಯದರ್ಶಿಯೂ ಆದ ಪುರಸಭೆ ಸದಸ್ಯ ಬಿ.ಎಲ್. ಜಗದೀಶ್, ಕೋಶಾಧಿಕಾರಿ ಕೆ.ಪಿ.ಉಮೇಶ್, ನಿರ್ದೇಶಕರಾದ ಶ್ರೀಮಂತ, ಬಿ.ಆರ್.ಮಣಿಕಂಠ, ಗಣೇಶ, ಆರ್.ಮಂಜುನಾಥ್, ಎಸ್.ಮಂಜು, ಪ್ರಮುಖರಾದ ಕೆ.ಎನ್.ಅಶೋಕ್, ಪುರಸಭೆ ಅಧ್ಯಕ್ಷೆ ಜಯಲಕ್ಷಿö್ಮ, ಕೂಡ ಅಧ್ಯಕ್ಷ ಪ್ರಮೋದ್, ಮಾಜಿ ಅಧ್ಯಕ್ಷ ಮಂಜುನಾಥ ಗುಂಡೂರಾವ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಜಿ.ಪಂ. ಮಾಜಿ ಸದಸ್ಯ ಬಿ.ಬಿ.ಭಾರತೀಶ್, ಎನ್.ಎನ್. ಶಂಭುಲಿAಗಪ್ಪ ಮೊದಲಾದವರಿದ್ದರು.
ಇದಕ್ಕೂ ಮುನ್ನ ದೇವಾಲಯದ ಗರ್ಭಗುಡಿ ನಿರ್ಮಾಣದ ಸ್ಥಳದಲ್ಲಿ ಪಟ್ಟಣದ ಕನ್ನಿಕಾ ಪರಮೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಗಿರೀಶ್ ಭಟ್, ಉಮೇಶ್ ಭಟ್, ಕೃಷ್ಣಮೂರ್ತಿ ಭಟ್ ನೇತೃತ್ವದಲ್ಲಿ ಭೂವರಹ ಶಾಂತಿ ಹೋಮ ನಡೆಯಿತು.