ಮಡಿಕೇರಿ, ಜೂ. ೧೯: ಕೊಡಗಿನ ಪ್ರಮುಖ ಪವಿತ್ರ ಕ್ಷೇತ್ರ ತಲಕಾವೇರಿಯಲ್ಲಿ ದೇವಾಲಯಗಳ ಅಮೂಲ್ಯ ಆಭರಣಗಳನ್ನು ಸುಭದ್ರವಾಗಿರಿಸಲು ಭದ್ರತಾ ಕೊಠಡಿಯೊಂದು ನಿರ್ಮಾಣ ಹಂತದಲ್ಲಿದೆ. ಹಲವು ವರ್ಷಗಳ ಹಿಂದೆ ಬಿಬಿಎಂಪಿ ಪ್ರಮುಖರು ತಲಕಾವೇರಿಗೆ ಆಗಮಿಸಿದ್ದಾಗ ಕ್ಷೇತ್ರದ ಅಭಿವೃದ್ಧಿಗಾಗಿ ರೂ. ೧ ಕೋಟಿ ಅನುದಾನ ನೀಡಿದ್ದರು. ಈ ಹಣವನ್ನು ಬಳಸಿಕೊಂಡು ಇದೀಗ ಅಗತ್ಯವಾಗಿದ್ದ ಭದ್ರತಾ ಕೊಠಡಿಯನ್ನು ನಿರ್ಮಿಸಲು ಪ್ರಾರಂಭಿಸಲಾಗಿದೆ. ಇದರೊಂದಿಗೆ ತಲಕಾವೇರಿ ಕ್ಷೇತ್ರದಲ್ಲಿ ಬೇಸಿಗೆ ಕಾಲದಲ್ಲಿ ಅಗತ್ಯವಾದ ಕುಡಿಯುವ ನೀರನ್ನು ಒದಗಿಸಲು ಹಾಗೂ ಸಂದರ್ಭಗಳಲ್ಲಿ ಕಾವೇರಿಯ ಸ್ನಾನಕೊಳ ಮಲಿನವಾದಾಗ ಹಳೆಯ ನೀರನ್ನು ತೆಗೆದು ಹೊಸ ನೀರನ್ನು ತುಂಬಿಸಲು ಬೇಕಾದ ನೀರು ಶೇಖರಣಾ ಟ್ಯಾಂಕ್ ಒಂದನ್ನು ಕೂಡ ನಿರ್ಮಿಸಲಾಗುತ್ತಿದೆ. ಈಗಾಗಲೇ ಕ್ಷೇತ್ರದಲ್ಲಿ ಒಂದು ಟ್ಯಾಂಕ್ ಇದ್ದರೂ ಅಗತ್ಯ ಸಂದರ್ಭಗಳಲ್ಲಿ ನೀರು ಸಾಲದಾಗುವುದರಿಂದ ಮತ್ತೊಂದು ಟ್ಯಾಂಕ್ ನಿರ್ಮಿಸಲಾಗುತ್ತಿದೆ. ಕ್ಷೇತ್ರದಲ್ಲಿ ಬಹಳ ವರ್ಷಗಳಿಂದ ಅಸ್ತಿತ್ವದಲ್ಲಿರುವ ಬಾವಿ ಮೂಲಕ ಈ ಟ್ಯಾಂಕ್‌ಗಳಿಗೆ ಪಂಪ್ ಮೂಲಕ ನೀರು ತುಂಬಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಭದ್ರತಾ ಕೊಠಡಿಯ ಪಶ್ಚಿಮ ಭಾಗದಲ್ಲಿ ೧೨ ಅಡಿ ಎತ್ತರದ ೭೦ ಅಡಿ ಉದ್ದದ ತಡೆಗೋಡೆ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ.

ಪ್ರಸ್ತುತ ಬಿಬಿಎಂಪಿ ಅನುದಾನದ ಈ ಯೋಜನೆಯಲ್ಲಿ ಭದ್ರತಾ ಕೊಠಡಿಯಲ್ಲಿರಿಸುವ ಕ್ಷೇತ್ರದ ಚಿನ್ನಾಭರಣಗಳ ರಕ್ಷಣೆಗಾಗಿ ಭದ್ರತಾ ಸಿಬ್ಬಂದಿಯೊಬ್ಬರು ಉಳಿದುಕೊಳ್ಳಲು ಕೂಡ ಕೊಠಡಿಯೊಂದನ್ನು ನಿರ್ಮಿಸಲಾಗುತ್ತಿದೆ ಎಂದು ಕಾಮಗಾರಿಯ ಉಸ್ತುವಾರಿ ವಹಿಸಿಕೊಂಡಿರುವ ಜಿಲ್ಲಾ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಡಿ.ಎಂ. ಗಿರೀಶ್ ಮಾಹಿತಿಯಿತ್ತಿದ್ದಾರೆ.

ಅರ್ಚಕರಿಗೆ ಹೆಚ್ಚಿನ ಕೊಠಡಿಗೆ ಅವಕಾಶ

ಕ್ಷೇತ್ರದಲ್ಲಿ ಈ ಹಿಂದೆ ಪ್ರಧಾನ ಅರ್ಚಕರಾಗಿದ್ದ ನಾರಾಯಣಾಚಾರ್ ಅವರ ಮನೆ ಕೊಚ್ಚಿಹೋದ ಬಳಿಕ ಅರ್ಚಕರಿಗೆ ಸೂಕ್ತ ನಿವಾಸ ಸೌಲಭ್ಯದ ಕುರಿತು ಸಂಬAಧಿಸಿದವರು ಮನವಿ ನೀಡಿದ್ದರು. ಇದೇ ಜಾಗದಲ್ಲಿ ಆ ಮನೆಗಳನ್ನು ನಿರ್ಮಿಸುವ ಕಾರ್ಯ ಈ ಯೋಜನೆಯಲ್ಲಿ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಸೇರಿದೆಯೇ ಎಂಬ ‘ಶಕ್ತಿ’ಯ ಪ್ರಶ್ನೆಗೆ ಗಿರೀಶ್ ಪ್ರತಿಕ್ರಿಯಿಸಿದರು. ಅವರ ಪ್ರಕಾರ ಅರ್ಚಕರಿಗೆ ಹೆಚ್ಚಿನ ಮನೆಗಳ ನಿರ್ಮಾಣಕ್ಕೆ ಜಾಗವನ್ನು ಬಿಡಲಾಗಿದೆ. ಆದರೆ ಈಗ ಲಭ್ಯವಿರುವ ಬಿಬಿಎಂಪಿಯ ಅನುದಾನದಲ್ಲಿ ಮನೆಗಳನ್ನು ನಿರ್ಮಿಸಲು ಹಣ ಸಾಕಾಗುವುದಿಲ್ಲ. ಮುಂದಿನ ದಿನಗಳಲ್ಲಿ ಮನೆಗಳನ್ನು ನಿರ್ಮಿಸಿ ಸೌಲಭ್ಯ ಕಲ್ಪಿಸುವ ಅವಕಾಶಗಳಿವೆ ಎಂದು ಅವರು ಖಚಿತಪಡಿಸಿದರು.

ಆಭರಣ ಭದ್ರತಾ ಕೊಠಡಿಯಲ್ಲಿ ಶಾಶ್ವತವಾಗಿಯೇ ಅಲ್ಲಿ ಎಲ್ಲಾ ಆಭರಣಗಳನ್ನು ಇರಿಸಲಾಗುವುದೇ ಎಂಬ ‘ಶಕ್ತಿ’ಯ ಪ್ರಶ್ನೆಗೆ ಕ್ಷೇತ್ರದ ಪಾರುಪತ್ತೇಗಾರರಾದ ಕೋಡಿ ಮೋಟಯ್ಯ ಪ್ರತಿಕ್ರಿಯಿಸಿದರು. ಸದ್ಯದ ಮಟ್ಟಿಗಿನ ತೀರ್ಮಾನದಂತೆ ತಲಕಾವೇರಿ ಜಾತ್ರೆ ಸಂದರ್ಭದಲ್ಲಿ ಸುಮಾರು ಒಂದು ತಿಂಗಳ ಕಾಲ ಭಾಗಮಂಡಲದಿAದ ತರುವ ಆಭರಣಗಳನ್ನು ತಲಕಾವೇರಿಯ ಈ ಭದ್ರತಾ ಕೊಠಡಿಯಲ್ಲಿ ಇರಿಸುವ ಅವಕಾಶವಿದೆ. ಮುಂದೆ ಆಡಳಿತ ಸಮಿತಿ ನಿರ್ಧಾರ ಕೈಗೊಂಡರೆ ಮಾತ್ರ ಖಾಯಂ ಆಗಿ ಇದೇ ಭದ್ರತಾಕೊಠಡಿಯಲ್ಲಿ ಆಭರಣಗಳನ್ನು ಇರಿಸಬಹುದಾಗಿದೆ. ಆದರೆ ಆಡಳಿತಾಧಿಕಾರಿಗಳಿಂದ ಈ ಬಗ್ಗೆ ಇನ್ನೂ ನಿಖರ ಸೂಚನೆ ಬಂದ ನಂತರವಷ್ಟೇ ಅನುಸರಣೆ ಸಾಧ್ಯ ಎಂದರು.

ಯಾತ್ರಿ ನಿವಾಸ್ ಅಭಿವೃದ್ಧಿ

ಈ ನಡುವೆ ಭಾಗಮಂಡಲದಲ್ಲಿಯೂ ಪ್ರವಾಸಿಗರ ಅನುಕೂಲಕ್ಕಾಗಿ ಯಾತ್ರಿ ನಿವಾಸ್ ಕಟ್ಟಡವನ್ನು ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ಲಭ್ಯವಿದ್ದ ರೂ. ೮೦ ಲಕ್ಷ ಅನುದಾನದಲ್ಲಿ ಕೊಠಡಿಗಳ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ಇಂಜಿನಿಯರ್ ಗಿರೀಶ್ ವಿವರಿಸಿದರು. -ವರದಿ : ‘‘ಚಕ್ರವರ್ತಿ’’

ಸೋರುತಿಹುದು ಅನ್ನದಾನ ಕೇಂದ್ರ

ಈ ಹಿಂದೆ ಕೋಟಿಗಟ್ಟಲೆ ಹಣದಲ್ಲಿ ಕ್ಷೇತ್ರ ಜೀರ್ಣೋದ್ಧಾರಗೊಂಡಿತ್ತು. ಆದರೆ ಈ ಕಟ್ಟಡದ ಕೆಲವು ಭಾಗಗಳಲ್ಲಿ ಇದೀಗ ದುರವಸ್ಥೆಗಳು ಗೋಚರವಾಗುತ್ತಿದೆ. ಸಾರ್ವಜನಿಕ ಅನ್ನದಾನ ಕೇಂದ್ರದ ಕೆಲವು ಕಡೆ ಗೋಡೆ ಭಾಗಗಳಲ್ಲಿ ನೀರು ಸೋರಿಕೆ ಉಂಟಾಗಿದೆ. ಇದರಿಂದಾಗಿ ಪಾಚಿ ಕಟ್ಟುತ್ತಿದೆ. ಅಲ್ಲದೆ ಅಡುಗೆ ಮನೆಯ ಗೋಡೆಯ ಮೇಲ್ಭಾಗದಲ್ಲಿರುವ ಕಿಟಕಿ ಗಾಜುಗಳು ಒಡೆದು ಹೋಗಿದ್ದರೂ ಅವುಗಳನ್ನು ಸರಿಮಾಡಿಸದ ಕಾರಣ ಮಳೆ ನೀರು ಒಳಗೆ ನುಗ್ಗಿ ಗೋಡೆಗಳಲ್ಲಿ ಪಾಚಿಕಟ್ಟುತ್ತಿರುವುದು ಕಂಡು ಬರುತ್ತಿದೆ. ಇನ್ನೊಂದೆಡೆ ಹಾಸುಕಲ್ಲುಗಳ ಮಧ್ಯೆ ಲೇಪನ ಕಿತ್ತುಹೋಗಿದ್ದು, ಮಳೆ ನೀರು ಆ ಸ್ಥಳಗಳಲ್ಲಿ ತುಂಬುತ್ತಿದ್ದು, ಅನ್ನದಾನ ಕೇಂದ್ರದ ಸಮೀಪದ ಕೋಣೆಯ ಗೋಡೆಯನ್ನು ಸೀಳಿ ಮಳೆ ನೀರು ಒಳಬರುತ್ತಿರುವ ದೃಶ್ಯ ಕಂಡು ಬಂಡಿದೆ. ಈ ಕೊರತೆಗಳನ್ನು ಸರಿಪಡಿಸಿ ಆಡಳಿತಕಾರರು ತಕ್ಷಣ ಕ್ರಮ ಕೈಗೊಳ್ಳುವಂತೆ ಭಕ್ತಾದಿಗಳು ಆಗ್ರಹಿಸಿದ್ದಾರೆ.

ಈ ಹಿಂದೆ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಜೀರ್ಣೋದ್ಧಾರ ಮಾಡಿದಾಗ ಭಾಗಮಂಡಲ ಸಂಗಮ ಸ್ಥಳದಲ್ಲಿ ಅನೇಕ ಅನುಕೂಲಗಳನ್ನು ಕಲ್ಪಿಸಲಾಗಿತ್ತು. ಆದರೆ, ಅನುಕೂಲಗಳ ಪ್ರಮಾಣ ಸಾಲದಾಗುತ್ತಿದೆ. ದಿನದಿಂದ ದಿನಕ್ಕೆ ಭಾಗಮಂಡಲ ಸಂಗಮದಲ್ಲಿ ಸ್ನಾನ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಪಿಂಡ ಪ್ರದಾನ ಮಾಡುವವರ ಸಂಖ್ಯೆಯೂ ಅಧಿಕವಾಗುತ್ತಿದೆ. ಮಹಿಳೆಯರಿಗಾಗಿ ವಸ್ತç ಬದಲಾವಣೆಗೆ ಕಲ್ಪಿಸಿರುವ ಸ್ಥಳಾವಕಾಶ ಅತೀ ಕಿರಿದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವಾಗ ವಸ್ತç ಬದಲಾವಣೆಗಾಗಿ ನೂಕುನುಗ್ಗಲಾಗುತ್ತಿದ್ದು, ಭಕ್ತಾದಿಗಳು ಬಹಳಷ್ಟು ಕಾಲ ಕಾಯಬೇಕಾದ ಪರಿಸ್ಥಿತಿಯಿದೆ. ಈ ಹಿನ್ನೆಲೆಯಲ್ಲಿ ವಸ್ತç ಬದಲಾವಣೆಗೆ ಸನಿಹದಲ್ಲಿಯೇ ವಿಸ್ತೃತ ಕಟ್ಟಡ ನಿರ್ಮಾಣದ ಮೂಲಕ ಅವಕಾಶ ಕಲ್ಪಿಸಬೇಕಾಗಿದೆ ಎಂದು ಸ್ಥಳಕ್ಕೆ ತೆರಳಿದ್ದ ‘ಶಕ್ತಿ’ ಪ್ರತಿನಿಧಿಯೊಂದಿಗೆ ಭಕ್ತಾದಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೇ ಅಲ್ಲದೆ ಪಿಂಡ ಪ್ರದಾನದ ಕೊಠಡಿಯಲ್ಲಿ ಕ್ರಿಯೆಗಳನ್ನು ನಡೆಸಲು ಸ್ಥಳಾವಕಾಶ ಕಡಿಮೆಯಿದೆ. ಕೊಠಡಿ ದೊಡ್ಡದಾಗಿದ್ದರೂ ಮಧ್ಯಭಾಗದಲ್ಲಿ ಗೋಡೆ ನಿರ್ಮಿಸಿ ಅನ್ನ ತಯಾರಿಕೆಗೆಂದು ಪ್ರತ್ಯೇಕಿಸಲಾಗಿದೆ. ಆದರೆ ಈ ಗೋಡೆಯನ್ನು ಒಡೆದು ಅನ್ನ ತಯಾರಿಕೆಗೆ ಪ್ರತ್ಯೇಕ ವ್ಯವಸ್ಥೆ ಬೇಕಾಗಿಲ್ಲ ಎಂದು ಕ್ಷೇತ್ರದ ಸ್ಥಳೀಯ ಪುರೋಹಿತರುಗಳು ಮನವಿ ಮಾಡಿದ್ದರು. ಹಾಗೆ ಮಾಡಿದರೆ ಅಪರ ಕ್ರಿಯೆಗಳನ್ನು ನಡೆಸಲು ಸಾಕಷ್ಟು ಸ್ಥಳಾವಕಾಶ ದೊರಕುತ್ತದೆ ಎಂದು ಆಡಳಿತಕಾರರೊಂದಿಗೆ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ಇದರಿಂದಾಗಿ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಬಂದಾಗ ವೈದಿಕರು ಲಭ್ಯವಿದ್ದರೂ ಸ್ಥಳಾವಕಾಶದ ಕೊರತೆಯಿಂದಾಗಿ ಆಗಮಿಸಿದ ಭಕ್ತಾದಿಗಳು ಪಿಂಡ ಪ್ರದಾನ ಮತ್ತು ಅಪರ ಕ್ರಿಯೆಗಳಿಗೆ ಬಹಳಷ್ಟು ಸಮಯ ಕಾಯಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಕೆಲವು ವೈದಿಕರು ‘ಶಕ್ತಿ’ಯೊಂದಿಗೆ ತಿಳಿಸಿದ್ದು, ಈ ಕಾರ್ಯವನ್ನು ಆದಷ್ಟು ಶೀಘ್ರ ಮಾಡಿಕೊಡುವಂತೆ ಕೋರಿಕೊಂಡಿದ್ದಾರೆ.