ಶನಿವಾರಸಂತೆ, ಜೂ. ೧೯: ಪರಿಸರ ಸಂರಕ್ಷಣೆಯ ಬಗ್ಗೆ ಪೊಲೀಸ್ ಇಲಾಖೆ ಮತ್ತಿತರ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಾಗೃತಿ ಮೂಡಿಸಿ, ರಸ್ತೆ ಬದಿ ಕಸ ತಂದು ಸುರಿಯುವವರ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರೂ ಕೆಲವು ಸಾರ್ವಜನಿಕರು ಭಂಡತನ ತೋರಿಸಿ ಮತ್ತದೇ ಸ್ಥಳದಲ್ಲಿ ಕಸ ಹಾಕುತ್ತಿರುವುದರ ಬಗ್ಗೆ ನಾಗರಿಕರು ವಿಷಾದ ವ್ಯಕ್ತಪಡಿಸಿರುತ್ತಾರೆ.
ಸಮೀಪದ ಕೊಡ್ಲಿಪೇಟೆಯಲ್ಲಿ ಇತ್ತೀಚೆಗೆ ಶಾಲೆ, ನಾಡಕಚೇರಿ ಹಾಗೂ ಪೊಲೀಸ್ ಠಾಣೆಯ ಪಕ್ಕದ ಸ್ಥಳದಲ್ಲಿ ಕಸ ಹಾಕುತ್ತಿದ್ದು, ಉಪ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಹಾಗೂ ಚಿತ್ರ ಕಲಾವಿದರೂ ಆಗಿರುವ ಉದಯ್ ಶಾಲಾ ಆವರಣದ ಗೋಡೆ ತಡೆಗೋಡೆ ಮೇಲೆ “ಇಲ್ಲಿ ಕಸ ಕಡ್ಡಿ ಹಾಕಬಾರದು” ಎಂದು ಬರೆದು ಜಾಗೃತಿ ಮೂಡಿಸಿದ್ದರು. ಆದರೆ, ಆ ಜಾಗೃತಿ ಬರಹವನ್ನು ಅಣಕಿಸುವಂತೆ ಸಾರ್ವಜನಿಕರು ಮತ್ತದೇ ಜಾಗದಲ್ಲಿ ಕಸ ತಂದು ಸುರಿದಿದ್ದಾರೆ. ಬದಲಾಗದ, ಮನ ಪರಿವರ್ತನೆಯಾಗದ ಸಾರ್ವಜನಿಕರ ಬಗ್ಗೆ ಬೇಸರ ವ್ಯಕ್ತಪಡಿಸಿರುವ ನಾಗರಿಕರು, ಈ ಬಗ್ಗೆ ಗ್ರಾಮ ಪಂಚಾಯಿತಿಯವರು ಕ್ರಮ ತೆಗೆದುಕೊಳ್ಳಬೇಕು. ಪಟ್ಟಣದ ನೈರ್ಮಲ್ಯ ಕಾಪಾಡುವ ಜವಾಬ್ದಾರಿ ಪಂಚಾಯಿತಿಯವರದು. ಸಿ.ಸಿ. ಟಿ.ವಿ. ಅಳವಡಿಸಿ ಕಸ ಹಾಕುವವರ ಮೇಲೆ ದಂಡ ವಿಧಿಸುವಂತೆ ಒತ್ತಾಯಿಸಿದ್ದಾರೆ.