ಸೋಮವಾರಪೇಟೆ, ಜೂ. ೧೯: ನಿಯಮಿತವಾಗಿ ಯೋಗ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳ ಬಹುದು ಎಂದು ಯೋಗ ಮತ್ತು ಪ್ರಕೃತಿ ಚಿಕಿತ್ಸೆ ವೈದ್ಯಾಧಿಕಾರಿ ಅರುಣ್ ಕುಮಾರ್ ಹೇಳಿದರು.

೧೧ನೇ ಅಂತರಾಷ್ಟಿçÃಯ ಯೋಗ ದಿನಾಚರಣೆ ಅಂಗವಾಗಿ ಪಟ್ಟಣದ ಆಯುಷ್ ಇಲಾಖೆಯಲ್ಲಿ ಹಮ್ಮಿಕೊಂಡಿದ್ದ ಯೋಗ ದಿನಾಚರಣೆ ಹಾಗೂ ಪತ್ರಕರ್ತರಿಗೆ ಯೋಗ ತರಬೇತಿ, ಆಯುಷ್ ಪರಿಚಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಆಯುರ್ವೇದ ಬಗ್ಗೆ ಜನರಿಂದ ಜನರಿಗಾಗಿ ಸಂದೇಶ, ಜನರ ಸಹಭಾಗಿತ್ವ, ಜನ ಆಂದೋಲನ ಎಂಬ ಮೂರು ಉದ್ದೇಶವನ್ನು ಇಟ್ಟುಕೊಂಡು ಆಯುರ್ವೇದ ದಿನ ಆಚರಿಸ ಲಾಗುತ್ತಿದೆ. ಪಟ್ಟಣದ ಆಯುಷ್ ಇಲಾಖೆಯಲ್ಲಿ ಆಯುರ್ವೇದ, ಹೋಮಿಯೋಪತಿ, ಉಚಿತ ಚಿಕಿತ್ಸಾ ಸೌಲಭ್ಯವಿದ್ದು ರೋಗಿಗಳು ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಆಯುರ್ವೇದ ವೈದ್ಯೆ ಕೆ.ಎಸ್. ಶ್ವೇತ ಮಾತನಾಡಿ, ಉತ್ತಮ ಆರೋಗ್ಯಕ್ಕೆ ಆಯುರ್ವೇದ ಔಷಧಿ ಸಹಕಾರಿಯಾಗಿದ್ದು, ಭಾರತ ದೇಶಕ್ಕೆ ಆಯುರ್ವೇದದ ಮೂಲಕ ಘನತೆ ಹೆಚ್ಚಾಗಿದೆ. ಇತರ ದೇಶಗಳಿಂದ ನಮ್ಮ ದೇಶಕ್ಕೆ ಬಂದು ಆಯುರ್ವೇದದ ಕುರಿತು ಅಧ್ಯಯನ ಮಾಡುತ್ತಾರೆ ಎಂದರು.

ಹೋಮಿಯೋಪತಿ ವಿಭಾಗದ ವೈದ್ಯೆ ಸುಪರ್ಣಿಕಾ ಮಾತನಾಡಿ, ಹೋಮಿಯೋಪತಿ ಒಂದು ಸಮಗ್ರ ವೈದ್ಯಕೀಯ ಪದ್ಧತಿಯಾಗಿದ್ದು, ಇದನ್ನು ೧೮ನೇ ಶತಮಾನದಲ್ಲಿ ಜರ್ಮನ್ ವೈದ್ಯ ಸ್ಯಾಮ್ಯುಯೆಲ್ ಹಾನಿಮನ್ ಅಭಿವೃದ್ಧಿಪಡಿಸಿದರು. ಹೋಮಿಯೋಪತಿ ಮೂಲಭೂತ ತತ್ವವೆಂದರೆ ದೇಹವು ತನ್ನನ್ನು ನಾನು ಗುಣಪಡಿಸುವ ಸಾಮಥ್ಯ ವನ್ನು ಹೊಂದಿದೆ. ಹೋಮಿಯೋ ಪತಿ ಪರಿಹಾರಗಳನ್ನು ಸಸ್ಯಗಳು, ಖನಿಜಗಳು ಮತ್ತು ಪ್ರಾಣಿ ಉತ್ಪನ್ನಗಳಂತಹ ನೈಸರ್ಗಿಕ ವಸ್ತುಗಳಿಂದ ತಯಾರಿಸಲಾಗುತ್ತದೆ. ಹೋಮಿಯೋಪತಿ ವೈದ್ಯರು ದೈಹಿಕ ರೋಗಲಕ್ಷಣಗಳನ್ನು ಮಾತ್ರವಲ್ಲದೆ ವ್ಯಕ್ತಿಯ ಮಾನಸಿಕ, ಭಾವನಾತ್ಮಕ ಮತ್ತು ಅಧ್ಯಾತ್ಮಿಕ ಅಂಶಗಳನ್ನು ಸಹ ಗಣನೆಗೆ ತೆಗೆದುಕೊಂಡು ಚಿಕಿತ್ಸೆ ನೀಡುತ್ತಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಮಹೇಶ್, ಕೊಡಗು ಪತ್ರಕರ್ತರ ಸಂಘದ ಉಪಾಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ ಇದ್ದರು. ಪತ್ರಕರ್ತರಿಗೆ ಯೋಗ ತರಬೇತಿ ನೀಡಲಾಯಿತು. ನಂತರ ಆರೋಗ್ಯ ತಪಾಸಣೆ ನಡೆಸಲಾಯಿತು.