ಕುಶಾಲನಗರ, ಜೂ. ೧೯ : ಮಾಜಿ ಸೈನಿಕರೊಬ್ಬರು ಬುಧವಾರ ರಾತ್ರಿಯಿಂದ ನಾಪತ್ತೆಯಾಗಿರುವ ಘಟನೆ ಕುಶಾಲನಗರ ಸಮೀಪ ಗುಡ್ಡೆ ಹೊಸೂರು ತೆಪ್ಪದ ಕಂಡಿ ಬಳಿ ನಡೆದಿದೆ.
ಚೆಟ್ಟಳ್ಳಿ ಕಂಡಕರೆ ನಿವಾಸಿ ಕೆ.ಯು. ಗಿರೀಶ್ (೪೬) ಎಂಬವರೇ ನಿಗೂಢವಾಗಿ ನಾಪತ್ತೆಯಾಗಿರುವ ವ್ಯಕ್ತಿಯಾಗಿದ್ದು ಅವರಿಗೆ ಸೇರಿದ ದ್ವಿಚಕ್ರ ವಾಹನ (ಕೆಎ೧೨ ಎಸ್೩೧೩೯) ಮತ್ತು ಚಪ್ಪಲಿ ತೆಪ್ಪದ ಕಂಡಿ ಕಾವೇರಿ ತೂಗು ಸೇತುವೆಯ ಬಳಿ ಗೋಚರಿಸಿದ್ದು ಕಾವೇರಿ ನದಿಗೆ ಬಿದ್ದಿರುವ ಬಗ್ಗೆ ಶಂಕೆ ವ್ಯಕ್ತಗೊಂಡಿದೆ.
ಅವರಿಗೆ ಸೇರಿದ ಮೊಬೈಲ್ ಕೂಡ ರಾತ್ರಿ ೧೦ ಗಂಟೆ ನಂತರ ಸ್ವಿಚ್ ಆಫ್ ಆಗಿದ್ದು, ನದಿಯಲ್ಲಿ ಹುಡುಕಾಟ ಆರಂಭಗೊAಡಿದೆ. ಮಾಹಿತಿ ತಿಳಿದ ಕುಶಾಲನಗರ ಪೊಲೀಸರು ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವಾ ತಂಡದ ಸದಸ್ಯರು ಹಾಗೂ ದುಬಾರೆ ರ‍್ಯಾಫ್ಟಿಂಗ್ ತಂಡದ ಸದಸ್ಯರು ನದಿಯಲ್ಲಿ ಹುಡುಕಾಟ ಆರಂಭಿಸಿದ್ದಾರೆ.
ಕಾವೇರಿ ನದಿ ತುಂಬಿ ಹರಿಯುತ್ತಿದ್ದು ನದಿಯ ಹರಿವಿನ ರಭಸ ಅಧಿಕವಾದ ಕಾರಣ ಪತ್ತೆ ಕಾರ್ಯಕ್ಕೆ ಅಡ್ಡಿ ಉಂಟಾಗಿದೆ. ಕಾರ್ಯಾಚರಣೆ ತಂಡದ ಸದಸ್ಯರು ತೆಪ್ಪದ ಕಂಡಿಯಿAದ ಮಾದಾಪಟ್ಟಣ, ಬೈಚನಹಳ್ಳಿ, ಕುಶಾಲನಗರ, ಕೂಡಿಗೆ, ಕಣಿವೆ ತನಕ ರ‍್ಯಾಪ್ಟರ್ ಬಳಸಿ ಕಾವೇರಿ ನದಿ ವ್ಯಾಪ್ತಿಯಲ್ಲಿ ಹುಡು ಕಾಟದಲ್ಲಿ ತೊಡಗಿಸಿಕೊಂಡಿದ್ದಾರೆ.
ನಾಪತ್ತೆಯಾದ ಗಿರೀಶ್ ಮಾಜಿ ಸೈನಿಕರಾಗಿದ್ದು ಕುಶಾಲನಗರ ತಾವರೆಕೆರೆ ಬಳಿ ಕಲ್ಯಾಣ ಮಂಟಪದಲ್ಲಿ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಸಂಜೆ ತನ್ನ ಮನೆಗೆ ಹಿಂತಿರುಗುವ ಸಂದರ್ಭ ಈ ಘಟನೆ ಸಂಭವಿಸಿದೆ. ನಾಪತ್ತೆಯಾಗಿರುವ ಗಿರೀಶ್ ೨೦೧೯ರಲ್ಲಿ ಸೇನೆಯಿಂದ ನಿವೃತ್ತರಾಗಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ಘಟನೆ ಬಗ್ಗೆ ದೂರು ದಾಖಲಾಗಿದ್ದು ಪತ್ತೆಗಾಗಿ ಕ್ರಮ ಕೈಗೊಂಡಿದ್ದಾರೆ.