ಸೋಮವಾರಪೇಟೆ, ಜೂ. ೧೯: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಅಮೃತ್-೨ ಯೋಜನೆಯು ಸೋಮವಾರಪೇಟೆ ಪಟ್ಟಣದಲ್ಲಿ ಪ್ರಗತಿಯಲ್ಲಿದ್ದು, ಶೇ. ೭೦ ರಷ್ಟು ಕಾಮಗಾರಿ ಪೂರ್ಣಗೊಂಡಿದೆ.
ಪ್ರಸಕ್ತ ವರ್ಷದ ಆಗಸ್ಟ್ ಒಳಗೆ ಇಡೀ ಯೋಜನೆಯ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯನಿರ್ವಹಿಸುತ್ತಿದ್ದು, ಆಗಸ್ಟ್ ಅಂತ್ಯದೊಳಗೆ ೧೭೦೦ ಮನೆಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ಕೈಗೊಂಡಿದೆ.
ಗ್ರಾಮೀಣ ಭಾಗದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆ ಈಗಾಗಲೇ ಪ್ರಗತಿಯಲ್ಲಿದ್ದು, ಪಟ್ಟಣವಾಸಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಬಹು ನಿರೀಕ್ಷಿತ ಯೋಜನೆಯಾಗಿರುವ ‘ಅಮೃತ್-೨ಗೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಚಾಲನೆ ನೀಡಿದ್ದು, ಕಾಮಗಾರಿ ನಿರೀಕ್ಷೆಯಂತೆ ಸಾಗಿದೆ.
ಯೋಜನೆಯ ಒಟ್ಟು ವೆಚ್ಚ ೧೫.೨೬ ಕೋಟಿ ನಿರೀಕ್ಷಿಸಲಾಗಿದೆ. ಇದರಲ್ಲಿ ಕೇಂದ್ರ ಸರ್ಕಾರ ಶೇ. ೫೦, ರಾಜ್ಯ ಸರ್ಕಾರ ಶೇ. ೪೦ ಹಾಗೂ ಸ್ಥಳೀಯ ಸಂಸ್ಥೆಗಳು ಶೇ. ೧೦ ಅನುದಾನ ಭರಿಸಬೇಕಿದ್ದು, ಕಳೆದ ಸಾಲಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ನಂತರ ಬಂದ ಕಾಂಗ್ರೆಸ್ ಸರ್ಕಾರ ಸೆಪ್ಟೆಂಬರ್‌ನಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿತ್ತು. ಪಟ್ಟಣದ ಯೋಜನೆಗೆ ಶಾಸಕ ಡಾ. ಮಂತರ್ ಗೌಡ ಚಾಲನೆ ನೀಡಿದ್ದರು.
ಅದರಂತೆ ಹಾರಂಗಿ ಹೊಳೆಯಿಂದ ಸೋಮವಾರಪೇಟೆಗೆ ನೀರು ಒದಗಿಸುವ ಸಂಬAಧ ತಯಾರಾದ ಯೋಜನೆಯಡಿ ಈಗಾಗಲೇ ೧೬.೫ ಕಿ.ಮೀ. ಪೈಪ್‌ಲೈನ್ ಅಳವಡಿಸಲಾಗಿದ್ದು, ಇನ್ನೂ ೧.೫ ಕಿ.ಮೀ. ನಷ್ಟು ಪೈಪ್‌ಲೈನ್ ಅಳವಡಿಸುವ ಕಾರ್ಯ ಬಾಕಿಯಿದೆ.
ಪಟ್ಟಣದಲ್ಲಿ ಎಲ್ಲಾ ಮನೆಗಳಿಗೆ ಪೈಪ್‌ಲೈನ್ ಸಂಪರ್ಕ ಕಲ್ಪಿಸುವ ಕೆಲಸವೂ ನಡೆಯುತ್ತಿದ್ದು, ಇದಕ್ಕಾಗಿ ಅಲ್ಲಲ್ಲಿ ರಸ್ತೆಗಳನ್ನು ಅಗೆದಿರುವುದರಿಂದ ಜನತೆಗೆ ಒಂದಿಷ್ಟು ಸಮಸ್ಯೆಯಾಗಿದೆ. ಪೈಪ್‌ಲೈನ್‌ಗಾಗಿ ರಸ್ತೆಗಳನ್ನು ಅಗೆದು ಮಣ್ಣು ಮುಚ್ಚಿದ್ದರೂ ಕೆಲವೆಡೆ ಮಳೆಯಿಂದಾಗಿ ಮಣ್ಣು೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಕುಸಿದು ಚರಂಡಿಗಳು ನಿರ್ಮಾಣವಾಗಿದೆ. ಹೀಗಾಗಿ ವಾಹನ ಚಾಲನೆಗೆ ಸಮಸ್ಯೆಯಾಗಿದ್ದು, ಪೈಪ್ ಅಳವಡಿಸಿದ ನಂತರ ತಕ್ಷಣ ಗುಂಡಿಗಳನ್ನು ಕಾಂಕ್ರಿಟ್ ಹಾಕಿ ಮುಚ್ಚಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ದೂರದೃಷ್ಟಿಯ ಯೋಜನೆ: ಪಟ್ಟಣದಲ್ಲಿ ಕಳೆದ ೪೦ ವರ್ಷಗಳ ಹಿಂದಿನಿAದ ಇರುವ ಜನಗಣತಿ, ಪ್ರಸ್ತುತದ ಜನಸಂಖ್ಯೆ, ಮುಂದಿನ ೨೦೩೬ನೇ ಇಸವಿಗೆ ಏರಿಕೆಯಾಗುವ ಜನಸಂಖ್ಯೆಗಳನ್ನು ಅಂದಾಜಿಸಿ, ಆ ಜನಸಂಖ್ಯೆಗೆ ಅನುಗುಣವಾಗಿ ಈ ಯೋಜನೆಯನ್ನು ವಿನ್ಯಾಸಿಸಿ ಅನುಷ್ಠಾನಗೊಳಿಸಲಾಗುತ್ತಿದೆ.
ಪಟ್ಟಣವು ತಾಲೂಕು ಕೇಂದ್ರವಾಗಿದ್ದು, ೨೦೧೧ರ ಜನಗಣತಿಯ ಪ್ರಕಾರ ಜನಸಂಖ್ಯೆಯು ೬೭೨೯ರಷ್ಟಿದೆ. ಪ್ರಸ್ತುತ ಪಟ್ಟಣದ ಜನಸಂಖ್ಯೆಯು ಸುಮಾರು ೬೯೦೦ ಆಗಿದ್ದು, ಕಳೆದ ೪೦ ವರ್ಷಗಳ ಜನಗಣತಿಯ ಪ್ರಕಾರ ಪಟ್ಟಣದ ಜನಸಂಖ್ಯೆ ಕೇವಲ ೪೪೪ ಹೆಚ್ಚಾಗಿರುತ್ತದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ೧೧ ವಾರ್ಡ್ಗಳಿದ್ದು, ಪ್ರಸ್ತುತ ದುದ್‌ಗಲ್ ಹೊಳೆಯಿಂದ ೮೦ ಲಕ್ಷ ಲೀಟರ್ ಸಾಮರ್ಥ್ಯದ ನೀರು ಸರಬರಾಜು ಯೋಜನೆಯನ್ನು ೧೯೮೭ರಲ್ಲಿ ಚಾಲನೆಗೊಳಿಸಲಾಗಿದೆ.
ಪಟ್ಟಣ ಅಭಿವೃದ್ಧಿಯಾದಂತೆ ಹೊಸದಾಗಿ ಹಾರಂಗಿ ನದಿ ಮೂಲದಿಂದ ಸೋಮವಾರಪೇಟೆ ಪಟ್ಟಣ ಹಾಗೂ ಸುತ್ತಲಿನ ೫ ಹಳ್ಳಿಗಳಿಗೆ ಕ್ರಮವಾಗಿ ದಿನಂಪ್ರತಿ ತಲಾ ೭೦ ಲೀಟರ್ ಹಾಗೂ ತಲಾ ೨೫ ಲೀಟರ್‌ನಂತೆ ೨೦೩೬ನೇ ಇಸವಿಯ ೭೯೭೦ ಜನಸಂಖ್ಯೆಗೆ ೧೦.೮೦ ಲಕ್ಷ ಲೀಟರ್ ನೀರಿನ ಅವಶ್ಯಕತೆಯಿದೆ. ಈ ಬೇಡಿಕೆಯನ್ನು ಪೂರೈಸುವ ಸಾಮರ್ಥ್ಯಕ್ಕೆ ತಕ್ಕಂತೆ ಅಮೃತ್-೨ ಯೋಜನೆಯನ್ನು ವಿನ್ಯಾಸಿಸಿ ಚಾಲನೆಗೊಳಿಸಲಾಗುತ್ತಿದೆ.
ಪ್ರಸ್ತುತ ಪಟ್ಟಣ ಪಂಚಾಯಿತಿಯಲ್ಲಿ ಹಾರಂಗಿ ಮತ್ತು ದುದ್‌ಗಲ್ ಹೊಳೆಯಿಂದ ನೀರು ಸರಬರಾಜು ಮಾಡುವ ೨ ಯೋಜನೆಗಳು ಚಾಲನೆಯಲ್ಲಿವೆ. ಈ ನಡುವೆ ೫ ಹಳ್ಳಿಗಳಿಗೆ ಜಲಜೀವನ್ ಮಿಷನ್ ಯೋಜನೆಯಡಿ ನೀರು ಸರಬರಾಜು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಪಟ್ಟಣದ ಹಾಲಿ ನೀರು ಸರಬರಾಜು ಯೋಜನೆಯ ನಿರ್ವಹಣೆಯನ್ನು ಪಟ್ಟಣ ಪಂಚಾಯಿತಿ ವತಿಯಿಂದ ಮಾಡಲಾಗುತ್ತಿದ್ದು, ಪ್ರಸ್ತುತ ಪಟ್ಟಣದ ನೀರಿನ ಬೇಡಿಕೆಯು ದಿನಂಪ್ರತಿ ತಲಾ ೧೩೫ ಲೀಟರ್‌ನಂತೆ ಸುಮಾರು ೧೨.೦ ಲಕ್ಷ ಲೀಟರ್‌ಗಳಷ್ಟಿದೆ.
ಹಾಲಿ ಯೋಜನೆಗಳ ಘಟಕಗಳು ಶಿಥಿಲಾವಸ್ಥೆಯಲ್ಲಿರುವುದರಿಂದ ಪಟ್ಟಣಕ್ಕೆ ಸಮರ್ಪಕವಾಗಿ ನೀರು ಸರಬರಾಜು ಮಾಡಲು ಅಸಾಧ್ಯವಾಗಿದೆ. ಈ ಹಿನ್ನೆಲೆ ಅಮೃತ್-೨ ಯೋಜನೆಯಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಒದಗಿಸುವ ಯೋಜನೆಗೆ ಚಾಲನೆ ನೀಡಲಾಗಿದೆ.
ಯೋಜನೆಯ ಧ್ಯೇಯ: ಕೇಂದ್ರ ಪುರಸ್ಕೃತ ಅಮೃತ್-೨ ಯೋಜನೆಯನ್ನು ಕೇಂದ್ರ ಸರ್ಕಾರವು ದಿನಾಂಕ: ೦೧-೧೦-೨೦೨೧ರಂದು ಪ್ರಧಾನ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಉದ್ಘಾಟಿಸಿದ್ದು, ಯೋಜನೆಯ ಕಾರ್ಯ ಮಾರ್ಗಸೂಚಿಗಳನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಬಿಡುಗಡೆಗೊಳಿಸಿದೆ.
ಅದರಂತೆ ಒಂದು ಲಕ್ಷ ಜನಸಂಖ್ಯೆಗಿAತ ಕಡಿಮೆ ಇರುವ ನಗರ ಸ್ಥಳೀಯ ಸಂಸ್ಥೆಗಳಿಗೆ ನೀರು ಸರಬರಾಜು ಕಲ್ಪಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅಮೃತ್-೨ ಕಾರ್ಯಕ್ರಮದ ಮಾರ್ಗಸೂಚಿಯನ್ವಯ ಸಾರ್ವತ್ರಿಕವಾಗಿ ಎಲ್ಲಾ ಮನೆಗಳಿಗೆ ಕೊಳವೆ ಮುಖಾಂತರ ನೀರು ಪೂರೈಕೆ ಮತ್ತು ಮನೆಗಳಿಗೆ ಕ್ರಿಯಾತ್ಮಕ ನಳ ಸಂಪರ್ಕ ಒದಗಿಸುವುದು, ನೀರಿನ ಸಂಗ್ರಹಣೆಯನ್ನು ಹೆಚ್ಚಿಸಲು ಜಲಮೂಲಗಳ ಪುನರುಜ್ಜೀವನ ಮತ್ತು ಹಸಿರು ಸ್ಥಳಗಳನ್ನು ಅಭಿವೃದ್ಧಿಪಡಿಸಿ ನಗರಗಳ ಸೌಲಭ್ಯದ ಮೌಲ್ಯ ಹೆಚ್ಚಿಸುವುದು ಮುಖ್ಯ ಉದ್ದೇಶವಾಗಿದೆ.
ಈ ಯೋಜನೆಯಡಿ ಸೋಮವಾರಪೇಟೆ ಪಟ್ಟಣಕ್ಕೆ ಹಾರಂಗಿ ನದಿ ಮೂಲದಿಂದ ಹಾಲಿ ಇರುವ ನೀರು ಸರಬರಾಜು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ೨೦೨೫ನೇ ಸಾಲಿಗೆ ಎಲ್ಲಾ ಮನೆಗಳಿಗೆ ನೀರು ಸರಬರಾಜು ವ್ಯವಸ್ಥೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿAದ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ಈಗಾಗಲೇ ಹೊರಭಾಗದ ಕಾಮಗಾರಿಯಡಿ ಪೈಪ್‌ಲೈನ್ ಅಳವಡಿಕೆ ಮಾಡಲಾಗಿದೆ. ಪಟ್ಟಣದ ೧೭೦೦ ಮನೆಗಳಿಗೆ ಪ್ರತ್ಯೇಕವಾಗಿ ಪೈಪ್‌ಲೈನ್ ಮಾಡಿ ನಲ್ಲಿ ಸಂಪರ್ಕ ಒದಗಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದರಲ್ಲಿ ೪೦೦ ಮನೆಗಳಿಗೆ ಈಗಾಗಲೇ ಪೈಪ್ ಲೈನ್ ಅಳವಡಿಸಿದ್ದು, ೧೩೦೦ ಮನೆಗಳಿಗೆ ಸಂಪರ್ಕ ಕಲ್ಪಿಸುವ ಕೆಲಸ ಪ್ರಗತಿಯಲ್ಲಿದೆ.
ಮುಂದುವರೆದು ಈ ಯೋಜನೆಯಡಿ ಜಾಕ್ವೆಲ್ ಮತ್ತು ಪಂಪ್‌ಹೌಸ್‌ನಲ್ಲಿ ೩೦ ಹೆಚ್.ಪಿ. ಸಾಮರ್ಥ್ಯದ ಪಂಪಿAಗ್ ಮೆಷಿನರಿ ಅಳವಡಿಸುವುದು, ಯಡವನಾಡು ಗ್ರಾಮದಲ್ಲಿರುವ ಮಧ್ಯಂತರ ಪಂಪ್‌ಹೌಸ್‌ನಲ್ಲಿ ೧೦೦ ಹೆಚ್.ಪಿ. ಸಾಮರ್ಥ್ಯದ ಪಂಪಿAಗ್ ಮೆಷಿನ್ ಅಳವಡಿಕೆ, ಬೇಳೂರಿನಲ್ಲಿರುವ ೧೨ ಲಕ್ಷ ಲೀಟರ್ ಸಾಮರ್ಥ್ಯದ ನೀರು ಶುದ್ದೀಕರಣ ಘಟಕ ಪುನರುಜ್ಜೀವನ, ಬೇಳೂರಿನಲ್ಲಿ ಪಟ್ಟಣದವರೆಗೆ ಹೆಚ್‌ಡಿಪಿಇ ಗುರುತ್ವಾಕರ್ಷಣಾ ಕೊಳವೆ ಪೈಪ್‌ಗಳ ಅಳವಡಿಕೆ, ಪಟ್ಟಣದ ಪಂಪ್‌ಹೌಸ್‌ನಲ್ಲಿ ೨೫ ಹೆಚ್.ಪಿ. ಸಾಮರ್ಥ್ಯದ ಮೋಟಾರ್ ಅಳವಡಿಕೆ, ಹಾಲಿ ಇರುವ ಘಟಕಗಳ ಅಭಿವೃದ್ಧಿ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಈ ಯೋಜನೆ ಒಳಗೊಂಡಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಸನ್ನ ಅವರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.
ಮುಂದಿನ ೩೦ ವರ್ಷಗಳ ದೂರದೃಷ್ಟಿಯ ಯೋಜನೆ ಇದಾಗಿದ್ದು, ಅಮೃತ್-೨ ಯೋಜನೆಯು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳಿಗೆ ವರದಾನವಾಗಿದೆ. ನಿರೀಕ್ಷಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಜವಾಬ್ದಾರಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮೇಲಿದೆ. - ವಿಜಯ್ ಹಾನಗಲ್