ಗೋಣಿಕೊಪ್ಪಲು, ಜೂ. ೧೯: ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಕಳ್ಳತನ ಹೆಚ್ಚಾಗುತ್ತಿದ್ದು, ಕಳ್ಳರು ಸುಲಭವಾಗಿ ಸಿಗುವ ಮುಖ್ಯ ರಸ್ತೆಯ ಬದಿಯಲ್ಲಿರುವ ಅಂಗಡಿ ಮಳಿಗೆಗಳು ಸೇರಿದಂತೆ ಕಾಫಿ, ಕರಿಮೆಣಸು ಶೇಖರಿಸಿಡುವ ಅಂಗಡಿಗಳನ್ನೇ ಗುರಿಯಾಗಿರಿಸಿಕೊಂಡು ಕಳ್ಳತನಕ್ಕೆ ಮುಂದಾಗುತ್ತಿರುವ ಆತಂಕಕಾರಿ ಬೆಳವಣಿಗೆ ಕಂಡು ಬಂದಿದೆ.

ಇತ್ತೀಚೆಗೆ ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪ - ತಿತಿಮತಿ ಮುಖ್ಯ ರಸ್ತೆಯ ದೇವರಪುರ ಪಟ್ಟಣದಲ್ಲಿ ಕೆಲವು ಅಂಗಡಿ ಮುಂಗಟ್ಟುಗಳಿಗೆ ನುಗ್ಗಿದ ಕಳ್ಳರು ಸಿಕ್ಕಿದ ಹಣ ಹಾಗೂ ಪ್ರಮುಖ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.

ಅಲ್ಲದೆ ಕರಿಮೆಣಸು ಖರೀದಿಸುವ ಅಂಗಡಿಗೆ ನುಗ್ಗಿದ ಕಳ್ಳರು ಅಲ್ಲಿದ್ದ ಹತ್ತು ಸಾವಿರ ನಗದನ್ನು ದೋಚಿದ್ದಾರೆ. ಸಮೀಪದಲ್ಲಿದ್ದ ಬೆಲೆಬಾಳುವ ಕರಿಮೆಣಸನ್ನು ಕದ್ದೊಯ್ಯುವ ಪ್ರಯತ್ನ ಮಾಡಿದರಾದರೂ ಕೊನೆಘಳಿಗೆಯಲ್ಲಿ ಈ ಯೋಜನೆಯನ್ನು ಕಳ್ಳರು ಕೈಬಿಟ್ಟಿದ್ದಾರೆ. ಇದರಿಂದ ಪಟ್ಟಣದಲ್ಲಿ ಸಂಭವಿಸಬಹುದಾದ ಬಹುದೊಡ್ಡ ಕಳ್ಳತನ ವಿಫಲವಾದಂತಾಗಿದೆ. ಕಳ್ಳತನದ ಸಂದರ್ಭ ಲಭ್ಯವಾದ ಸಿಸಿ ಕ್ಯಾಮೆರಾ ಫೂಟೇಜ್‌ನಲ್ಲಿ ಕಳ್ಳರ ಕೈಚಳಕ ಕಂಡು ಬಂದಿದೆ.

ಸುಲಭ ಮಾರ್ಗದಲ್ಲಿ ಹಣ ಸಂಪಾದಿಸುವ ಸಲುವಾಗಿ ಕಳ್ಳತನಕ್ಕಿಳಿದಿರುವ ಕೆಲವು ತಂಡಗಳು ಓಮಿನಿ ಕಾರಿನಲ್ಲಿ ನಡುರಾತ್ರಿಯ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ನಂತರ ಕೆಲವು ಅಂಗಡಿಗಳನ್ನು ಗುರಿಯಾಗಿರಿಸಿಕೊಂಡು ಯಾರಿಗೂ ಸಂಶಯ ಬಾರದ ರೀತಿಯಲ್ಲಿ ಮುಂಜಾನೆ ವೇಳೆ ಅಂಗಡಿಗಳಿಗೆ ನುಗ್ಗಿ ಅಲ್ಲಿರುವ ನಗದು ಹಾಗೂ ಇತರ ಅಮೂಲ್ಯ ವಸ್ತುಗಳನ್ನು ದೋಚುತ್ತಿರುವುದು ಇತ್ತೀಚೆಗೆ ವ್ಯಾಪಕವಾಗಿ ನಡೆಯುತ್ತಿದೆ. ಈ ಬೆಳವಣಿಗೆಯಿಂದ ನಾಗರಿಕರು ಆತಂಕಕ್ಕೀಡಾಗಿದ್ದಾರೆ. ದೇವರಪುರ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಸಾಕಷ್ಟು ಕಾಫಿ ಬೆಳೆಗಾರರು ಹಾಗೂ ರೈತರ ಮನೆಗಳಿದ್ದು ಇವುಗಳ ಮೇಲೆಯೂ ಕಳ್ಳರು ಕಣ್ಣಿಟ್ಟಿರುವುದಾಗಿ ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ.

ಮುಖ್ಯ ರಸ್ತೆಯ ಅಂಗಡಿ ಮಳಿಗೆಗಳಲ್ಲಿ ಕಳ್ಳತನಕ್ಕೆ ಪ್ರಯತ್ನ ಮಾಡಿರುವ ಹಿನ್ನೆಲೆ ಎಚ್ಚೆತ್ತುಕೊಂಡ ಗೋಣಿಕೊಪ್ಪ ಪೊಲೀಸರು ಲಭ್ಯವಿರುವ ಸಿಸಿ ಕ್ಯಾಮೆರಾಗಳ ಫೂಟೇಜ್‌ಗಳನ್ನು ಕಲೆಹಾಕುತ್ತಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ಲಭ್ಯವಾಗಿರುವ ಮಾಹಿತಿಯಂತೆ ೫ ರಿಂದ ೬ ಜನರ ತಂಡ ಈ ಕಳ್ಳತನಕ್ಕೆ ಪ್ರಯತ್ನ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇದರ ಸಹಾಯ ಪಡೆದ ಪೊಲೀಸರು ಬೇರೆ ಬೇರೆ ರೀತಿಯಲ್ಲಿ ತನಿಖೆ ಕೈಗೊಂಡಿದ್ದಾರೆ.

-ಹೆಚ್.ಕೆ. ಜಗದೀಶ್