ಮಡಿಕೇರಿ, ಜೂ. ೧೦: ವೀರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮದೆ ಗ್ರಾಮದ ಅಮ್ಮಂಗೇರಿಯ ಸುಮಾರು ೪೦ಕ್ಕೂ ಅಧಿಕ ನಿವಾಸಿಗಳು, ಗ್ರಾಮ ಅಭಿವೃದ್ಧಿ ಪ್ರತಿನಿಧಿಗಳ ಸಂಘ, ಅಮ್ಮಂಗೇರಿ ಯುವಪಡೆ ನಿಯೋಗದಿಂದ ವಿವಿಧ ಬೇಡಿಕೆ ಕುರಿತು ಶಾಸಕ ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು.

ಇಸ್ಮಾಯಿಲ್ ಹಾಗೂ ಡಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್ ಅವರ ನೇತೃತ್ವದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರನ್ನು ಅವರ ಗೃಹ ಕಚೇರಿಯಲ್ಲಿ ಸುಮಾರು ೩೦ ನಿಮಿಷಗಳ ಕಾಲ ಭೇಟಿಯಾಗಿ ಹಲವು ಸಮಸ್ಯೆಗಳನ್ನು ಗಮನಕ್ಕೆ ತಂದು ಸರಿಪಡಿಸಲು ವಿನಂತಿಸಲಾಯಿತು.

ಪ್ರಮುಖವಾಗಿ ಈ ಭಾಗಕ್ಕೆ ಮೂಲಭೂತ ಸೌಕರ್ಯಗಳಾದ ರಸ್ತೆ, ವಿದ್ಯುತ್, ಕುಡಿಯುವ ನೀರು, ಬೀದಿದೀಪ, ಬಿ.ಎಸ್.ಎನ್.ಎಲ್. ನೆಟ್‌ವರ್ಕ್, ಅಂಗನವಾಡಿ ಹಾಗೂ ಸಮುದಾಯ ಭವನದ ಕುರಿತು ಶಾಸಕರಲ್ಲಿ ಮನವಿ ಸಲ್ಲಿಸಿದರು.

ಇದಕ್ಕೆ ಪೂರಕವಾಗಿ ಸ್ಪಂದಿಸಿದ ಶಾಸಕರು ಆದಷ್ಟು ಶೀಘ್ರದಲ್ಲಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭ ಗ್ರಾಮದ ಹಲವರು ಪಾಲ್ಗೊಂಡಿದ್ದರು.