ಶನಿವಾರಸಂತೆ, ಜೂ. ೧೦: ಸಮೀಪದ ಗಡಿಭಾಗ ಚಂಗಡಹಳ್ಳಿಯ ವೀರಶೈವ ವಿರಕ್ತ ಖಾಸಾ ಮಠದ ತೋಟದಿಂದ ಅನಧಿಕೃತವಾಗಿ ನೂರಕ್ಕೂ ಅಧಿಕ ಸಿಲ್ವರ್ ಮರಗಳನ್ನು ಕಡಿದಿರುವುದಾಗಿ ಮಠದ ಭಕ್ತರು ಆರೋಪಿಸಿದ್ದಾರೆ.

ಮಠದ ಭಕ್ತರಾದ ಎಂ.ಎA. ಹಾಲಪ್ಪ, ಎಚ್.ಎಸ್. ಬಸವಕುಮಾರ್, ಕೆ.ಎಂ. ಸಂತೋಷ್, ಸಿ.ವಿ. ದೇವರಾಜ್, ಸಿ.ಎನ್. ಗಂಗಮ್ಮ, ಚಂದ್ರಶೇಖರ್, ತೀರ್ಥಾಂಬಿಕೆ, ಸಿ.ಎಂ. ಸೌಭಾಗ್ಯಾ, ಎಂ.ಡಿ. ಶೋಭಾ ಪತ್ರಿಕಾ ಹೇಳಿಕೆ ನೀಡಿ, ಮಠದ ಸಮಿತಿಗೆ ರಾಜ್ಯ ಸರ್ಕಾರದಿಂದ ನೇಮಕಗೊಂಡಿರುವ ಚಿತ್ರದುರ್ಗದ ಬಸವಕುಮಾರ್ ಅವರ ಕುಮ್ಮಕ್ಕಿನಿಂದ ಮರಗಳನ್ನು ಕಡಿಯಲಾ ಗಿದೆ. ಸರ್ವೋಚ್ಛ ನ್ಯಾಯಾಲಯ ಮಠದ ಉಸ್ತುವಾರಿ ನೋಡಿಕೊಳ್ಳಲು ರಾಜ್ಯ ಸರ್ಕಾರವನ್ನು ನೇಮಿಸಿರುವುದರಿಂದ ಮಠದಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯ ಬೇಕಾದರೆ ಪತ್ರಿಕಾ ಪ್ರಕಟಣೆ ಹೊರಡಿಸಿ, ಬ್ಯಾಲೆಟ್ ಟೆಂಡರ್ ಆಗಬೇಕು.ಆದರೆ, ಪತ್ರಿಕಾ ಪ್ರಕಟಣೆಯಾಗಲೀ ಟೆಂಡರ್ ಆಗಲಿ ಮಾಡಿರುವುದಿಲ್ಲ.ಮಠದ ಉಸ್ತುವಾರಿ ನೋಡಿಕೊಳ್ಳಲು ನೇಮಕಗೊಂಡಿರುವ ಮೋಕ್ಷಪತಿ ಸ್ವಾಮೀಜಿ, ಶಶಿಧರ್, ಸನಥ್ ಕುಮಾರ್ ಅವರುಗಳು ಕಾನೂನು ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ವೀರಶೈವ ವಿರಕ್ತ ಬೃಹನ್ಮಠದ ಆಸ್ತಿಯನ್ನು ಸಂರಕ್ಷಣೆ ಮಾಡಬೇಕು. ಆದರೆ, ನಿರ್ದೇಶನ ಉಲ್ಲಂಘನೆ ಮಾಡಿ ಮರ ಕಡಿಯಲಾಗಿದೆ. ಆಸ್ತಿ ಪರಭಾರೆ ಮಾಡಲಾಗಿದೆ. ಮಠದ ಒಳಗೆ ಇದ್ದಂತಹ ಬೆಳ್ಳಿ ಪೂಜಾ ಸಾಮಾಗ್ರಿಗಳು, ಹಾಗೂ ಪಂಪ್ ಸೆಟ್ ಕಳವು ಆಗಿದೆ. ಈ ವಿಚಾರವಾಗಿ ಅರಣ್ಯ ಇಲಾಖೆ, ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿರುವ ಮಠದ ಭಕ್ತರು ರಾಜ್ಯ ಸರ್ಕಾರದಿಂದ ಸಮಿತಿಗೆ ನೇಮಕಗೊಂಡಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಿರುತ್ತಾರೆ.