ಮಡಿಕೇರಿ, ಜೂ. ೧೦: ದೇಶದ ಪ್ರಜೆಗಳಲ್ಲಿ ದೇಶದ ಮೇಲಿನ ಅಭಿಮಾನ ಕಡಿಮೆಯಾದರೆ ದೇಶಕ್ಕೆ ಅಪಾಯ ಎಂದು ಕೊಡಗು ಜನಪದ ಪರಿಷತ್ ಅಧ್ಯಕ್ಷರಾದ ಬಿ.ಜಿ. ಅನಂತಶಯನ ಆತಂಕ ವ್ಯಕ್ತಪಡಿಸಿದರು.

ನಗರದ ಪತ್ರಿಕಾ ಭವನ ಸಭಾಂಗಣದಲ್ಲಿ ಚಿ.ನಾ. ಸೋಮೇಶ್ ರಚಿತ ಭಾರತ ಸಿಂಧೂರ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು. ಪ್ರತಿಯೊಬ್ಬರು ದೇಶಭಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದ ಅವರು ಪ್ರತಿಯೊಬ್ಬರನ್ನು ಪ್ರೀತಿಯಿಂದ ಕಾಣುವ ಗುಣವನ್ನು ಹೊಂದಿರಬೇಕು ಎಂದರು.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಘಟನೆಯನ್ನು ಪ್ರಸ್ತಾಪಿಸಿದ ಅವರು, ಆಹ್ವಾನ ನೀಡದಿದ್ದರೂ ಕ್ರಿಕೆಟ್ ಆಟಗಾರರನ್ನು ನೋಡಲು ಸಾವನ್ನು ಲೆಕ್ಕಿಸದೆ ನುಗ್ಗುವವರು ಕೆಲವೆಡೆ ಆಪರೇಷನ್ ಸಿಂಧೂರ ವಿಜಯೋತ್ಸವಕ್ಕೆ ಆಹ್ವಾನ ನೀಡಿದರೂ ಕೂಡ ಅಷ್ಟೊಂದು ಸಂಖ್ಯೆಯಲ್ಲಿ ಪಾಲ್ಗೊಳ್ಳಲಿಲ್ಲ. ಆಟಗಾರರನ್ನು ಸ್ವಾಗತಿಸಲು ಮುಂದಾದವರು ದೇಶಕ್ಕಾಗಿ ದುಡಿದ ಒಬ್ಬ ಸೈನಿಕನ ಮನೆಗೂ ಭೇಟಿ ನೀಡಲಿಲ್ಲ. ಕ್ರಿಕೆಟ್ ಬಗ್ಗೆ ಇರುವ ಆಸಕ್ತಿ ದೇಶದ ಬಗ್ಗೆ ಇಲ್ಲವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಅನಂತಶಯನ ಅವರು, ಪ್ರತಿಯೊಬ್ಬರೂ ದೇಶದ ಬಗ್ಗೆ ಪ್ರೀತಿ, ಗೌರವ ಬೆಳೆಸಿಕೊಳ್ಳಬೇಕು. ದೇಶ ಮೊದಲು ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕೆಂದು ಕರೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಸಾಹಿತಿ ರಾಜಲಕ್ಷಿö್ಮ ಗೋಪಾಲಕೃಷ್ಣ ಅವರು ಮಾತನಾಡಿ, ಭಾರತ ಸಿಂಧೂರ ಕೃತಿಯು ಯುವ ಜನಾಂಗಕ್ಕೆ ಒಳ್ಳೆಯ ಸಂದೇಶವನ್ನು ನೀಡುವ ಪುಸ್ತಕವಾಗಿದೆ ಎಂದು ಅಭಿಪ್ರಾಯಪಟ್ಟರು.

ಕೃತಿಯನ್ನು ಲೋಕಾರ್ಪಣೆಗೊಳಿಸಿದ ನಿವೃತ್ತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಚೊಟ್ಟಕೊರಿಯಂಡ ಕೆ. ಬಾಲಕೃಷ್ಣ ಅವರು ಮಾತನಾಡಿ, ಭಾರತ ಸಿಂಧೂರ ಕೃತಿ ಎಲ್ಲರೂ ಓದಬೇಕಾದ ಪುಸ್ತಕವಾಗಿದ್ದು, ದೇಶಭಕ್ತರ ಬಗ್ಗೆ ಉಲ್ಲೇಖವಿರುವ ಈ ಪುಸ್ತಕ ಯುವ ಜನತೆಗೆ ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದರು. ದೈನಂದಿನ ಪ್ರಾರ್ಥನೆ ವೇಳೆ ಪ್ರತಿಯೊಬ್ಬರೂ ಸೈನಿಕರ ಸೇವೆಯನ್ನು ಸ್ಮರಿಸಬೇಕೆಂದು ನುಡಿದರು.

ಅತಿಥಿಯಾಗಿದ್ದ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಮಾತನಾಡಿ, ವಿಶಿಷ್ಟವಾದ ಸಂಸ್ಕೃತಿ ಹೊಂದಿರುವ ಭಾರತ ದೇಶದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಬದುಕಬೇಕು. ದೇಶದ್ರೋಹದ ಕೆಲಸವನ್ನು ಯಾರೂ ಮಾಡಬಾರದು. ಭಾರತೀಯ ಎಂಬ ಹೆಮ್ಮೆ ಎಲ್ಲರಲ್ಲಿರಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕೃತಿಯ ಲೇಖಕ ಚಿ.ನಾ. ಸೋಮೇಶ್ ಮಾತನಾಡಿ, ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಬಳಿಕ ಕುಗ್ಗಿಹೋಗಿದ್ದ ಹೃದಯಗಳೆಲ್ಲವೂ ಹಿಗ್ಗುವಂತಾಗಿದೆ. ಭಾರತದ ಸೈನಿಕರ ಶಕ್ತಿ ಏನೆಂಬುದು ಎಲ್ಲರಿಗೂ ತಿಳಿಯುವಂತಾಗಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಅತಿಥಿಗಳಾಗಿ ದಂಡಿನ ಮಾರಿಯಮ್ಮ ದೇವಾಲಯದ ಅರ್ಚಕ ಜಿ.ಎ. ಉಮೇಶ್, ನಿವೃತ್ತ ಹೈಕೋರ್ಟ್ ಉದ್ಯೋಗಿ ಸುಧೀಂದ್ರ ಡಿ. ತಿಳಗುಳ್, ಉದ್ಯಮಿ ಹೀರಾನಂದ ಜಿ. ಕೃಷ್ಣಾನಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಮಡಿದವರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ರಾಜಲಕ್ಷಿö್ಮ ಗೋಪಾಲಕೃಷ್ಣ, ಚೊಟ್ಟಕೊರಿಯಂಡ ಕೆ. ಬಾಲಕೃಷ್ಣ, ಜಿ.ಎ. ಉಮೇಶ್, ಸುಧೀಂದ್ರ ಡಿ. ತಿಳಗುಳ್, ಹೀರಾನಂದ ಜಿ. ಕೃಷ್ಣಾನಿ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ವೀರಾಜಪೇಟೆ ರೋಟರಿ ಶಾಲೆಯ ಪ್ರಾಂಶುಪಾಲೆ ವಿಶಾಲಕ್ಷಿ ನಿರೂಪಿಸಿದರು. ಉದ್ಘಾಟನೆ ವೇಳೆ ಸಂತೋಷ್ ಭಟ್ ವೇದಮಂತ್ರ ಪಠಿಸಿದರು. ಡಿ.ಡಿ. ಯಶಿಕ ದೇಶಭಕ್ತಿ ಗೀತೆ ಹಾಡಿದರು. ಪವನ್ ಸ್ವಾಗತಿಸಿ, ಚಿ.ನಾ. ಸೋಮೇಶ್ ವಂದಿಸಿದರು.