ಗೋಣಿಕೊಪ್ಪಲು, ಮೇ ೨೯: ನೂತನ ತಾಲೂಕಿಗೊಂದು ಮಿನಿ ವಿಧಾನ ಸೌಧದ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು, ಪ್ರಸ್ತುತ ವರ್ಷದಲ್ಲಿ ರಾಜ್ಯದಲ್ಲಿ ೮ ತಾಲೂಕಿಗೆ ಮಾತ್ರ ಅನುದಾನ ಮಂಜೂರಾಗಿದೆ. ಇದರಲ್ಲಿ ಪೊನ್ನಂಪೇಟೆ ನೂತನ ತಾಲೂಕು ಸೇರಿಸುವಲ್ಲಿ ಶಾಸಕ ಪೊನ್ನಣ್ಣ ಯಶಸ್ವಿಯಾಗಿದ್ದು ಮಿನಿ ವಿಧಾನಸೌಧ ಕಟ್ಟಡದ ಕಾಮಗಾರಿ ಸದ್ಯದಲ್ಲಿಯೇ ಪ್ರಾರಂಭಗೊಳ್ಳಲಿದೆ.
ಪೊನ್ನAಪೇಟೆ ನೂತನ ತಾಲೂಕಿಗೆ ಮಿನಿ ವಿಧಾನಸೌಧಕ್ಕೆ ಬೇಕಾದ ಅನುದಾನವನ್ನು ಮಂಜೂರು ಮಾಡಿಸುವಲ್ಲಿ ಶಾಸಕ ಪೊನ್ನಣ್ಣ ಯಶಸ್ವಿಯಾಗಿದ್ದಾರೆ. ಹಲವು ವರ್ಷಗಳಿಂದ ಮಿನಿ ವಿಧಾನಸೌಧದ ಕಟ್ಟಡ ಚರ್ಚೆ ಇತ್ತಾದರೂ ಅನುದಾನ ಮಾತ್ರ ಮಂಜೂರಾತಿಯಾಗಿರಲಿಲ್ಲ. ಇದೀಗ ಪೊನ್ನಣ್ಣನವರು ಅನುದಾನ ತರುವಲ್ಲಿ ವಿಶೇಷ ಆಸಕ್ತಿ ವಹಿಸಿದ್ದ ಪರಿಣಾಮ ಸದ್ಯದಲ್ಲಿಯೇ ಕಟ್ಟಡ ಕಾಮಗಾರಿ ಆರಂಭಗೊಳ್ಳಲಿದೆ.
ಶಾಸಕರ ವಿಶೇಷ ಆಸಕ್ತಿಯಿಂದ ಸರ್ಕಾರದ ವತಿಯಿಂದ ರೂ. ೮.೫೦ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಮಿನಿ ವಿಧಾನ ಸೌಧವು ಪ್ರಸ್ತುತವಿರುವ ತಹಶೀಲ್ದಾರ್ ಕಚೇರಿಯಲ್ಲಿಯೇ ನೆಲೆ ನಿಲ್ಲಲಿದೆ. ಕೆಲವೇ ದಿನಗಳಲ್ಲಿ ತಹಶೀಲ್ದಾರ್ ಕಚೇರಿಯು ಸಮೀಪದ ಐಟಿಐ ಕಾಲೇಜಿನ ಆವರಣಕ್ಕೆ ಸ್ಥಳಾಂತರವಾಗಲಿದ್ದು ಕಾಮಗಾರಿ ಮುಗಿಯುವವರೆಗೂ ತಹಶೀಲ್ದಾರ್ ಕಚೇರಿಗಳ ಕೆಲಸ ಕಾರ್ಯಗಳು ಇಲ್ಲಿಯೇ ನಡೆಯಲಿವೆ.
ಈಗಾಗಲೇ ತಾಲೂಕು ಆಡಳಿತದ ಕಡತ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳನ್ನು ನೂತನ ಕಚೇರಿಗೆ ಸ್ಥಳಾಂತರ ಮಾಡಲು ಯೋಜನೆ ರೂಪಿಸಲಾಗಿದ್ದು ಸದ್ಯದಲ್ಲಿಯೇ ಪ್ರಸ್ತುತವಿರುವ ಕಚೇರಿಯ ಕಡತಗಳು ಸೇರಿದಂತೆ ಕಂಪ್ಯೂಟರ್ ಹಾಗೂ ಇನ್ನಿತರ ಸಾಮಗ್ರಿಗಳು ಸ್ಥಳಾಂತರವಾಗಲಿದೆ.
ಕಳೆದ ನಾಲ್ಕು ವರ್ಷಗಳಿಂದ ನೂತನ ಮಿನಿ ವಿಧಾನಸೌಧದ ನಿರ್ಮಾಣಕ್ಕೆ ಅಗತ್ಯ ನಿವೇಶನಗಳನ್ನು ಪರಿಶೀಲಿಸಲಾಗುತ್ತಿತ್ತು. ಅಂತಿಮ ವಾಗಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ತಾಲೂಕು
(ಮೊದಲ ಪುಟದಿಂದ) ಆಡಳಿತದ ಕಚೇರಿಯ ಸುಮಾರು ೨ ಎಕರೆ ವಿಸ್ತೀರ್ಣದ ಜಾಗದಲ್ಲಿಯೇ ಮಿನಿ ವಿಧಾನ ಸೌಧ ನಿರ್ಮಾಣ ಮಾಡಲು ಮುಂದಾಗಲಾಗಿದೆ.
ನೂತನ ತಾಲೂಕು ಅನುಷ್ಠಾನಗೊಳ್ಳಲು ಈ ಹಿಂದಿನ ಜನಪ್ರತಿನಿಧಿಗಳು, ನೂರಾರು ಸಂಘ - ಸಂಸ್ಥೆಗಳು ಸೇರಿದಂತೆ ಜಿಲ್ಲಾಡಳಿತ ವಿಶೇಷ ಆಸಕ್ತಿ ವಹಿಸಿತ್ತು. ನಂತರದ ಬೆಳವಣಿಗೆಯಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಶಾಸಕ ಎ.ಎಸ್. ಪೊನ್ನಣ್ಣ ಅನುದಾನವನ್ನು ಮಂಜೂರು ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದೀಗ ಹಲವು ವರ್ಷಗಳ ಮಿನಿ ವಿಧಾನಸೌಧದ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಮಿನಿ ವಿಧಾನಸೌಧದಲ್ಲಿ ತಾಲೂಕು ಆಡಳಿತ ಸೇರಿದಂತೆ ವಿವಿಧ ಇಲಾಖೆಯ ಕಚೇರಿಗಳು ಕೆಲಸ ನಿರ್ವಹಿಸಲಿವೆ.
-ವಿಶೇಷ ವರದಿ: ಹೆಚ್.ಕೆ. ಜಗದೀಶ್