ಮಡಿಕೇರಿ, ಮೇ ೨೯: ೨೦೧೮ರ ನಂತರ ಜಿಲ್ಲೆಯಲ್ಲಿ ಪ್ರತಿ ಮಳೆಗಾಲದಲ್ಲೂ ಪ್ರಾಕೃತಿಕ ವಿಕೋಪದ ಕರಿಛಾಯೆ ಜನರನ್ನು ಕಾಡಲಾರಂಭಿಸುತ್ತದೆ. ಈ ಬಾರಿಯೂ ಅವಧಿಗೂ ಮುನ್ನವೇ ಮಳೆ ಅಬ್ಬರಿಸಿ, ಬೊಬ್ಬೆರೆಯುತ್ತಿರುವ ಪರಿಣಾಮ ಮೇ ಅಂತ್ಯದಲ್ಲಿಯೇ ಮುನ್ನೆಚ್ಚರಿಕೆ ಕ್ರಮವಾಗಿ ರಾಷ್ಟಿçÃಯ ವಿಪತ್ತು ನಿರ್ವಹಣಾ ಪಡೆ (ಎನ್.ಡಿ.ಆರ್.ಎಫ್.) ಕೊಡಗಿಗೆ ದೌಡಾಯಿಸಿ ಮೊಕ್ಕಾಂ ಹೂಡಿದೆ.

೨೦೧೮ರ ನಂತರ ಮೂರು ವರ್ಷಗಳು ಜಿಲ್ಲೆಯಲ್ಲಿ ವಿಪತ್ತು ಸಂಭವಿಸಿ ದುರಂತಗಳು ನಡೆದಿದ್ದವು. ಸಾವು-ನೋವು, ಹಾನಿಗಳು ವರದಿಯಾಗಿ ಜಿಲ್ಲೆಯನ್ನು ಕಂಗೆಡಿಸಿತ್ತು. ಈ ವರ್ಷವೂ ಮಳೆ ಬಿರುಸು ಪಡೆದುಕೊಂಡು ಭಯ ಸೃಷ್ಟಿಸಿರುವ ಹಿನ್ನೆಲೆ ಪ್ರತಿ ವರ್ಷ ಜೂನ್ ಮೊದಲ ಅಥವಾ ೨ನೇ ವಾರದಲ್ಲಿ

(ಮೊದಲ ಪುಟದಿಂದ) ಬರುತ್ತಿದ್ದ ಎನ್.ಡಿ.ಆರ್.ಎಫ್. ಈ ಬಾರಿ ಮೇ ೪ನೇ ವಾರದ ಆರಂಭದಲ್ಲಿಯೇ ಜಿಲ್ಲಾಡಳಿತ ಮನವಿ ಮೇರೆಗೆ ಜಿಲ್ಲೆಗೆ ಆಗಮಿಸಿದೆ.

ಅಗತ್ಯ ಪರಿಕರದೊಂದಿಗೆ ತಂಡ

ಅಗತ್ಯ ರಕ್ಷಣಾ ಪರಿಕರ, ಉಪಕರಣಗಳೊಂದಿಗೆ ಮಡಿಕೇರಿಯ ಮೈತ್ರಿ ಪೊಲೀಸ್ ಭವನದಲ್ಲಿ ವಾಸ್ತವ್ಯ ಹೂಡಿರುವ ೧೦ನೇ ಬೆಟಾಲಿಯನ್ ಎನ್.ಡಿ.ಆರ್.ಎಫ್. ಪಡೆ ವಿಪತ್ತು ಪರಿಸ್ಥಿತಿ ಎದುರಾದಲ್ಲಿ ತಕ್ಷಣ ನೆರವಾಗಲು ಸನ್ನದ್ಧವಾಗಿದೆ.

ಪ್ರವಾಹ, ಭೂಕುಸಿತ, ಕಟ್ಟಡ ಕುಸಿತ ಸೇರಿದಂತೆ ವಿಪತ್ತು ಘಟನೆಗಳು ಸಂಭವಿಸಿದ್ದಲ್ಲಿ ರಕ್ಷಣಾ ಕಾರ್ಯಕ್ಕೆ ಬೇಕಾದ ಲೈಫ್ ಜಾಕೆಟ್, ಮೋಟರ್ ಬೋಟ್, ರ‍್ಯಾಫ್ಟ್, ಸರ್ಚ್ ಲೈಟ್, ಮರ ಕತ್ತರಿಸುವ ಯಂತ್ರ, ಆಕ್ಸಿಜನ್ ಸಿಲಿಂಡರ್, ಹಗ್ಗಗಳು, ಸ್ಟçಚ್ಚರ್, ಜನರೇಟರ್, ಜೀವ ರಕ್ಷಕ ಔಷಧಿಗಳನ್ನು ದಾಸ್ತಾನಿಟ್ಟಿದೆ.

ಅಪಾಯದ ಪ್ರದೇಶಗಳಿಗೆ ತೆರಳಲು ವಾಹನದ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಎನ್.ಡಿ.ಆರ್.ಎಫ್. ವೃತ್ತ ನಿರೀಕ್ಷಕ ಹರಿಶ್ಚಂದ್ರ ಪಾಂಡೆ ನೇತೃತ್ವದ ತಂಡ ಜಿಲ್ಲೆಯಲ್ಲಿ ಬೀಡುಬಿಟ್ಟು ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ.

ಪರಿಣಿತರ ತಂಡ

ಜಿಲ್ಲೆಯಲ್ಲಿರುವ ಎನ್.ಡಿ.ಆರ್.ಎಫ್. ಸದಸ್ಯರಿಗೆ ತರಬೇತಿ ಆರಂಭವಾಗಿದ್ದು, ಯಂತ್ರೋಪಕರಣಗಳ ಬಳಕೆಯನ್ನು ಅಭ್ಯಸಿಸಲಾಗುತ್ತಿದೆ. ಜೊತೆಗೆ ಯಂತ್ರವನ್ನು ಸಮರ್ಪಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಅದರ ಸುಸ್ಥಿತಿಗಳ ಮೇಲೆ ಹೆಚ್ಚಿನ ನಿಗಾವಹಿಸಲಾಗಿದೆ.

ಪರಿಣಿತಿ ಹೊಂದಿರುವ ೩೦ ಯೋಧರ ತಂಡ ಯಾವುದೇ ಕ್ಷಣದಲ್ಲಾದರೂ ಪ್ರಾಕೃತಿಕ ವಿಕೋಪ ಎದುರಿಸಲು ಸನ್ನದ್ಧವಾಗಿದ್ದು, ಮೇಲಧಿಕಾರಿಗಳು ಅವರಿಗೆ ಜಿಲ್ಲೆಯ ಪರಿಸ್ಥಿತಿಯನ್ನು ವಿವರಿಸಿ ತರಬೇತಿ ನೀಡಿ ಮಾನಸಿಕವಾಗಿ ತಯಾರು ಮಾಡುತ್ತಿದ್ದಾರೆ. ಯೋಧರ ತಂಡ ಈಗಾಗಲೇ ದೇಶದ ಹಲವು ಕಡೆಗಳಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಕೆಲಸ ಮಾಡಿರುವ ಅನುಭವವನ್ನು ಹೊಂದಿದೆ.

ಮರ ಬಿದ್ದು ಸಂಚಾರಕ್ಕೆ ತೊಂದರೆಯಾದಲ್ಲಿ, ನೀರು ತುಂಬಿ ಪ್ರವಾಹ ಪರಿಸ್ಥಿತಿ ತಲೆದೋರಿದರೆ, ಭೂಕುಸಿತ ಸಂಭವಿಸಿದರೆ, ಅಪಾಯ ಎದುರಾದಲ್ಲಿ ತಂಡ ಪ್ರದೇಶಕ್ಕೆ ತೆರಳಿ ಸಮಸ್ಯೆ ಪರಿಹಾರಕ್ಕೆ ಕೆಲಸ ಮಾಡಲಿದ್ದು, ಇವರೊಂದಿಗೆ ಅಗ್ನಿಶಾಮಕ ದಳ, ಪೊಲೀಸ್

ಪಡೆ, ಸ್ವಯಂ ಸೇವಕರು ಜೊತೆಯಾಗಲಿದ್ದಾರೆ.

- ಹೆಚ್.ಜೆ. ರಾಕೇಶ್